ADVERTISEMENT

ಮುಕ್ಕಾಟೀರ ತಂಡಕ್ಕೆ ಭರ್ಜರಿ ಜಯ

ಗೋಣಿಕೊಪ್ಪಲು: ಚೆಕ್ಕೇರ ಕಪ್ ಕ್ರಿಕೆಟ್ ಟೂರ್ನಿ, ಮಹಿಳಾ ವಿಭಾಗ

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:07 IST
Last Updated 14 ಮೇ 2025, 7:07 IST
ಗೋಣಿಕೊಪ್ಪಲು ಬಳಿಯ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದ ಮುಕ್ಕಾಟೀರ ಮತ್ತು ಕಾಣತಂಡ ತಂಡಗಳ ನಡುವಿನ ಪಂದ್ಯ.
ಗೋಣಿಕೊಪ್ಪಲು ಬಳಿಯ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದ ಮುಕ್ಕಾಟೀರ ಮತ್ತು ಕಾಣತಂಡ ತಂಡಗಳ ನಡುವಿನ ಪಂದ್ಯ.   

ಗೋಣಿಕೊಪ್ಪಲು: ಹುದಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಮಹಿಳಾ ವಿಭಾಗದ ಪಂದ್ಯದಲ್ಲಿ ಮುಕ್ಕಾಟೀರ ತಂಡ ಕಾಣತಂಡ ತಂಡದ ವಿರುದ್ಧ 67ರನ್‌‌ಗಳ ಭರ್ಜರಿ ಜಯಗಳಿಸಿತು.

ಮಂಗಳವಾರ ಮುಕ್ಕಾಟೀರ ತಂಡದ ಬ್ಯಾಟಿಂಗ್ ತಾರೆ ಅಂಜನ ಗಳಿಸಿದ 55 ರನ್‌‌‌ಗಳ ಅಮೂಲ್ಯ ಕಾಣಿಕೆಯಿಂದ ತಂಡ 91ರನ್‌‌‌ಗಳ ಉತ್ತಮ ಮೊತ್ತ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಕಾಣತಂಡ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 24 ರನ್‌‌ ಗಳಿಸಿ ಹೀನಾಯ ಸೋಲು ಅನುಭವಿಸಿತು.

2ನೇ ಪಂದ್ಯದಲ್ಲಿ ಓಡಿಯಂಡ ತಂಡ ಅಜ್ಜಿಕುಟ್ಟೀರ ತಂಡದ ಎದುರು 10 ವಿಕೆಟ್‌‌‌‌‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಅಜ್ಜಿಕುಟ್ಟೀರ ತಂಡ ನಿಗದಿತ 6 ಓವರ್‌‌‌‌ಗಳಲ್ಲಿ 35 ರನ್ ಗಳಿಸಿತು.

ADVERTISEMENT

ಸುಲಭದ ಗುರಿ ಬೆನ್ನಟ್ಟಿದ ಓಡಿಯಂಡ ತಂಡ ಕೇವಲ 1.3 ಓವರ್‌‌‌‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 39 ರನ್‌‌‌ಗಳಿಸಿ ಗೆಲುವಿನ ನಗೆ ಬೀರಿತು. ಓಡಿಯಂಡ ತಂಡದ ರೋಹಿಣಿ 6 ಬಾಲ್‌‌‌ಗಳಲ್ಲಿ 26 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.

3ನೇ ಮಣವಟ್ಟೀರ ತಂಡ ಚೊಟ್ಟೆಯಂಡಮಾಡ ತಂಡವನ್ನು 23 ರನ್‌‌‌‌ಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಣವಟ್ಟೀರ ತಂಡ ನೀಡಿದ 53 ರನ್‌‌‌‌ಗಳ ಗುರಿ ಬೆನ್ನತ್ತಲಾಗದ ಚೊಟ್ಟೆಯಂಡಮಾಡ ತಂಡ ಕೇವಲ 30 ರನ್‌‌‌‌ಗಳಿಸಲಷ್ಟೇ ಶಕ್ತವಾಯಿತು.

ಪುರುಷರ ವಿಭಾಗ: ಬೊಟ್ಟಂಗಡ ತಂಡ ಉಳುವಂಗಡ ತಂಡದ ವಿರುದ್ಧ 68 ರನ್‌‌‌‌ಗಳಿಂದ ಜಯ ದಾಖಲಿಸಿತು. ಉಳುವಂಗಡ ತಂಡಕ್ಕೆ ನೀಡಿದ 109 ರನ್‌‌‌ಗಳ ಗೆಲುವಿನ ಗುರಿ ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ 41 ರನ್‌‌‌‌ಗಳಿಗೆ ನಿಯಂತ್ರಿಸಿತು. ಇದರಿಂದ ಬೊಟ್ಟಂಗಡ ತಂಡಕ್ಕೆ ಸುಲಭ ಜಯ ದಕ್ಕಿತು.

ಓಡಿಯಂಡ ತಂಡ ಕೊಟ್ಟಂಗಡ ತಂಡದ ಎದುರು 7 ವಿಕೆಟ್‌‌‌‌ಗಳಿಂದ ಜಯಗಳಿಸಿತು. ಕೊಳುಮಾಡಂಡ ತಂಡ ಅಮ್ಮಾಟಂಡ ತಂಡದ ವಿರುದ್ಧ 6 ವಿಕೆಟ್‌‌‌ಗಳಿಂದ ಜಯ ಸಾಧಿಸಿದರೆ, ಕರೋಟೀರ ತಂಡ ಅಣ್ಣಳಮಾಡ ತಂಡದ ವಿರುದ್ಧ 10 ವಿಕೆಟ್‌‌‌‌ಗಳಿಂದ ಜಯಗಳಿಸಿತು.

ಅಳಮೇಂಗಡ ತಂಡ ನಂದೀರ ತಂಡವನ್ನು 9 ವಿಕೆಟ್‌‌‌‌ಗಳಿಂದ ಮಣಿಸಿದರೆ, ಆತಿಥೇಯ ಚೆಕ್ಕೇರ ತಂಡ ಮಕ್ಕಾಟೀರ (ಕಡಗದಾಳು) ತಂಡವನ್ನು 28 ರನ್‌‌‌‌ಗಳಿಂದ ಮಣಿಸಿತು. ದಿನದ ಅಂತಿಮ ಪಂದ್ಯದಲ್ಲಿ ನೆರವಂಡ ತಂಡ ಬಲ್ಲಂಡ ತಂಡದ ಎದುರು 19 ರನ್‌‌‌ಗಳಿಂದ ಜಯಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.