ADVERTISEMENT

ಸೋಮವಾರಪೇಟೆ | ‘ಸಮಸ್ಯೆ ಪರಿಹರಿಸಿ ಅಭಿವೃದ್ಧಿಗೆ ಒತ್ತು’: ಶಾಸಕ ಡಾ. ಮಂತರ್ ಗೌಡ

ತಾಲ್ಲೂಕಿನ ಕೊತ್ನಳ್ಳಿ ಗ್ರಾಮಸ್ಥರೊಂದಿಗಿನ ಸಭೆಯಲ್ಲಿ ಶಾಸಕ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:41 IST
Last Updated 19 ಆಗಸ್ಟ್ 2025, 2:41 IST
ಸೋಮವಾರಪೇಟೆ ತಾಲ್ಲೂಕಿನ ಕೊತ್ನಳ್ಳಿಯ ಸಮುದಾಯ ಭವನದಲ್ಲಿ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಯಿತು
ಸೋಮವಾರಪೇಟೆ ತಾಲ್ಲೂಕಿನ ಕೊತ್ನಳ್ಳಿಯ ಸಮುದಾಯ ಭವನದಲ್ಲಿ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಯಿತು   

ಸೋಮವಾರಪೇಟೆ: ತಾಲ್ಲೂಕಿನ ಕೊತ್ನಳ್ಳಿಯ ಸಮುದಾಯ ಭವನದಲ್ಲಿ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ಈಚೆಗೆ ನಡೆಯಿತು.

ತಾಲ್ಲೂಕಿನ ಗಡಿ ಭಾಗದಲ್ಲಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ, ನಗರಳ್ಳಿ, ನಡ್ಲಕೊಪ್ಪ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಜನರು ಸಮಸ್ಯೆಗಳ ನಡುವೆ ಜೀವನ ನಡೆಸಲಾಗುತ್ತಿದೆ. ಈ ಭಾಗದಲ್ಲಿ ಉತ್ತಮ ರಸ್ತೆಗಳಿಲ್ಲ. ಬೆಟ್ಟಗುಡ್ಡಗಳಿಂದ ಕೂಡಿರುವ ಇಲ್ಲಿ ಈಗಾಗಲೇ ಹೆಚ್ಚಿನ ಮಳೆಯಾದ ವರದಿಯಾಗಿದೆ. ಕಾಫಿ, ಕಾಳು ಮೆಣಸು ಸೇರಿದಂತೆ ಶೀತ ಹೆಚ್ಚಾದ ಪರಿಣಾಮ ನಷ್ಟವಾಗಿದೆ. ಸಿ ಮತ್ತು ಡಿ ಹಾಗೂ ಸೆಕ್ಷನ್ 4 ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆ ಪರಿಹರಿಸಬೇಕೆಂದು ಮುಖಂಡ ರಾಜೇಶ್ ಶಾಸಕರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ ನಂತರ ಮಾತನಾಡಿ, ಸಿ ಮತ್ತು ಡಿ ಮತ್ತು ಸೆಕ್ಷನ್ 4, ಕಂದಾಯ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಗೂಗಲ್ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ ಪರಿಣಾಮ ಸಮಸ್ಯೆಯಾಗಿ ಪರಿಣಮಿಸಿದೆ. ಯಾವ ರೈತರನ್ನು ಒಕ್ಕೆಲೆಬ್ಬಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿಲ್ಲ. ತಕ್ಷಣಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಅರಣ್ಯ, ಕಂದಾಯ ಮತ್ತು ಸಂಬಂಧಿಸಿದ ರೈತರನ್ನು ಸೇರಿಸಿ ಜಂಟಿ ಸರ್ವೆ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಈ ಭಾಗದಲ್ಲಿ ರಸ್ತೆಗಳು ಹಾಳಾಗಿರುವುದು ಮತ್ತು ಚಿಕ್ಕ ರಸ್ತೆಗಳಿರುವುದು ಕಂಡುಬಂದಿದೆ. ಈಗಾಗಲೇ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಮಳೆಗಾಲ ಮುಗಿದ ನಂತರ ಡಿಸೆಂಬರ್ ತಿಂಗಳಿನಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಕೃಷಿ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಮಳೆ ಹೆಚ್ಚಾದ ಕಾರಣ ಅಧಿಕಾರಿಗಳು ನಷ್ಟದ ಪರಿಶೀಲನೆ ಮಾಡಲು ಸಾದ್ಯವಾಗುತ್ತಿಲ್ಲ ಎಂದರು.

ಈ ಭಾಗದಲ್ಲಿ ಮಲ್ಲಳ್ಳಿ ಜಲಪಾತ, ಪುಷ್ಟಗಿರಿ ಪರ್ವತ ಸೇರಿದಂತೆ ಹಲವಾರು ಪ್ರವಾಸೋದ್ಯಮ ಸ್ಥಳಗಳಿವೆ. ಸಾಕಷ್ಟು ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಪ್ರವಾಸಿ ತಾಣಗಳ ಅಭಿವೃದ್ಧಿಯಾದರೆ, ಗ್ರಾಮದ ಆದಾಯವು ಹೆಚ್ಚಳವಾಗುತ್ತದೆ. ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಶಾಂತಳ್ಳಿಯ ಕೆ.ಎಂ.ಲೋಕೇಶ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಮ್ಯ, ಅಂಗನವಾಡಿ ಶಿಕ್ಷಕಿ ಸುಪ್ರಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.