ADVERTISEMENT

ಕಾಫಿ ನಾಡಿನಲ್ಲಿ ರೇಷ್ಮೆ ಬೆಳೆದು ಯಶಸ್ವಿಯಾದ ರೈತ

ಸಮಗ್ರ ಕೃಷಿ ಪದ್ಧತಿ ಅನುಸರಿಸುವ ಅಪರೂಪದ ಕೃಷಿಕ ಕೂಡ್ಲೂರು ಗ್ರಾಮದ ರಾಮಪ್ಪ ಮತ್ತು ಯೋಗೇಶ್‌

ಕೆ.ಎಸ್.ಗಿರೀಶ್
Published 14 ಮಾರ್ಚ್ 2025, 8:18 IST
Last Updated 14 ಮಾರ್ಚ್ 2025, 8:18 IST
ರೇಷ್ಮ ಹುಳು, ಮೊಟ್ಟೆ, ಚಿಟ್ಟೆ
ರೇಷ್ಮ ಹುಳು, ಮೊಟ್ಟೆ, ಚಿಟ್ಟೆ   

ಮಡಿಕೇರಿ: ಕಾಫಿ ನಾಡೆಂದೇ ಖ್ಯಾತವಾದ ಕೊಡಗು ಜಿಲ್ಲೆಯಲ್ಲಿ ರೇಷ್ಮೆ ಬೆಳೆದು ಯಶಸ್ಸು ಕಂಡಿದ್ದಾರೆ.

ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ರಾಮಪ್ಪ ಹಾಗೂ ಅವರ ಪುತ್ರ ಯೋಗೇಶ್‌. ರೇಷ್ಮೆ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದವರು. ಕೇವಲ ರೇಷ್ಮೆ ಮಾತ್ರವಲ್ಲ ಇವರು ತೆಂಗಿನತೋಟ, ಅಡಕೆ ತೋಟ, ಮೀನುಗಾರಿಕೆ ಹಾಗೂ ಹೈನುಗಾರಿಕೆಯ ಮೂಲಕ ಸಮಗ್ರ ಕೃಷಿ ಪದ್ಧತಿ ಅನುಸರಿಸಿ, ಇತರರಿಗೆ ಮಾದರಿಯೂ ಆಗಿದ್ದಾರೆ.

ಇವರ ಬಳಿ 70 ತೆಂಗಿನಮರಗಳು, 100 ಅಡಕೆ ಮರಗಳು, ಒಂದು ಮೀನು ಸಾಕುವ ಹೊಂಡ ಹಾಗೂ 3 ಹಸುಗಳಿವೆ.

ADVERTISEMENT

2021ರ ನಂತರ ಇವರು ಆರಂಭಿಸಿದ ರೇಷ್ಮೆಗಾರಿಕೆ ಇವರ ಕೈ ಹಿಡಿದಿದೆ. ಮಾತ್ರವಲ್ಲ, ಯಶಸ್ಸಿನತ್ತ ಸಾಗುವಂತೆ ಮಾಡಿದೆ.

ಯೋಗೇಶ್ ಅವರೇ ಹೇಳುವಂತೆ ಕೇವಲ ಒಂದೂಕಾಲು ಎಕರೆ ಪ್ರದೇಶದಲ್ಲಿ ಮಾತ್ರವೇ ಇವರು ರೇಷ್ಮೆ ಕೃಷಿ ನಡೆಸಿರುವುದು. ಅಷ್ಟರಲ್ಲೇ ಇವರು ಒಂದು ವರ್ಷದಲ್ಲಿ 800 ಕೆ.ಜಿಗೂ ಅಧಿಕ ರೇಷ್ಮೆಗೂಡನ್ನು ಉತ್ಪಾದಿಸುತ್ತಾರೆ.

ರೇಷ್ಮೆ ಹುಳು ಸಾಕಾಣೆಗಾಗಿಯೆ ಇವರು ತಮ್ಮ ಜಮೀನಿನಲ್ಲಿ 20x50 ಅಳತೆಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ಆಧುನಿಕ ಯಂತ್ರೋಪಕರಣ ಅಳವಡಿಸಿ, 2 ಬ್ಯಾಚ್‌ನಲ್ಲಿ ಹುಳು ಸಾಕುತ್ತಿದ್ದಾರೆ.

ಇವರು ಸಾಕುವ ಹುಳು ಸಿಎಸ್‌ಆರ್‌–2 ತಳಿಯದ್ದು. ಇದನ್ನು ಸಾಮಾನ್ಯವಾಗಿ ರೇಷ್ಮೆನೂಲು ತೆಗೆಯಲು ಬಳಸುವುದಿಲ್ಲ. ಚಿಟ್ಟೆ ಮಾಡಿ, ಮೊಟ್ಟೆ ಇಡಲೆಂದೇ ಈ ತಳಿಯನ್ನು ಸಾಕಲಾಗುತ್ತದೆ. 26 ದಿನಗಳ ಕಾಲ ಹುಳು ಬೆಳೆದು 7 ದಿನಗಳ ಕಾಲ ಗೂಡು ಕಟ್ಟಿದ ನಂತರ ಇವರು ಇಂತಹ ತಳಿಗಳಿಗೆಂದೇ ಇರುವ ಹಾಸನ, ತುಮಕೂರು, ಬೆಂಗಳೂರು ರೇಷ್ಮೆ ಮಾರುಕಟ್ಟೆಗಳಲ್ಲಿ ದರ ಹೆಚ್ಚು ಸಿಗುವ ಕಡೆ ಮಾರಾಟ ಮಾಡುತ್ತಾರೆ.

ಒಂದು ಕೆ.ಜಿ ರೇಷ್ಮೆ ಗೂಡಿಗೆ ಕನಿಷ್ಠ ಎಂದರೂ ₹ 600, ಗರಿಷ್ಠ ಎಂದರೆ ₹ 4–5 ಸಾವಿರದವರೆಗೂ ಸಿಗುತ್ತದೆ ಎಂದು ಅವರು ಹೇಳುತ್ತಾರೆ.

ರೇಷ್ಮೆ ಹುಳುವಿಗೆ ಉಷ್ಣತೆ ಅತಿ ಮುಖ್ಯ. ಅದರಲ್ಲೂ 20ರಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಇಲ್ಲದೇ ಇದ್ದರೆ ಕಾಯಿಲೆಗೆ ಸಿಲುಕಿ ಹುಳುಗಳು ಸಾಯುತ್ತವೆ ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ.

ಸದ್ಯ, ಅವರು ಮನೆಯ ಚಾವಣಿಯ ಮೇಲೆ ತುಂತುರು ನೀರಾವರಿಯ ಮೂಲಕ ಬೇಸಿಗೆಯ ಅಧಿಕ ತಾಪಮಾನವನ್ನು ನಿಯಂತ್ರಿಸುತ್ತಾರೆ. ಮಳೆ ಮತ್ತು ಚಳಿಗಾಲದಲ್ಲಿ ಹೀಟರ್ ಮೂಲಕ ತಾಪಮಾನ ನಿಯಂತ್ರಿಸುತ್ತಾರೆ.

ಈಚೆಗೆ ಕೃಷಿ ಇಲಾಖೆಯ ತಂಡ ರಮೇಶ್ ಮತ್ತು ಅವರ ಪುತ್ರ ಯೋಗೇಶ್ ಅವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡ ಪರಿಶೀಲಿಸಿತು
1.25 ಎಕರೆ ಪ್ರದೇಶದಲ್ಲಿ ಯಶಸ್ವಿ ರೇಷ್ಮೆ ಕೃಷಿ ತಂದೆ ಮಗನ ಸಾಧನೆಗೆ ಅಧಿಕಾರಿಗಳೇ ಅಚ್ಚರಿ ರೇಷ್ಮೆ ಜೊತೆಗೆ ಇವೆ ಕಾಫಿ, ಅಡಿಕೆ, ಮೀನುಗಾರಿಕೆ, ಹೈನುಗಾರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.