ADVERTISEMENT

‘ಹೆಣ್ಣು ತನ್ನ ಹಕ್ಕಿಗಾಗಿ ಹೋರಾಡಬೇಕಿದೆ’

ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ಎಚ್.ಎಸ್. ಸುನಂದ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:05 IST
Last Updated 28 ಅಕ್ಟೋಬರ್ 2025, 5:05 IST
ವಿರಾಜಪೇಟೆಯಲ್ಲಿ ಸಿಐಟಿಯುನ ಜಿಲ್ಲಾ ಸಮಿತಿ ವತಿಯಿಂದ ಈಚೆಗೆ ನಡೆದ ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ದುಡಿಯುವ ಮಹಿಳೆಯರ ಸಂಘಟನೆಯ ರಾಜ್ಯ ಸಂಚಾಲಕಿ ಎಚ್.ಎಸ್. ಸುನಂದ ಅವರು ಮಾತನಾಡಿದರು
ವಿರಾಜಪೇಟೆಯಲ್ಲಿ ಸಿಐಟಿಯುನ ಜಿಲ್ಲಾ ಸಮಿತಿ ವತಿಯಿಂದ ಈಚೆಗೆ ನಡೆದ ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ದುಡಿಯುವ ಮಹಿಳೆಯರ ಸಂಘಟನೆಯ ರಾಜ್ಯ ಸಂಚಾಲಕಿ ಎಚ್.ಎಸ್. ಸುನಂದ ಅವರು ಮಾತನಾಡಿದರು   

ವಿರಾಜಪೇಟೆ: ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ದಿ ಸಾಧಿಸುತ್ತಿದ್ದಾರೆ. ವಿಶೇಷವಾಗಿ ಹೆಣ್ಣು ಶಿಕ್ಷಣ ಪಡೆದರೆ ಮಾತ್ರ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸಲು ಸಾಧ್ಯ ಎಂದು ದುಡಿಯುವ ಮಹಿಳೆಯರ ಸಂಘಟನೆಯ ರಾಜ್ಯ ಸಂಚಾಲಕಿ ಎಚ್.ಎಸ್. ಸುನಂದ ಅವರು ಅಭಿಪ್ರಾಯಪಟ್ಟರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು)ನ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಈಚೆಗೆ ನಡೆದ ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಣ್ಣು ಇಂದು ಬೀದಿಯಲ್ಲಿ ಕಸ ತೆಗೆಯುವ, ತನ್ನದಲ್ಲದ ಮನೆಗಳಲ್ಲಿ ಕಸಮುಸುರೆ ಸ್ವಚ್ಛತೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಹೀಗೆ ಹೆಣ್ಣು ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಹಿಂದಿನಿಂದಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಕೆಲಸಕ್ಕೆ ಕೂಲಿ ಪಡೆದರೂ ಆದಾಯದ ಪಾಲು ಬಳಸಲು ಹಕ್ಕು ಇಲ್ಲದವಳಾಗಿದ್ದಾಳೆ. ಇಂದು ಹೆಣ್ಣು ತನ್ನ ಹಕ್ಕಿಗಾಗಿ ಹೋರಾಡಬೇಕಿದೆ ಎಂದರು.

ADVERTISEMENT

ತಾನು ದುಡಿಯುವ ಸ್ಥಳಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದರೆ ಅದನ್ನು ಖಂಡಿಸಬೇಕು. ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗೆ ನಿಗದಿಪಡಿಸಬೇಕು. ಹೆಣ್ಣುಮಕ್ಕಳು ಇಂದಿಗೂ ಅಪಾಯಕಾರಿ ಸ್ಥಳಗಳಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಜೀವಕ್ಕೆ ಬೆಲೆ ಕೊಡದ ಸಮಾಜವನ್ನು ಎದುರು ಹಾಕಿಕೊಂಡು ಸಮಾನತೆಯ ಆಶಯಗಳ ಈಡೇರಿಕೆಗೆ ಹೋರಾಡುತ್ತಲೇ ನಮ್ಮ ತನವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.

ಸಿ.ಐ.ಟಿ.ಯುನ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆಯರ ದುಡಿಮೆ, ಶ್ರಮ ಪರಿಗಣನೆ ಆಗುತ್ತಿಲ್ಲ. ಕೆಲಸ ಮಾಡುವ ವಿಭಿನ್ನ ವಲಯಗಳಾದ ಉತ್ಪಾದನೆ, ಕೃಷಿ, ಸೇವಾ ವಲಯಗಳಲ್ಲಿ ಮಹಿಳೆಯರಿಗೆ ಅನೇಕ ಅಡೆತಡೆಗಳಿವೆ. ಇವೇ ತಾರತಮ್ಯಗಳು ಮತ್ತು ದೌರ್ಜನ್ಯಕ್ಕೂ ಕಾರಣಗಳಾಗಿವೆ ಎಂದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ ಅವರು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸಂಘಟಿತ, ಅಸಂಘಟಿತ ವಲಯ, ಸೇವಾ ವಲಯಗಳ ಕೆಲಸಗಳಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮ, ಆದಿವಾಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಪ್ರೇಮ, ಕಾಫಿ ಕ್ಯೂರಿಂಗ್ ವರ್ಕ್ಸ್‌ನ ಜಿಲ್ಲಾಧ್ಯಕ್ಷ ಮಂಜು ಹಾಗೂ ಮುಖಂಡರಾದ ಪುಷ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ವೇದಿಕೆಯಲ್ಲಿದ್ದರು. ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.