
ಸುಂಟಿಕೊಪ್ಪ: ‘ಸಮಾಜಕ್ಕೆ ಪೂರಕವಾಗಿ ಬಾಳಬೇಕು ಹೊರತು, ಮಾರಕವಾಗಿಯಲ್ಲ’ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ 2040ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮದ್ಯಪಾನದ ಸಾಧಕ ಬಾಧಕಗಳನ್ನು ಆರಿತ ಜನ ಶಿಬಿರಗಳ ಯಶಸ್ವಿಗೆ ಕೊಡಗಿನಲ್ಲಿಯೂ ಅತ್ಯಂತ ಯಶಸ್ವಿಯಾಗಿ ಕೈಜೋಡಿಸಿದ್ದಾರೆ. ಶಿಬಿರದಲ್ಲಿ ಪಾಲ್ಗೊಂಡವರು ಮದ್ಯವರ್ಜನ ಮಾಡುವಂತೆ ಪ್ರೋತ್ಸಾಹಿಸಬೇಕೆಂದು’ ಎಂದರು.
ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಯೋಚಿಸಿ ಕುಡಿತಕ್ಕೆ ಖರ್ಚು ಮಾಡುವ ಹಣವನ್ನು ಸಂಸಾರ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಜೆಟ್ ಆಗಿ ಮಾರ್ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ಈ ಶಿಬಿರವು ವೈಶಿಷ್ಟ್ಯ ಪೂರ್ಣವಾಗಿದ್ದು, ಇಂತಹ ಸಮಾಜಮುಖಿ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಮಾತನಾಡಿ, ಮದ್ಯಪಾನವು ಸಾಮಾಜಿಕ ಪಿಡುಗಾಗಿದ್ದು, ಯುವಶಕ್ತಿಯನ್ನು ಹಾಳು ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬೇಕಾದರೆ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಎಲ್ಲಾರಿಗೂ ಒಂದಲ್ಲ ಒಂದು ಹವ್ಯಾಸ, ಚಟಗಳು ಜೀವನದ ಬೇರೆ ಬೇರೆ ಹಂತಗಳಲ್ಲಿ ವಿವಿಧ ಕಾರಣಗಳಿಂದ ಹಂಚಿಕೊಳ್ಳುತ್ತವೆ. ಆದರೆ ಚಟಗಳು ದುಶ್ಚಟಗಳಾಗಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು.
ಸುಂಟಿಕೊಪ್ಪ ಹೋಬಳಿ ಉಪತಹಶೀಲ್ದಾರ್ ಕೆ.ಎಂ.ದೀಪಿಕಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕುಮಾರ್, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಉಪಾಧ್ಯಕ್ಷ ಬಿ.ಸಿ.ದಿನೇಶ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಕೆದಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಕಂಬಿಬಾಣೆ ಗ್ರಾಮ ಪಂಚಾಯಿತಿ ಸದಸ್ಯೆ ಮಧುನಾಗಪ್ಪ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾ, ಮಂಜುಳಾ, ಪ್ರಾದೇಶಿಕ ವಲಯಾಧಿಕಾರಿ ಪುರುಷೋತ್ತಮ ಇದ್ದರು.
ಶಿಬಿರಾಧಿಕಾರಿ ದಿನೇಶ್ ಮರಾಠೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.