ADVERTISEMENT

ಕುಶಾಲನಗರ: ಮದ್ಯವರ್ಜನ ಶಿಬಿರಾರ್ಥಿಗಳಿಂದ ಕಾವೇರಿ ನದಿಗೆ ಆರತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:48 IST
Last Updated 25 ಜುಲೈ 2025, 2:48 IST
ಕುಶಾಲನಗರದಲ್ಲಿ ನಡೆಯುತ್ತಿರುವ 1954ನೇ ಮದ್ಯವರ್ಜನ ಶಿಬಿರದ 7ನೇ ದಿನ ಅಂಗವಾಗಿ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳು ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು 
ಕುಶಾಲನಗರದಲ್ಲಿ ನಡೆಯುತ್ತಿರುವ 1954ನೇ ಮದ್ಯವರ್ಜನ ಶಿಬಿರದ 7ನೇ ದಿನ ಅಂಗವಾಗಿ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳು ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು    

ಕುಶಾಲನಗರ: ಇಲ್ಲಿನ ಕೊಡವ ಸಮಾಜದ ಆವರಣದಲ್ಲಿ ನಡೆಯುತ್ತಿರುವ 1954ನೇ ಮದ್ಯವರ್ಜನ ಶಿಬಿರದ 7ನೇ ದಿನ ಅಂಗವಾಗಿ ಕಾವೇರಿ ಮಹಾ ಆರತಿ ಬಳಗ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ ಮಧ್ಯವರ್ಜನ ಶಿಬಿರದ ಶಿಬಿರಾರ್ಥಿಗಳು ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕಾವೇರಿಗೆ ಆರತಿ ಬೆಳಗಿದರು.

ಪಟ್ಟಣದ ಕೊಡವ ಸಮಾಜದಿಂದ ಹೊರಟು ರಥಬೀದಿಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಶಿಬಿರಾರ್ಥಿಗಳು ಮದ್ಯ ವ್ಯಸನದಿಂದ ಆಗುವ ದುಷ್ಪರಿಣಾಮದ ಕುರಿತು ಭಿತ್ತಿಫಲಕಗಳನ್ನು ಹಿಡಿಯುವುದರೊಂದಿಗೆ ಘೋಷಣೆ ಕೂಗಿದರು.
ನಂತರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್ ಮಾತನಾಡಿ, ‘ಮನುಷ್ಯ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನು ಕಬಳಿಸುವ ಶಕ್ತಿ ವ್ಯಸನಕ್ಕಿದೆ’ ಎಂದರು.

ADVERTISEMENT

ಕಾವೇರಿ ಮಹಾಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತನಾಡಿ, ‘ಕುಡಿತಕ್ಕೆ ದಾಸರಾದವರು ಸಮಾಜ, ಕುಟುಂಬ, ನೆಮ್ಮದಿಯ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

ಮೆರವಣಿಗೆ ಮೂಲಕ ತಂದ ಮದ್ಯ ರಾಕ್ಷಸನ ಅಣುಕು ಶವವನ್ನು ಸುಟ್ಟ ಮಧ್ಯವರ್ಜನ ಶಿಬಿರಾರ್ಥಿಗಳು ಮುಂದಿನ ಜೀವನದಲ್ಲಿ ಮದ್ಯ ಮುಕ್ತರಾಗುವ ಬಗ್ಗೆ ಪ್ರತಿಜ್ಞೆ ಮಾಡಿದರು.

ಧರ್ಮಸ್ಥಳ ಯೋಜನೆಯ ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ನಾಗರಾಜು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಎಸ್.ರಾಜಶೇಖರ್, ಮದ್ಯವರ್ಜನ ಉಸ್ತುವಾರಿ ಅಧಿಕಾರಿ ನಂದಕುಮಾರ್ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಧರಣಿ ಸೋಮಯ್ಯ, ಚೈತನ್ಯ, ಮಧ್ಯವರ್ಜನ ಶಿಬಿರದ 50 ಕ್ಕೂ ಅಧಿಕ ಶಿಬಿರಾರ್ಥಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು, ನವ ಜೀವನ ಸಮಿತಿ ಸದಸ್ಯರು ಇದ್ದರು.

ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಉಸ್ತುವಾರಿ ಅಧಿಕಾರಿ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.