ಮಡಿಕೇರಿ: ‘ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಚರ್ಚೆ ನಡೆಸಲಾಗುವುದು. ಕಂದಾಯ ಕಾಯ್ದೆಗಳಿಗೆ ಸಂಬಂಧಿಸಿ ಕೆಲವು ತಿದ್ದುಪಡಿಗಳು ಆಗಬೇಕಿದ್ದು, ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.
ತಮ್ಮ 51ನೇ ಜನ್ಮದಿನದ ಪ್ರಯುಕ್ತ ಕುಟುಂಬದವರೊಂದಿಗೆ ಇಲ್ಲಿನ ತಲಕಾವೇರಿ ಹಾಗೂ ಭಗಂಡೇಶ್ವರ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಯುವಲ್ಲಿಯೂ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ ಎಂದರು.
‘ಕೊಡಗಿನ ಜನತೆ ಹಾಗೂ ನಾಡಿನ ಜನರಿಗೆ ಸಮೃದ್ಧಿ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.
ಇದಕ್ಕೂ ಮುನ್ನ ಅವರು, ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿ ಹಾಗೂ ಪವಿತ್ರ ಕ್ಷೇತ್ರ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ, ಮಹಾಸಂಕಲ್ಪ ಪ್ರಾರ್ಥನೆ ನೆರವೇರಿಸಿದರು.
ಮಹಾ ಗಣಪತಿಗೆ ಪೂಜೆ, ಭಗಂಡೇಶ್ವರ ದೇವಾಲಯ, ಮಹಾವಿಷ್ಣು ಮತ್ತು ಸುಬ್ರಮಣ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಲಕಾವೇರಿಗೆ ತೆರಳಿ ಕುಂಕುಮಾರ್ಚನೆ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ದೇಗುಲದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಎ.ಎಸ್.ಪೊನ್ನಣ್ಣ ಅವರ ಪತ್ನಿ ಕಾಂಚನ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಭಾಗವಹಿಸಿದ್ದರು.
ಇಡೀ ದಿನ ಹಲವೆಡೆ ಭೇಟಿ ನೀಡಿದ ಶಾಸಕ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ | ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ
ಅಂಬೇಡ್ಕರ್ ವಸತಿ ಶಾಲೆಗೆ ಆಟದ ಮೈದಾನ; ಭರವಸೆ
ನಾಪೋಕ್ಲು: ಶಾಸಕ ಎ.ಎಸ್.ಪೊನ್ನಣ್ಣ ಅವರು ಇಲ್ಲಿನ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ತಮ್ಮ 51ನೇ ಜನ್ಮದಿನ ಆಚರಿಸಿಕೊಂಡರು. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಹಂಚಿದರು. ಈ ವೇಳೆ ಮಾತನಾಡಿದ ಪೊನ್ನಣ್ಣ ‘ಹೆಚ್ಚಿನ ವಿದ್ಯಾರ್ಥಿಗಳು ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಟದ ಮೈದಾನ ಖಂಡಿತ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು. ‘ಕಾನೂನು ಪದವಿಯನ್ನು ಸರ್ಕಾರಿ ಕಾಲೇಜಿನಲ್ಲಿ ಕಲಿತಿದ್ದೇನೆ. ಲಭ್ಯವಿರುವ ಅವಕಾಶ ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು’ ಎಂದರು. ಪೊನ್ನಣ್ಣ ಅವರ ಪತ್ನಿ ಕಾಂಚನ್ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಉಪಾಧ್ಯಕ್ಷ ಶಶಿ ಮಂದಣ್ಣ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ನೀತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಭಾಗವಹಿಸಿದ್ದರು. ಬಳಿಕ ಅವರು ಬೇತು ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಿ ಹುಟ್ಟುಹಬ್ಬ ಆಚರಿಸಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು.
ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಬಸ್ ಸಂಚಾರಕ್ಕೆ ಚಾಲನೆ
ನಾಪೋಕ್ಲು: ಮಡಿಕೇರಿ-ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ಹಾಗೂ ಮೈಸೂರು-ವಿರಾಜಪೇಟೆ-ಕೆದಮುಳ್ಳೂರು-ಯಡಪಾಲ-ನಾಪೋಕ್ಲು-ಮಡಿಕೇರಿ ಮಾರ್ಗದ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಬುಧವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ‘ಬೆಳಿಗ್ಗೆ 7 ಗಂಟೆಗೆ ಮಡಿಕೇರಿಯಿಂದ ಹೊರಟು ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗದಲ್ಲಿ ವಾಪಸ್ ಬರಲಿದೆ’ ಎಂದು ಹೇಳಿದರು. ಹಲವು ವರ್ಷಗಳಿಂದ ಸ್ಥಳೀಯರು ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಈಗ ಅವರ ಬೇಡಿಕೆ ಈಡೇರಿದೆ ಎಂದರು. ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮರಲಿಂಗಯ್ಯ ವಿಭಾಗೀಯ ಸಂಚಲನಾಧಿಕಾರಿ ಜಯ ಶಾಂತಕುಮಾರ್ ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ಎಂ.ಮೆಹಬೂಬ್ ಅಲಿ ಭಾಗವಹಿಸಿದ್ದರು. ನಂತರ ಅವರು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಉಪಾಧ್ಯಕ್ಷ ಶಶಿ ಮಂದಣ್ಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.