ADVERTISEMENT

ಕೊಡಗಿನ ಅನುವಾದ ಕ್ಷೇತ್ರಕ್ಕೊಂದು ಮಹತ್ವದ ಕೃತಿ ಸೇರ್ಪಡೆ

ಐಚಂಡ ರಶ್ಮಿ ಮೇದಪ್ಪ ಅವರ ‘ಕೊಡಗ್ ಸಂಸ್ಥಾನ – ಬ್ರಿಟಿಷ್ ಸಾಮ್ರಾಜ್ಯ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:01 IST
Last Updated 23 ನವೆಂಬರ್ 2025, 5:01 IST
ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರ ‘ಕೊಡಗ್ ಸಂಸ್ಥಾನ– ಬ್ರಿಟಿಷ್ ಸಾಮ್ರಾಜ್ಯ ಕೊಡವ ಅನುವಾದ ಕೃತಿ ಬಿಡುಗಡೆಗೊಂಡಿತು.
ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರ ‘ಕೊಡಗ್ ಸಂಸ್ಥಾನ– ಬ್ರಿಟಿಷ್ ಸಾಮ್ರಾಜ್ಯ ಕೊಡವ ಅನುವಾದ ಕೃತಿ ಬಿಡುಗಡೆಗೊಂಡಿತು.   

ಮಡಿಕೇರಿ: ಕೊಡವ ಭಾಷೆಗೆ ಇತರ ಭಾಷೆಗಳ ಕೃತಿಗಳು ಇನ್ನಷ್ಟು ಭಾಷಾಂತರವಾಗಬೇಕು ಎಂದು ಲೇಖಕಿ ಹಾಗೂ ಅನುವಾದಕಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯಪಟ್ಟರು.

ಕೊಡವ ಮಕ್ಕಡ ಕೂಟದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‌ತಮ್ಮ ‘ಕೊಡಗ್ ಸಂಸ್ಥಾನ – ಬ್ರಿಟಿಷ್ ಸಾಮ್ರಾಜ್ಯ’ ಎಂಬ ಕೊಡವ ಅನುವಾದ ಕೃತಿ ಬಿಡುಗಡೆಯಾದ ಬಳಿಕ ಅವರು ಮಾತನಾಡಿದರು.

ಕೊಡವ ಭಾಷೆಯಲ್ಲಿ ಅನುವಾದ ಕೃತಿಗಳು ಬೆರಳೆಣಿಕೆಯಷ್ಟಿವೆ. ಆದಾಗ್ಯೂ, ಕೊಡಗಿನ ಸಾಕಷ್ಟು ಮಂದಿ ಅನುವಾದ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಅನುವಾದಕರಿಗೂ ಮಹತ್ವ ಇದೆ ಎಂಬುವುದನ್ನು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಭಾಸ್ತಿಯವರು ತೋರಿಸಿಕೊಟ್ಟಿದ್ದಾರೆ ಎಂದ ಅವರು, ಭಾಷಾಂತರದಿಂದ ಕೃತಿಗಳು ಹೆಚ್ಚು ಹೆಚ್ಚು ಜನರನ್ನು ತಲುಪುತ್ತವೆ ಎಂದು ತಿಳಿಸಿದರು.

ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅನುವಾದ ಕೃತಿ ಎರಡು ಕಾಲಘಟ್ಟ, ಸಂಸ್ಕೃತಿ ಮತ್ತು ಎರಡು ಭಾಷೆಗಳ ನಡುವೆ ಸಂಪರ್ಕ ಸೇತುವೆಯ ರಾಯಭಾರಿಯಾಗಿ ಕೆಲಸ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಕೊಡಗ್ ಸಂಸ್ಥಾನ – ಬ್ರಿಟಿಷ್ ಸಾಮ್ರಾಜ್ಯ ಪುಸ್ತಕವು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಅವರು ‌ಇಂಗ್ಲಿಷ್‌ನಲ್ಲಿ ಬರೆದ ‘ಕೊಡಗು ಸಂಸ್ಥಾನ–ಬ್ರಿಟಿಷ್ ಸಾಮ್ರಾಜ್ಯ’ ಪುಸ್ತಕದ ಅನುವಾದವಾಗಿದೆ. ಇದು ನನ್ನ 5ನೇ ಪುಸ್ತಕ ಎಂದರು.

ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ‘ಅನುವಾದ ಎಂಬುದು ಸುಲಭದ ಮಾತಲ್ಲ. ಆದರೂ ಪುಸ್ತಕದ ಮೂಲ ಕೃತಿಗೆ ಚ್ಯುತಿ ಬಾರದ ರೀತಿಯಲ್ಲಿ ಪುಸ್ತವನ್ನು ಕೊಡವ ಭಾಷೆಗೆ ತರ್ಜಮೆ ಮಾಡಲಾಗಿದೆ’ ಎಂದು ಶ್ಲಾಘಿಸಿದರು.

ಪುಸ್ತಕದ ಮೂಲ ಕೃತಿ ರಚನೆಯ ಸಂದರ್ಭ ಅನೇಕ ಗ್ರಂಥಾಲಯಗಳು ಹಾಗೂ ವಿವಿಧಡೆಯಿಂದ ಸಂಶೋಧನೆ ನಡೆಸಲಾಗಿದೆ. ಇತಿಹಾಸ ಮಾತ್ರವಲ್ಲದೆ, ಮಕ್ಕಳ ಕಥೆಗಳ ಪುಸ್ತಕವನ್ನು ಬರೆಯಲಾಗಿದೆ ಎಂದು ತಿಳಿಸಿದರು. 

ಗಹಗಹನಿವೃತ್ತ ಸೇನಾಧಿಕಾರಿ ಕರ್ನಲ್ ಕೊಡಂದೇರ ಉತ್ತಯ್ಯ, ಸಾಹಿತಿ ಮೂಕೊಂಡ ಪುಷ್ಪ ದಮಯಂತಿ ಪೂಣಚ್ಚ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಭಾಗವಹಿಸಿದ್ದರು.

ಕೊಡವ ಮಕ್ಕಡ ಕೂಟದಿಂದ 121 ಪುಸ್ತಕಗಳು

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಕೊಡವ ಮಕ್ಕಡ ಕೂಟದಿಂದ ಇಲ್ಲಿಯವರೆಗೆ 121 ‍ಪುಸ್ತಕಗಳನ್ನು ಹೊರತರಲಾಗಿದೆ. ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯದೆ ಅತೀ ಹೆಚ್ಚು ಪುಸ್ತಕ ಪ್ರಕಟಿಸಿರುವ ಹಾಗೂ ಮಾರಾಟ ಮಾಡದೇ ಉಚಿತವಾಗಿ ಓದುಗರಿಗೆ ತಲುಪಿಸುತ್ತಿರುವ ಕೊಡಗಿನ ಏಕೈಕ ಸಂಸ್ಥೆಯಾಗಿದೆ’ ಎಂದು ಅವರು ಹೇಳಿದರು. ಮುಂದಿನ ವರ್ಷ ಫೆ. 13ರಂದು ಕೊಡವ ಮಕ್ಕಡ ಕೂಟದ 13ನೇ ವರ್ಷಾಚರಣೆಯ ಪ್ರಯುಕ್ತ 2 ಪುಸ್ತಕಗಳನ್ನು ಹೊರ ತರಲು ನಿರ್ಧರಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಕೂಟದ ವತಿಯಿಂದ ದಾಖಲೀಕರಣ ಪುಸ್ತಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಆಸಕ್ತರಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.

ಪುಸ್ತಕದ ಹೆಸರು: ‘ಕೊಡಗ್ ಸಂಸ್ಥಾನ– ಬ್ರಿಟಿಷ್ ಸಾಮ್ರಾಜ್ಯ’

ಮೂಲ ಲೇಖಕರು: ಮೂಕೊಂಡ ನಿತಿನ್ ಕುಶಾಲಪ್ಪ 

ಅನುವಾದಕರು: ಐಚಂಡ ರಶ್ಮಿ ಮೇದಪ್ಪ

ಪ್ರಕಾಶನ: ಕೊಡವ ಮಕ್ಕಡ ಕೂಟ

ಪುಟಗಳ ಸಂಖ್ಯೆ: 144

ಬೆಲೆ: ₹ 200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.