ADVERTISEMENT

ಅರೆಭಾಷೆಯ ‘ವಿಶ್ವಕೋಶ’ ಮಹತ್ವದ ಗ್ರಂಥ: ವಿಶ್ವನಾಥ ಬದಿಕಾನ

ಅರೆಭಾಷೆ ಅಕಾಡೆಮಿ ಹೊರತಂದಿರುವ ಪುಸ್ತಕಗಳು ಓದುವಂತಹವು ವಿಶ್ವನಾಥ ಬದಿಕಾನ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 14:03 IST
Last Updated 14 ಅಕ್ಟೋಬರ್ 2022, 14:03 IST
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಕಾರ್ಯಕ್ರಮದಲ್ಲಿ ಮಾತನಾಡಿದರು   

ಮಡಿಕೇರಿ: ಅರೆಭಾಷೆ ಅಕಾಡೆಮಿಯು ಹೊರತಂದಿರುವ ‘ವಿಶ್ವಕೋಶ’, ‘ಪದಕೋಶ’, ‘ಪಾರಂಪರಿಕ ವಸ್ತುಕೋಶ’ ಸೇರಿದಂತೆ ಹಲವು ಪುಸ್ತಕಗಳು ಜತನದಿಂದ ಕಾಪಾಡಿಕೊಂಡು ಓದುವ ಪುಸ್ತಕವಾಗಿದೆ ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿಶ್ವನಾಥ ಬದಿಕಾನ ಶ್ಲಾಘಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಅರೆಭಾಷೆ ವಿಶ್ವಕೋಶ ಹಾಗೂ ಗ್ರಾಂಥಿಕ ಕನ್ನಡ ಮತ್ತು ಅರೆಭಾಷೆ ತೌಲನಿಕ ವ್ಯಾಕರಣ, ಅರೆಭಾಷೆ ಕೈಪಿಡಿ, ನಾಟಕ ಕತೆ, ಲಲಿತ ಪ್ರಬಂಧ, ಅರೆಭಾಷೆ ಸಾಧಕರ ಮಾಲೆ ಸೇರಿದಂತೆ ಒಟ್ಟು 14 ಪುಸ್ತಕಗಳನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವು ಕೊಡಗು, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಲ್ಲಿ ವಿಭಿನ್ನವಾಗಿದೆ. ಆ ನಿಟ್ಟಿನಲ್ಲಿ ಈಗ ಪ್ರಕಟಿಸಲಾಗಿರುವ ಪುಸ್ತಕಗಳು ಸಹ ಆಯಾಯ ಪ್ರದೇಶದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಒಳಗೊಂಡಿದೆ.ಅರೆಭಾಷೆ ಅಕಾಡೆಮಿಯಿಂದ ಹೊರತರಲಾದ ಪುಸ್ತಕಗಳು ಅರೆಭಾಷೆ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿದುಕೊಳ್ಳಲು ಸಹಕಾರಿ ಎಂದು ಅವರು ಹೇಳಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ.ಹಾ.ತಿ.ಕೃಷ್ಣೇಗೌಡ ಮಾತನಾಡಿ, ‘ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಸಂಸ್ಕೃತಿಯ ಜ್ಞಾನವನ್ನು ಗಳಿಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದ ಹೊರತರಲಾಗಿರುವ ‘ವಿಶ್ವಕೋಶ’ ಪುಸ್ತಕವು ಒಂದು ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ಶೇಷಾದ್ರ್ರಿಪುರಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಲಾವಣ್ಯ ಸಿ.ಪಿ.ಕೊಟ್ಟಕೇರಿಯನ ಮಾತನಾಡಿ, ‘ಯಾವುದೇ ಒಂದು ಭಾಷೆ ಜೀವಂತವಾಗಿರಲು ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆ ಅತ್ಯಗತ್ಯ. ಸಾಹಿತ್ಯ ಬರೆಯುವುದರ ಜೊತೆಗೆ ಓದುವುದು ಅತಿಮುಖ್ಯ. ಅರೆಭಾಷೆಯನ್ನು ಮಕ್ಕಳಿಗೆ ಓದಲು ಮತ್ತು ಬರೆಯಲು ತಿಳಿಸಬೇಕು. ಮನೆಯಲ್ಲಿ ಮಾತನಾಡಬೇಕು. ಅರೆಭಾಷೆ ಪುಸ್ತಕಗಳು ಡಿಜಿಟಲೀಕರಣವಾಗಿ ಆನ್‍ಲೈನ್‍ನಲ್ಲಿ ಓದುಲು ಲಭ್ಯವಾಗಬೇಕು’ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ, ‘ಅರೆಭಾಷೆಯಲ್ಲಿ ಒಳ್ಳೆಯ ಪುಸ್ತಕ ಪ್ರಕಟಿಸುವುದರ ಜೊತೆಗೆ ನಾಟಕ, ಯಕ್ಷಗಾನ, ತಾಳಮದ್ದಳೆ ಹೀಗೆ ಹಲವು ಅರೆಭಾಷಿಕ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಟ್ರತನ ಲಲಿತಾ ಅಯ್ಯಣ್ಣ (ಗೂಡಿಗೆ ಮರಳಿದ ಹಕ್ಕಿ), ಲೀಲಾ ದಾಮೋದರ ಕುಂದಲ್ಪಾಡಿ(ಗುಬ್ಬಿ ಗೂಡಿನ ಚಿಲಿಪಿಲಿ), ಅರೆಭಾಷೆ ಪ್ರಬಂಧ, ಅರೆಭಾಷೆ ಪದ್ಯ, ಅರೆಭಾಷೆ ಕೈಪಿಡಿ ಸೇರಿದಂತೆ 14 ಪುಸ್ತಕಗಳು, ಅಕಾಡೆಮಿಯ ದಶವರ್ಷ ಸ್ಮರಣ ಸಂಚಿಕೆ ಹಾಗೂ ಚಿತ್ರಕಲಾ ಶಿಬಿರದ ನೆನಪಿನ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಅರೆಭಾಷೆ ಸಾಧಕರ ಮಾಲೆ ಪುಸ್ತಕ ಬರೆದಿರುವ ಬಾರಿಯಂಡ ಜೋಯಪ್ಪ, ಅಮೆ ಪಾಲಾಕ್ಷ, ಡಾ.ಪೂವಪ್ಪ ಕಣಿಯೂರು, ಡಾ.ಅನುರಾಧ ಕುರುಂಜಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ದಯಾನಂದ ಕೂಡಕಂಡಿ, ಎ.ಟಿ.ಕುಸುಮಾಧರ, ಜಯಪ್ರಕಾಶ್ ಮೊಂಟಡ್ಕ, ಪುರುಷೋತ್ತ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.