ADVERTISEMENT

ಮಡಿಕೇರಿ: 26ರಂದು ರಾಜ್ಯಕ್ಕೆ ಅರವಿಂದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 6:33 IST
Last Updated 5 ಫೆಬ್ರುವರಿ 2023, 6:33 IST

ಮಡಿಕೇರಿ: ‘ಫೆ.26ರಂದು ದಾವಣಗೆರೆಯಲ್ಲಿ ನಡೆಯಲಿರುವ ಆಮ್‌ ಆದ್ಮಿ ಪಾರ್ಟಿ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸಲಿದ್ದಾರೆ’ ಎಂದು ಎಎಪಿ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ನಾಗಣ್ಣ ತಿಳಿಸಿದರು.

‘ಅಂದು ಅವರು ಬೂತ್‌ಮಟ್ಟದ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಭ್ರಷ್ಟಾಚಾರ ರಹಿತ ದೆಹಲಿ ಮಾದರಿಯ ಆಡಳಿತದ ಕುರಿತು ಮಾತನಾಡಲಿದ್ದಾರೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪಕ್ಷವು ಈ ಬಾರಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಮಾರ್ಚ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ’ ಎಂದರು.

ADVERTISEMENT

ಕೇವಲ ಅಕ್ಕಿ ಬೇಳೆ ಕೊಟ್ಟರೆ ಬಡತನದಿಂದ ಹೊರಬರಲು ಸಾಧ್ಯವಿಲ್ಲ. ಬಡತನದಿಂದ ಹೊರಬರಲು ಶಿಕ್ಷಣ ಬೇಕು. ಇಂದು ಶಿಕ್ಷಣ ವ್ಯವಹಾರವಾಗಿದೆ.
ಆದರೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಹಾಗೂ ಎಲ್ಲರಿಗೂ ಉಚಿತ ಆರೋಗ್ಯ ನೀಡುವುದು ಪಕ್ಷದ ಗುರಿ. ಭ್ರಷ್ಟಾಚಾರ ನಿರ್ಮೂಲನೆ ಮಾಡಿದರೆ ಖಂಡಿತವಾಗಿಯೂ ಉಚಿತ ಆರೋಗ್ಯ ನೀಡಬಹುದು. ದೆಹಲಿಯಲ್ಲಿ ಈ ಬಗೆಯ ಮಾದರಿ ಇದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈ ಮಾದರಿ ತರಲಾಗುವುದು ಎಂದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಚನ್ನಪ್ಪಗೌಡ, ಜಿಲ್ಲಾ ಘಟಕದ ಕಾರ್ಯದರ್ಶಿ ಪೃಥ್ವಿ, ಅಧ್ಯಕ್ಷ ಭೋಜಣ್ಣ ಸೋಮಯ್ಯ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೆಗೌಡ, ಮುಖಂಡ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.