ADVERTISEMENT

ಮಡಿಕೇರಿ: ಶಾಸಕದ್ವಯರಿಂದ ವಿವಿಧ ಕಾಮಗಾರಿಗೆ ಚಾಲನೆ

ಚೆನ್ನಯ್ಯನಕೋಟೆ, ಕಣ್ಣಂಗಾಲದಲ್ಲಿ ಪೊನ್ನಣ್ಣ, ಮಡಿಕೇರಿಯಲ್ಲಿ ಡಾ.ಮಂತರ್‌ಗೌಡ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:28 IST
Last Updated 3 ಮಾರ್ಚ್ 2026, 6:28 IST
ಶಾಸಕ ಎ.ಎಸ್.ಪೊನ್ನಣ್ಣ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು
ಶಾಸಕ ಎ.ಎಸ್.ಪೊನ್ನಣ್ಣ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯ ಇಬ್ಬರು ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್‌ಗೌಡ ಅವರು ಜಿಲ್ಲೆಯ ವಿವಿಧೆಡೆ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಎ.ಎಸ್.ಪೊನ್ನಣ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಇಲ್ಲಿನ ಕುಮ್ಮೆಹೊಳೆಗೆ ಚೆಕ್ ಡ್ಯಾಂ ನಿರ್ವಹಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಈ ಕಾಮಗಾರಿಯು ₹ 1.50 ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯುವ ಕಾಮಗಾರಿಯು ಸುತ್ತಮುತ್ತಲಿನ ಜಮೀನಿಗೆ ನೀರಾವರಿ ಸೌಲಭ್ಯ ಒದಗುವುದರೊಂದಿಗೆ ಅಂತರ್ಜಲ ಸಹ ವೃದ್ಧಿಯಾಗಲಿದೆ’ ಎಂದು ತಿಳಿಸಿದರು.

ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಲ್ಲಿ ಹಾಗೂ ಅತಿ ಶೀಘ್ರವಾಗಿ ನಿರ್ವಹಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಬಳಿಕ ಇಲ್ಲಿಯ ಚಾಮುಂಡಿ ಪೈಸಾರಿಗೆ ಭೇಟಿ ನೀಡಿದ ಅವರು, ತಮ್ಮ ಅನುದಾನದ ₹ 15 ಲಕ್ಷದಲ್ಲಿ ನಿರ್ಮಿಸಿದ ರಸ್ತೆಯನ್ನು ಸಾರ್ವಜನಿಕರ ಬಳಕೆಗಾಗಿ ಉದ್ಘಾಟಿಸಿದರು.

ಈ ವೇಳೆ ಮುಖಂಡರಾದ ಪಟ್ಟಡ ರಂಜಿ ಪೂಣಚ್ಚ, ಮಚ್ಚಾರಂಡ ಕಿರಣ್, ಹನೀಫ್, ರಫೀಕ್, ಅಂದಾಯಿ, ಕುಂಡಚ್ಚಿರ ಮಂಜು ದೇವಯ್ಯ, ಇಟೀರ ಭವಿನ್, ಮಂಜುನಾಥ್, ಡಿಲ್ಲು ನಾಣಯ್ಯ, ಬೇರೆರ ಕಿರಣ್ ಶಿವಪ್ಪ, ಮಚ್ಚಾರಂಡ ವನಿತಾ ಗಣಪತಿ, ಬೊಪ್ಪಂಡ ಜಗ ಬೆಳ್ಳಿಯಪ್ಪ, ವಿಜು ಕಾಳಪ್ಪ, ಗಣೇಶ್ ಭಾಗವಹಿಸಿದ್ದರು.

ಚೆನ್ನಯ್ಯನಕೋಟೆಯ ಪರಿಶಿಷ್ಟ ಜಾತಿ ಸಮುದಾಯದವರ ಗದ್ದೆಯ ಬಳಿ ಹರಿಯುವ ಹಳ್ಳಕ್ಕೆ ಪಿಕಪ್ ಹಾಗೂ ಕಾಲುವೆ ಕೃಷಿ ಜಮೀನು ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ಕಾಮಗಾರಿಯೂ ಸುಮಾರು ₹ 2 ಕೋಟಿ ವೆಚ್ಚದಲ್ಲಿ, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯಲಿದೆ ಎಂದು ಅವರು ತಿಳಿಸಿದರು. ಈ ವೇಳೆಯೂ ಗುತ್ತಿಗೆದಾರರಿಗೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕೆಂದು ಸೂಚಿಸಿದರು.

ಬಸವನಹಳ್ಳಿಯಲ್ಲಿ ಶಾಸಕರ ಅನುದಾನವಾದ ₹ 10 ಲಕ್ಷಗಳಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆ ಮಾಡಿದರು.

ಈ ವೇಳೆ ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯ ವಿಜು ನಾರಾಯಣ, ಮುಖಂಡರಾದ ಗಣೇಶ್, ಹನೀಫ್, ರಫೀಕ್, ಸಾಬಾ ಕಾಳಪ್ಪ, ಪಾಲಿಬೆಟ್ಟ ಪಂಚಾಯಿತಿ ಸದಸ್ಯರು ನಾಸಿರ್, ಅಜ್ಜಿಕುಟ್ಟಿರ ಪೊನ್ನು, ಚೆಕು, ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ರವೀಂದ್ರ ಭಾವೆ, ಸಭು, ಡಾ.ವಾಸು, ಪೂಣಚ್ಚ, ಎಂ.ಜಿ.ಬೆಳ್ಯಪ್ಪ, ಎಂ.ಬಿ ಅಪ್ಪಣ್ಣ, ಗಗನ್ ಕಾರ್ಯಪ್ಪ, ಹರ್ಷ, ಅಪ್ಪಚ್ಚು, ಗಣೇಶ್, ಅಪ್ಪಯ್ಯ, ಲೋಹಿತ್, ಶಾಂತಿ, ಲಕ್ಷ್ಮೀ ಭಾಗವಹಿಸಿದ್ದರು.

ಶಾಸಕ ಡಾ.ಮಂತರ್‌ಗೌಡ ಅವರು ಮಡಿಕೇರಿ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು

ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ

ಮಡಿಕೇರಿ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೊ ನಿಲ್ದಾಣ ಹಾಗೂ ಕಾವೇರಿ ಕಾರು ಚಾಲಕ ಮಾಲೀಕರ ಸಂಘದ ಕಾರು ನಿಲ್ದಾಣಗಳಿಗೆ ₹ 11 ಲಕ್ಷ ವೆಚ್ಚದ ಚಾವಣಿ ಹಾಗೂ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ₹ 16 ಲಕ್ಷ ಮೊತ್ತದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.

‘ಕ್ಷೇತ್ರದ ಜನರ ಕೋರಿಕೆಯನ್ನು ಈಡೇರಿಸುವ ಜೊತೆಗೆ ಕ್ಷೇತ್ರದ ಜನರ ಒಳಿತಿಗಾಗಿ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಯ ಕರ್ತವ್ಯ. ಈ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾದ ಮಡಿಕೇರಿ ನಗರದ ಜನರ ಬವಣೆಯನ್ನು ಗಮನಿಸಿ ಈ ಎರಡು ಕಾಮಗಾರಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಕೊರವಂಡ ಕುಟುಂಬಸ್ಥರು ಮಡಿಕೇರಿ ನಗರದ ವಿವಿಧ ಭಾಗದಲ್ಲಿ ಅನೇಕ ಸ್ಥಳಗಳನ್ನು ದಾನವಾಗಿ ನೀಡಿದ್ದು ಆ ಕುಟುಂಬದ ಸದಸ್ಯರ ಅನುಮತಿ ಪಡೆದು ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲಾಗುವುದು ಎಂದು ತಿಳಿಸಿದರು.

ಕೊಡಗು ಜಿಲ್ಲಾ ಆಟೊ ಚಾಲಕರ ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಕಾವೇರಿ ವಾಹನ ಚಾಲಕರು ಮತ್ತು ಮಾಲಿಕರ ಸಂಘದ ಸ್ಥಾಪಕ ಅಧ್ಯಕ್ಷ ಬದ್ದಂಜೆಟ್ಟಿರ ಜೈ ಜಗದೀಶ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಡಿಕೇರಿ ಆಟೊ ಚಾಲಕರ ಸಂಘದ ಅಧ್ಯಕ್ಷ ಸಮದ್ ಹಾಗೂ ಕಾವೇರಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸತೀಶ್ ಬಿ.ಜೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.