ADVERTISEMENT

ಜಮ್ಮಾಬಾಣೆ ಸಮಸ್ಯೆ ಸಂಪೂರ್ಣ ಪರಿಹಾರಕ್ಕೆ ಬೇಕಿತ್ತು ವಿಧೇಯಕ: ಎ.ಎಸ್‌.ಪೊನ್ನಣ್ಣ 

ಬಿಜೆಪಿ ಹಿರಿಯ ನಾಯಕರಿಂದ ಸ್ವಾಗತ, ಸ್ಥಳೀಯ ನಾಯಕರಿಂದ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:21 IST
Last Updated 12 ಜನವರಿ 2026, 6:21 IST
<div class="paragraphs"><p>ಎ.ಎಸ್‌.ಪೊನ್ನಣ್ಣ&nbsp;</p></div>

ಎ.ಎಸ್‌.ಪೊನ್ನಣ್ಣ 

   

ಮಡಿಕೇರಿ: ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ಎಲ್ಲೆಡೆ ಭರಪೂರ ಸ್ವಾಗತ ದೊರೆಯುತ್ತಿದೆ. ಬಿಜೆಪಿಯ ಹಿರಿಯ ಮುಖಂಡರಾದ ಆರ್.ಅಶೋಕ್, ಅರವಿಂದ ಬೆಲ್ಲದ್, ಅರಗ ಜ್ಞಾನೇಂದ್ರ ಅವರೂ ಸ್ವಾಗತಿಸಿ ಮಾತನಾಡಿದ್ದಾರೆ. ಆದರೆ, ಕೇವಲ ಬಿಜೆಪಿಯ ಸ್ಥಳೀಯ ನಾಯಕರು ಮಾತ್ರವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದರು.

ಇಲ್ಲಿನ ಸುದರ್ಶನ ಅತಿಥಿಗೃಹದಲ್ಲಿ ಭಾನುವಾರ ಅವರು ಇದಕ್ಕೆ ಪೂರಕವಾಗಿ ವಿಧಾನಸಭಾ ಅಧಿವೇಶನದಲ್ಲಿ ವಿಧೇಯಕದ ಪರವಾಗಿ ಮಾತನಾಡಿದ ಬಿಜೆಪಿ ನಾಯಕರ ವಿಡಿಯೊ ಪ್ರದರ್ಶಿದರು.

ADVERTISEMENT

‘ವಿರೋಧ ಮಾಡುವುದು ತಪ್ಪಲ್ಲ. ಆದರೆ, ತಪ್ಪು ಮಾಹಿತಿ ಕೊಡುವುದು ಸರಿಯಲ್ಲ. ಜನರನ್ನು ಈ ಮೂಲಕ ದಿಕ್ಕು ತಪ್ಪಿಸುತ್ತಿರುವುದಕ್ಕೆ ನನ್ನ ವಿರೋಧ ಇದೆ’ ಎಂದರು.

ಚಕ್ಕೇರ ಪೂವಯ್ಯ ಅವರ ಪ್ರಕರಣದಿಂದ ಜಮ್ಮಾಬಾಣೆ ಸಮಸ್ಯೆಗೆ ಇತ್ಯರ್ಥಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಕೀಲರೂ ಆಗಿರುವ ಕೆ.ಜಿ.ಬೋಪಯ್ಯ ಹೇಳಿರುವುದು ಅಚ್ಚರಿ ತರಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಿಂದ ಮಾರಕವಾಗಿದ್ದ ಸುತ್ತೋಲೆಗಳು ರದ್ದಾದವು. ಒಂದು ವೇಳೆ ಪ್ರಕರಣ ದಾಖಲಾಗದಿದ್ದರೆ ಒಂದು ಇಂಚೂ ಜಮ್ಮಾಬಾಣೆ ಭೂಮಿ ಸಹ ಹಿಡುವಳಿದಾರರಿಗೆ ಸಿಗುತ್ತಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು.

ಕಂದಾಯ ನೀಡದಿದ್ದರೆ ವ್ಯವಸಾಯಕ್ಕೆ ಬಳಕೆ ಮಾಡಬಹುದು. ಕಂದಾಯ ನಿಗದಿ ಮಾಡಿದರೆ ಮಾಲೀಕತ್ವ ಸಿಗುತ್ತದೆ ಎಂದು ನ್ಯಾಯಾಲಯ ಈ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಹೀಗಾಗಿ, ಈ ಪ್ರಕರಣ ಜಮ್ಮಾಬಾಣೆ ಸಮಸ್ಯೆ ನಿವಾರಣೆಯಲ್ಲಿ ಮೊದಲ ಹೆಜ್ಜೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಬಿಜೆಪಿ ಸರ್ಕಾರ 2012ರಲ್ಲಿ ತಂದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿರೋಧಿಸುವುದಿಲ್ಲ. ಇದು ಸಹ ಸಮಸ್ಯೆ ಇತ್ಯರ್ಥಕ್ಕೆ ನೆರವಾದರೂ ಸಮಸ್ಯೆ ಸಂಪೂರ್ಣ ಪರಿಹಾರ ಸಾಧ್ಯವಾಗಲಿಲ್ಲ ಎಂದರು.

ಅಂದು ಈ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದರು. ಬೋಪಯ್ಯ ಅವರು ಹೇಳಿದಂತೆ ಅವರ ಮಾತು ಕೇಳಿ ಈ ವಿಧೇಯಕಕ್ಕೆ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಒಪ್ಪಿಗೆ ಕೊಡಲಿಲ್ಲ. ಬದಲಿಗೆ ಅಂದಿನ ಕೇಂದ್ರ ಕಾನೂನು ಸಚಿವಾಲಯದ ಅಭಿಪ್ರಾಯ ಪಡೆದು ನಿಯಮಾನುಸಾರ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದರು.

ಈ ವಿಧೇಯಕವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರು ಕಾಂಗ್ರೆಸ್‌ನವರು ಎಂದು ಬೋಪಯ್ಯ ಹೇಳುತ್ತಾರೆ. ಅವರು ಯಾರೂ ಸಹ ಕಾಂಗ್ರೆಸ್‌ನಿಂದ ಕೋರ್ಟ್‌ಗೆ ಹೋಗಿರಲಿಲ್ಲ. ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದ್ದರು. ಅದು ಅವರ ಹಕ್ಕೂ ಹಾಗಿತ್ತು ಎಂದರು.

ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ಆದೇಶವನ್ನು ಜಾರಿಗೆ ತಂದಿದ್ದರೆ ಸಾಕಿತ್ತು, ಈ ವಿಧೇಯಕದ ಅಗತ್ಯವೇ ಇರಲಿಲ್ಲ ಎಂದು ಬೋಪಯ್ಯ ಹೇಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ, ಬಿಜೆಪಿಯ ಕಾಯ್ದೆ ಇದ್ದಾಗ್ಯೂ ಕೊಡಗಿನಲ್ಲಿ ಇನ್ನೂ 22,951 ಎಕರೆಗೆ ಕಂದಾಯವೇ ನಿಗದಿಯಾಗುತ್ತಿರಲಿಲ್ಲ. ಹಾಗಾಗಿಯೇ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿಯೇ ಈ ವಿಧೇಯಕ ತರಲಾಯಿತು ಎಂದು ತಿಳಿಸಿದರು.

ಇದರೊಂದಿಗೆ 2000ದಲ್ಲಿ ಆರ್‌ಟಿಸಿಗಳು ಡಿಜಿಟಲೀಕರಣಗೊಂಡಾದ ಪಟ್ಟೇದಾರರ ಹೆಸರನ್ನು ಮಾಲೀಕರ ಕಾಲಂಗೆ ಹಾಕಲಾಯಿತು. ಇದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿತು. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅನಿವಾರ್ಯವಾಗಿ ಕಾಯ್ದೆ ತರಲಾಯಿತು ಎಂದರು.

‌ಕಾಂಗ್ರೆಸ್‌ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮುಖಂಡರಾದ ಎ.ಹಂಸ, ತೆನ್ನೀರಾ ಮೈನಾ, ಸೂರಜ್ ಹೊಸೂರು ಭಾಗವಹಿಸಿದ್ದರು.

ಬಹಿರಂಗ ಚರ್ಚೆಗೆ ಸಿದ್ಧ

ಜಮ್ಮಾಬಾಣೆ ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ. ಈ ಕುರಿತು ಬಹಿರಂಗ ಹಾಗೂ ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಶಾಸಕ ಎ.ಎಸ್.ಪೊನ್ನಣ್ಣ ಘೋಷಿಸಿದರು. ಬಿಜೆಪಿ ಅಧಿಕಾರವಧಿಯಲ್ಲಿ ಮನೆಮನೆ ಕಂದಾಯ ಕಾರ್ಯಕ್ರಮದ ಮೂಲಕ ಕೊಡಗಿನಲ್ಲಿ ಒಬ್ಬ ಕೃಷಿಕನ ಸಮಸ್ಯೆಗೆ ಪರಿಹಾರ ದೊರಕಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದೂ ಸವಾಲೆಸೆದರು. ಈ ವಿಧೇಯಕದಿಂದ ಸಂಪೂರ್ಣ ಮಾಲೀಕತ್ವ ರೈತರಿಗೆ ಸಿಗುತ್ತದೆ. ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ನಿಯಮಗಳನ್ನು ರೂಪಿಸಿದ ಕೂಡಲೇ ಅದಾಲತ್‌ಗಳನ್ನು ನಡೆಸಿ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು  ಹೇಳಿದರು.

ನಾವು ಶಾಸಕರಾಗಿ ಮಾಡಿರುವ ಕೆಲಸವನ್ನು ಮಾಜಿ ಶಾಸಕರಿಗೆ ಸಹಿಸಿಕೊಳ್ಳಲಾಗದೆ ಸುಳ್ಳು ಹೇಳಿದ್ದಾರೆ. ಹಿರಿಯರಾಗಿರುವ ಅವರು ನಮಗೆ ಮಾರ್ಗದರ್ಶನ ಮಾಡಬೇಕು. ಅವರ ಸಲಹೆಯನ್ನು ನಾವು ಸ್ವೀಕರಿಸಲು ಸಿದ್ದ
-ಡಾ.ಮಂತರ್‌ಗೌಡ, ಶಾಸಕ.
ಶಾಸಕರು ಮತ್ತು ಕಂದಾಯ ಸಚಿವರ ಇಚ್ಚಾಶಕ್ತಿಯಿಂದಾಗಿ ಕೊಡಗಿನ ಭೂಹಿಡುವಳಿದಾರರ ಅನೇಕ ವರ್ಷಗಳ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದಂತಾಗಿದೆ.
-ಎಚ್.ಎಸ್.ಚಂದ್ರಮೌಳಿ ಹೈಕೋರ್ಟ್‌ನ ಹಿರಿಯ ವಕೀಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.