ADVERTISEMENT

ಕೊಡಗು| ಓಟ ಒಂದು ದಿನಕ್ಕೆ ಸೀಮಿತವಾಗದಿರಲಿ: ಅಶ್ವಿನಿ ನಾಚಪ್ಪ

ಪೊಲೀಸರ ಜಾಗೃತಿ ಓಟದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:50 IST
Last Updated 2 ಮಾರ್ಚ್ 2026, 4:50 IST
<div class="paragraphs"><p>ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ವತಿಯಿಂದ ಭಾನುವಾರ ನಡೆದ ರಸ್ತೆ ಓಟಕ್ಕೆ ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಚಾಲನೆ ನೀಡಿದರು</p></div>

ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ವತಿಯಿಂದ ಭಾನುವಾರ ನಡೆದ ರಸ್ತೆ ಓಟಕ್ಕೆ ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಚಾಲನೆ ನೀಡಿದರು

   

ಮಡಿಕೇರಿ: ಓಟ, ನಶೆ ಮುಕ್ತ ಕೊಡಗು, ಸೈಬರ್ ಅಪರಾಧಗಳ ವಿರುದ್ಧದ ಎಚ್ಚರಿಕೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ದೈನಂದಿನ ಬದುಕಿನ ಭಾಗವಾಗಲಿ ಎಂದು ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದ್ದ ಸುಮಾರು ಸಾವಿರಕ್ಕೂ ಅಧಿಕ ಮಂದಿಗೆ ಕರೆ ನೀಡಿದರು.

ಕೊಡಗು ಪೊಲೀಸ್ ವತಿಯಿಂದ ಸೈಬರ್‌ ಅಪರಾಧಗಳು ಮತ್ತು ಮಾದಕ ವಸ್ತುಗಳ ವಿರುದ್ಧ ಇಲ್ಲಿ ಭಾನುವಾರ ನಡೆದ ಮೂರೂವರೆ ಕಿ.ಮೀ ದೂರದ ಓಟಕ್ಕೆ ಚಾಲನೆ ನೀಡಿದ ಅಂತರರಾಷ್ಟ್ರೀಯ ಅಥ್ಲೀ‌ಟ್ ಅಶ್ವಿನಿ ನಾಚಪ್ಪ, ‘ಈ ಓಟ ಒಂದು ದಿನಕ್ಕೆಷ್ಟೇ ಸೀಮಿತವಾಗಬಾರದು. ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಠ ದಿನಕ್ಕೆ 45 ನಿಮಿಷವಾದರೂ, ಓಟ, ವ್ಯಾಯಾಮ ಚಟುವಟಿಕೆಗಳಿಗೆ ಮೀಸಲಿರಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ‘ಮದ್ಯಪಾನ, ಮಾದಕವಸ್ತು ಸೇವನೆಯಿಂದ ಎಲ್ಲರೂ ದೂರ ಇರಬೇಕು’ ಎಂದರು.

‘ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಈ ಓಟದಲ್ಲಿ ಭಾಗವಹಿಸಿರುವುದು ವಿಶೇಷ. ನಶೆ ಮುಕ್ತ ಕೊಡಗು ಜಿಲ್ಲೆ ರೂಪಿಸುವುದು ಹಾಗೂ ಸೈಬರ್ ಕ್ರೈಂ ವಿರುದ್ಧ ಅರಿವು ಮೂಡಿಸುವುದು ನಮ್ಮ ಉದ್ದೇಶ. ಮೊಬೈಲ್ ವ್ಯಸನ ಹೆಚ್ಚಿರುವ, ದೈಹಿಕ ವ್ಯಾಯಾಮ ಕಡಿಮೆಯಾಗುತ್ತಿದೆ. ಇದು ಇಲ್ಲಿಗೆ ಅಂತ್ಯ ಮಾಡಬಾರದು’ ಎಂದು ಹೇಳಿದರು.

ಎಎಸ್‌ಪಿ ದಿನೇಶ್‌ಕುಮಾರ್ ಮಾತನಾಡಿ, ‘ಆರೋಗ್ಯವಾಗಿದ್ದರೆ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ. ಹಾಗಾಗಿ, ನಿತ್ಯವೂ ಈ ಅಭ್ಯಾಸ ರೂಢಿಸಿಕೊಳ್ಳಿ’ ಎಂದರು.

ಇದಕ್ಕೂ ಮುನ್ನ ವಿಕ್ರಂ ಜಾದೂಗಾರ್ ಅವರ ಮ್ಯಾಜಿಕ್ ಗಮನ ಸೆಳೆಯಿತು. ಮಾದಕವಸ್ತುಗಳು ಬೇಡ ಎಂದು ಕಾಗದದ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿ ಬೆಂಕಿ ಹಚ್ಚಿ ಆ ಪಾತ್ರೆಯ ಮುಚ್ಚಳ ಮುಚ್ಚಿದರು. ಒಂದೆರಡು ನಿಮಿಷದಲ್ಲಿ ಅದನ್ನು ತೆರೆದು 3 ಹೂಮಾಲೆ ಮುಚ್ಚಿ ಹೂಮಾಲೆ ತೆಗೆದು ಅಚ್ಚರಿ ಮೂಡಿಸಿದರು.

ಬಳಿಕ ಶ್ವೇತವಸ್ತ್ರಧಾರಿಗಳಾಗಿ ಎಲ್ಲರೂ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್‌ನಿಲ್ದಾಣ, ಇಂದಿರಾಗಾಂಧಿ ವೃತ್ತ (ಚೌಕಿ) ವೃತ್ತ, ಕಾನ್ವೆಂಟ್ ಜಂಕ್ಷನ್ ಮೂಲಕ ಪೊಲೀಸ್ ಕವಾಯತು ಮೈದಾನ ತಲುಪಿತು.

ಈ ಓಟದಲ್ಲಿ ಕೇವಲ ಪೊಲೀಸರು ಮಾತ್ರವಲ್ಲ ಕಾರಾಗೃಹದ ಸಿಬ್ಬಂದಿ, ಅಗ್ನಿಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರು, ಪೊಲೀಸರು, ಕಾರಾಗೃಹ ಸಿಬ್ಬಂದಿ, ಸಾರ್ವಜನಿರು ಇಷ್ಟು ವಿಭಾಗಗಳಲ್ಲೂ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.

ಸುದರ್ಶನ ವೃತ್ತ, ಹಳೆಯ ಖಾಸಗಿ ಬಸ್‌ ನಿಲ್ದಾಣ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆಂಬುಲೆನ್ಸ್‌ನ್ನೂ ಸಹ ನಿಯೋಜಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಓಟವು 8.30ಕ್ಕೆ ಕೊನೆಗೊಂಡಿತು.

ಡಿಸಿಎಫ್‌ ಅಭಿಷೇಕ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಡಾ.ಅಮೃತ್ ನಾಣಯ್ಯ, ಭಾಗವಹಿಸಿದ್ದರು.

ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ವತಿಯಿಂದ ಭಾನುವಾರ ನಡೆದ ರಸ್ತೆ ಓಟಕ್ಕೆ ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಚಾಲನೆ ನೀಡುತ್ತಿದ್ದಂತೆ ಸಾರ್ವಜನಿಕರು ಓಡಲು ಮುನ್ನುಗ್ಗಿದ ಕ್ಷಣ
ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ವತಿಯಿಂದ ಭಾನುವಾರ ನಡೆದ ರಸ್ತೆ ಓಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಭಾಗಿಯಾದರು
ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕೊಡಗು ಪೊಲೀಸ್ ವತಿಯಿಂದ ಭಾನುವಾರ ನಡೆದ ರಸ್ತೆ ಓಟದಲ್ಲಿ ಗಮನ ಸೆಳೆದ ಸ್ತಬ್ದಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.