ಸೋಮವಾರಪೇಟೆ: ನೇಪಾಳದ ಕಠ್ಮಂಡುವಿನಲ್ಲಿ ಮೇ 30 ಮತ್ತು 31ರಂದು ನಡೆದ ಪ್ರಥಮ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
ಕ್ರೀಡಾಪಟುಗಳಾದ ಎಂ.ಕೆ. ಮೋಹನ್ ಹಾಗೂ ಸುನಿತಾ ದಂಪತಿಯ ಪುತ್ರ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್, ಆನಂದ ಟಿ. ಶೆಟ್ಟಿ ಮತ್ತು ನಿಶ್ಚಲ ದಂಪತಿ ಪುತ್ರಿ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ಶರಣ್ಯ ಎ. ಶೆಟ್ಟಿ, ಅಶೋಕ ಮತ್ತು ನಿರ್ಮಲ ದಂಪತಿಯ ಪುತ್ರಿ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ವಿವಕ್ತ ಚೋಂದಮ್ಮ ಚಿನ್ನದ ಪದಕಗಳನ್ನು ಪಡೆದರು.
ಆಶಾ ಮತ್ತು ಚಂಗಪ್ಪ ದಂಪತಿಯ ಪುತ್ರ ಕಾಜೂರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಕುಮಾರ್ ಬೆಳ್ಳಿಯ ಪದಕ ಪಡೆದರು. ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ಹಾಗೂ ಕೋಚ್ ಸುದರ್ಶನ್ ನೇತೃತ್ವದಲ್ಲಿ ಕರ್ನಾಟಕ ವಿದ್ಯಾರ್ಥಿಗಳ ತಂಡ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ 9 ರಾಷ್ಟ್ರಗಳ ತಂಡಗಳು ಭಾಗವಹಿಸಿದ್ದವು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಏಷಿಯನ್ ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ನನೌಂತ ಕುಮಾರ್, ನೇಪಾಳದ ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ಸುಖ್ಯನ್ ಲಾಮ ಮತ್ತು ತರಬೇತುದಾರ ಎನ್.ಸಿ. ಸುದರ್ಶನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.