ADVERTISEMENT

ವಾಜಪೇಯಿ ಅವರದು ಮೇರು ವ್ಯಕ್ತಿತ್ವ: ಅಪ್ಪಚ್ಚು ರಂಜನ್

ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:37 IST
Last Updated 26 ಡಿಸೆಂಬರ್ 2025, 6:37 IST
ಸೋಮವಾರಪೇಟೆ ಅಟಲ್ ಜೀ ಭವನದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿದರು  
ಸೋಮವಾರಪೇಟೆ ಅಟಲ್ ಜೀ ಭವನದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿದರು     

ಸೋಮವಾರಪೇಟೆ: ದೇಶದ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಿಂದ ಆಚೆಗೂ ಸಹ ಅಪ್ಪಟ ರಾಷ್ಟ್ರಹಿತದ ಜೀವನ ಸಾಗಿಸಿದ ಮೇರು ವ್ಯಕ್ತಿತ್ವದವರು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಬಿಜೆಪಿ ಹಿರಿಯರ ವೇದಿಕೆಯ ನೇತೃತ್ವದಲ್ಲಿ ಇಲ್ಲಿನ ಅಟಲ್ ಜೀ ಕನ್ನಡ ಭವನದಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಭವಿಷ್ಯ, ಭದ್ರತೆ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ತಮ್ಮ ಇಡೀ ಜೀವಮಾನವನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟವರು ಎಂದು ಸ್ಮರಿಸಿದರು.

ADVERTISEMENT

ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ನಿಷ್ಕಳಂಕ ರಾಜಕಾರಣಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ನದಿಗಳ ಜೋಡಣೆ, ಕೃಷಿ, ತಂತ್ರಜ್ಞಾನ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ತೊಡಗಿಸಿಕೊಂಡವರು. ಜನಸಂಘದ ನಂತರ ಭಾರತೀಯ ಜನತಾ ಪಾರ್ಟಿಯನ್ನು ರಾಷ್ಟ್ರದಾದ್ಯಂತ ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಪಕ್ಷವು ಹಲವಷ್ಟು ರಾಜ್ಯಗಳೂ ಸೇರಿ ರಾಷ್ಟ್ರಮಟ್ಟದಲ್ಲಿ ಅಧಿಕಾರದಲ್ಲಿದೆ ಎಂದು ನೆನಪಿಸಿಕೊಂಡರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ರಾಜಕೀಯ ರಂಗದಲ್ಲಿ ಆಜಾತಶತ್ರುವಾಗಿ ಜೀವನ ನಡೆಸಿದ ಅಟಲ್‌ ಜೀ ಅವರ ಸಾಮಾಜಿಕ ಜೀವನ ಎಲ್ಲರಿಗೂ ಪ್ರೇರಣೆ ಹಾಗೂ ಮಾರ್ಗದರ್ಶನ ಆಗಬೇಕು. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಹಿರಿಯರ ವೇದಿಕೆ ಸಂಚಾಲಕ ಬಿ.ಟಿ. ತಿಮ್ಮಶೆಟ್ಟಿ ಮಾತನಾಡಿ, ಹಿರಿಯರ ವೇದಿಕೆ ಪದಾಧಿಕಾರಿಗಳಾದ ಬಿ.ಆರ್.ಮೃತ್ಯುಂಜಯ, ಬಿ.ಪಿ.ಶಿವಕುಮಾರ್, ದಯಾನಂದ್, ಹಾಲೇರಿ ದಿನೇಶ್, ಕೆ.ಎನ್. ಶಿವಕುಮಾರ್, ಬಿ.ಬಿ.ಭಾರತೀಶ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಬಿ.ಡಿ. ಮಂಜುನಾಥ್, ಎಸ್.ಪಿ. ಪೊನ್ನಪ್ಪ, ಎಂ.ಬಿ. ಅಭಿಮನ್ಯುಕುಮಾರ್, ಸುಮಾ ಸುದೀಪ್, ಮಂಜುಳಾ ಸುಬ್ರಮಣ್ಯ ಸೇರಿ ವಾಜಪೇಯಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಪಟ್ಟಣದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಸೋಮವಾರಪೇಟೆ ಅಟಲ್ ಜೀ ಭವನದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟಿದ ದಿನದ ಪ್ರಯುಕ್ತ ಗಣಪತಿ ದೇವಾಲಯದಲ್ಲಿ ಪೂಜೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.