ಮಡಿಕೇರಿ: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿ.ವೈ.ರಾಜೇಶ್ ಅವರು ಇಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ‘ಯಾವುದೇ ಕಡತವಿರಲಿ ಅದನ್ನು ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ’ ಎಂದು ನೂತನ ಆಡಳಿತ ಮಂಡಳಿಗೆ ಕಿವಿಮಾತು ಹೇಳಿದರು.
ಹಿರಿಯ ಮತ್ತು ಕಿರಿಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಮಡಿಕೇರಿ ನಗರದ ಜನತೆಗೆ ತೊಂದರೆಯಾಗದ ಹಾಗೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಮಾತನಾಡಿ, ‘ಮುಡಾದಲ್ಲಿ ಇತ್ಯರ್ಥವಾಗದೇ ಇರುವ ಕಡತಗಳ ವಿಲೇವಾರಿಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷಣ ಮಾತನಾಡಿ, ‘ಮಡಿಕೇರಿ ನಗರವನ್ನು ಸಮಸ್ಯೆ ಮುಕ್ತ ನಗರವಾಗಿಸಲು ಮುಡಾ ಆಡಳಿತ ಮಂಡಳಿ ಪ್ರಯತ್ನಿಸಬೇಕು’ ಎಂದು ಹೇಳಿದರು.
ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ನೂತನ ಆಡಳಿತ ಮಂಡಳಿಯಿಂದ ಉತ್ತಮ ಕೆಲಸ ಆಗುವ ಭರವಸೆ ನನಗಿದೆ’ ಎಂದರು.
ಮುಡಾ ನೂತನ ಸದಸ್ಯರಾದ ಕಾನೆಹಿತ್ಲು ಮೊಣ್ಣಪ್ಪ, ಚಂದ್ರಶೇಖರ್, ಮೀನಾಜ್ ಪ್ರವೀಣ್, ಸುದಯ್ ನಾಣಯ್ಯ, ಮುಖಂಡರಾದ ಟಿ.ಪಿ.ರಮೇಶ್, ಸುರಯ್ಯ ಅಬ್ರಾರ್, ಕಳಲೆ ಕೇಶವಮೂರ್ತಿ, ಚುಮ್ಮಿದೇವಯ್ಯ, ಪ್ರಮೋದ್ ಮುತ್ತಪ್ಪ, ಹಂಜ್ಹ, ವಿ.ಪಿ.ಶಶಿಧರ್, ಸತೀಶ್ ಕುಮಾರ್, ಎಚ್.ಎಂ.ನಂದಕುಮಾರ್, ಜೆ.ಜೆ.ಕಾವೇರಪ್ಪ, ತೆನ್ನಿರ ಮೈನಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.