ADVERTISEMENT

ಕೊಡಗು: ‘ಬಾಬು ಜಗಜೀವನ್‍ರಾಂ ಸಾಧನೆ ಸ್ಮರಿಸಿ’

ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:49 IST
Last Updated 6 ಏಪ್ರಿಲ್ 2025, 7:49 IST
ಮಡಿಕೇರಿಯಲ್ಲಿ ಶನಿವಾರ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಶಾಸಕ ಡಾ.ಮಂತರ್‌ಗೌಡ ಪುಷ್ಪನಮನ ಸಲ್ಲಿಸಿದರು
ಮಡಿಕೇರಿಯಲ್ಲಿ ಶನಿವಾರ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಶಾಸಕ ಡಾ.ಮಂತರ್‌ಗೌಡ ಪುಷ್ಪನಮನ ಸಲ್ಲಿಸಿದರು   

ಮಡಿಕೇರಿ: ಸಮಾಜದ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಗಾಂಧಿಭವನದಲ್ಲಿ ಶನಿವಾರ ನಡೆದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಾಬು ಜಗಜೀವನ್ ರಾಂ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ, ರಕ್ಷಣಾ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗದ ಹಿತರಕ್ಷಣೆ ಮಾಡಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರಾಗಿ ಶೋಷಿತರ ಧ್ವನಿಯಾಗಿ, ಮುತ್ಸದ್ದಿ ರಾಜಕಾರಣಿಯಾಗಿ ಬಾಬು ಜಗಜೀವನ್ ರಾಂ ಅವರ ಬದುಕು ಆದರ್ಶ ಮತ್ತು ಮಾದರಿಯಾಗಿದೆ ಎಂದು ಅವರು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ ಹೆಗಡೆ ಮಾತನಾಡಿ, ‘ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ’ ಎಂದು ಹೇಳಿದರು.

ADVERTISEMENT

ಬಾಬು ಜಗಜೀವನ್ ರಾಂ ಅವರು ಬಿಹಾರದಲ್ಲಿ ಬಡ ಕುಟುಂಬದಲ್ಲಿ ಜನಿಸಿ ಬಾಲ್ಯ ಜೀವನವನ್ನು ಕಷ್ಟದಿಂದಲೇ ಎದುರಿಸಿದವರು. ತಮ್ಮ ಜೀವನದುದ್ದಕ್ಕೂ ಹೋರಾಟದ ಮೂಲಕ ಬೆಳವಣಿಗೆ ಕಂಡು ರಾಜಕೀಯ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಸಾಧನೆ ಬಾಬು ಜಗಜೀವನ್ ರಾಂ ಅವರದ್ದಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ ಮುಖಂಡರಾದ ಎಚ್.ಎಲ್.ದಿವಾಕರ, ಪ್ರೇಮ ಕೃಷ್ಣಪ್ಪ, ಪ್ರೇಮಕುಮಾರ್, ಮೋಹನ್ ಮೌರ್ಯ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಭಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.