ADVERTISEMENT

ಸೀಮಂತ ಸಂಭ್ರಮಾಚರಣೆಯಲ್ಲ, ಸಂಸ್ಕಾರ: ಪವನ ಗಗನ್

ಪೋಷಣಾ ಅಭಿಯಾನ, ಸೀಮಂತ, ಅಕ್ಷರಾಭ್ಯಾಸ, ಅನ್ನ ಪ್ರಾಶನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:25 IST
Last Updated 18 ಫೆಬ್ರುವರಿ 2026, 4:25 IST
ಶನಿವಾರಸಂತೆ ಸಮೀಪದ ದೊಡ್ಡಾಕುಂದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಹಾಗೂ ಸೀಮಂತ, ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಪವನ ಗಗನ್ ಉದ್ಘಾಟಿಸಿದರು
ಶನಿವಾರಸಂತೆ ಸಮೀಪದ ದೊಡ್ಡಾಕುಂದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಹಾಗೂ ಸೀಮಂತ, ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಪವನ ಗಗನ್ ಉದ್ಘಾಟಿಸಿದರು   

ಶನಿವಾರಸಂತೆ: ಸೀಮಂತವೆಂದರೆ ಕೇವಲ ಸಂಭ್ರಮಾಚರಣೆಯಲ್ಲ. ಇದೊಂದು ಸಂಸ್ಕಾರ ಮತ್ತು ಸಂಸ್ಕೃತಿ ಎಂದು ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಪವನ ಗಗನ್ ಹೇಳಿದರು.

ದೊಡ್ಡಾಕುಂದ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲ್ಲೂಕು ಹಾಗೂ
ಪಂಚಾಯಿತಿ ವ್ಯಾಪ್ತಿಯ ಏಳು ಅಂಗನವಾಡಿಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಪೋಷಣಾ ಅಭಿಯಾನ ಹಾಗೂ ಸೀಮಂತ, ಅಕ್ಷರಾಭ್ಯಾಸ, ಅನ್ನ ಪ್ರಾಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯ್ತನ ಹೆಣ್ಣಿಗೊಲಿದ ಅದೃಷ್ಟ. ಈ ಅದೃಷ್ಟ ಸಂಭ್ರಮಿಸುವುದೇ ಸೀಮಂತ ಕಾರ್ಯ. ಗರ್ಭವತಿಯಾದ ಹೆಣ್ಣುಮಗಳು ಮತ್ತು ಆಕೆಯ ಕರುಳ ಕುಡಿಗೆ ಸರ್ವವೂ ಶುಭವಾಗಲಿ ಎಂದು ಹರಸುವ ಸಂಪ್ರದಾಯಬದ್ಧ ಶಾಸ್ತ್ರವಾಗಿದೆ ಎಂದರು.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವನಿತಾ ಮಾತನಾಡಿ, ಮಹಿಳೆಯರು ಗರ್ಭಧರಿಸಿದ ಮೊದಲ ತಿಂಗಳಲ್ಲಿಯೇ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತರ ಮೂಲಕ ತಾಯಿ ಕಾರ್ಡ್ ಮಾಡಿಸಬೇಕು. ಪ್ರತಿ ತಿಂಗಳು ವೈದ್ಯರ ಸಲಹೆ ಪಡೆದು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಬೆಂಬಳೂರು ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಬಿಇ ಎಂಬ ಕಾರ್ಯಕ್ರಮ ಅಡಿಯಲ್ಲಿ ಸೀಮಂತ, ಅಕ್ಷರಾಭ್ಯಾಸ, ಅನ್ನ ಪ್ರಾಶನವನ್ನು ಗರ್ಭಿಣಿಯರು ಹಾಗೂ ಮಕ್ಕಳಿಗೆ ಏರ್ಪಡಿಸಲಾಗಿದೆ. ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಅಂಗನವಾಡಿ ಕೇಂದ್ರದಿಂದ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಹಾರ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರು ಉತ್ತಮ ಗುಣಮಟ್ಟದ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವ ಮೂಲಕ ಮಗುವಿನ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯದ ಸುಧಾರಣೆಗೂ ಒತ್ತು ನೀಡಬೇಕು ಎಂದರು‌.

ಗ್ರಾಮದ ಮುಖಂಡರಾದ ಸತ್ಯ, ದೊಡ್ಡಾಕುಂದ ಅಂಗನವಾಡಿ ಕಾರ್ಯಕರ್ತೆ ನಿರ್ಮಲ, ಊರುಗುತ್ತಿ ಅಂಗನವಾಡಿ ಕಾರ್ಯಕರ್ತೆ ಶೋಭಾ, ಶಿರಹ ಅಂಗನವಾಡಿ ಕಾರ್ಯಕರ್ತೆ ವನಿತ, ಕ್ಯಾತೆ ಅಂಗನವಾಡಿ ಕಾರ್ಯಕರ್ತೆ ‌ವಿಮಲ, ಶಿವರಳ್ಳಿ ಅಂಗನವಾಡಿ ಕಾರ್ಯಕರ್ತೆ ರಾಣಿ, ಬ್ಯಾಡಗೊಟ್ಟ ಅಂಗನವಾಡಿ ಕಾರ್ಯಕರ್ತೆ ಪವಿತ್ರ  ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.