ನಾಪೋಕ್ಲು: ಕಾವೇರಿ ನದಿ ತೀರದ ಪವಿತ್ರ ಯಾತ್ರಾಸ್ಥಳ ಬಲಮುರಿಯಲ್ಲಿ ಶನಿವಾರ ವಾರ್ಷಿಕ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಅಧಿಕ ಸಂಖ್ಯೆಯ ಭಕ್ತರು ಕಾವೇರಿ ತೀರ್ಥಸ್ನಾನ ಮಾಡಿದರು. ಕೇಶ ಮುಂಡನ, ಪಿಂಡಪ್ರದಾನ ಮತ್ತಿತರ ಕಾರ್ಯಗಳು ಜರುಗಿದವು.
ಮೂರ್ನಾಡು, ನಾಪೋಕ್ಲು, ಹೊದ್ದೂರು, ಕಬಡಕೇರಿ, ಪಾಲೂರು, ಪಾರಾಣೆ ಮತ್ತಿತರ ಭಾಗಗಳ ಭಕ್ತರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಅಧಿಕ ಸಂಖ್ಯೆಯ ಭಕ್ತರುಶ್ರದ್ಧೆಯಿಂದ ಪಾಲ್ಗೊಂಡರು. ಮಧ್ಯಾಹ್ನ ಮಹಾಪೂಜೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.
ಅಗಸ್ತ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ ಮಾತನಾಡಿ, ‘ತಲಕಾವೇರಿಯಲ್ಲಿ ಕಾವೇರಿಯು ತೀರ್ಥ ರೂಪಿಣಿಯಾಗಿ ಹರಿದ ಮರುದಿನ ಬಲಮುರಿಯಲ್ಲಿ ಉತ್ಸವವನ್ನು ಆಚರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಅಗಸ್ತ್ಯ ಮಹರ್ಷಿ ಪೂಜಿಸಿದ ಸ್ಥಳವಾದ ಈ ಕ್ಷೇತ್ರ ಬಹಳ ಮಹತ್ವವನ್ನು ಹೊಂದಿದ್ದು ತಲಕಾವೇರಿ ಕ್ಷೇತ್ರಕ್ಕೆ ಇರುವಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಬಲಮುರಿಯಲ್ಲಿ ಮಧ್ಯಾಹ್ನ 11.30 ಕ್ಕೆ ಕಾವೇರಿ ನದಿಗೆ ಮಹಾಮಂಗಳಾರತಿ ನೆರವೇರಿಸಲಾಗಿದೆ. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಪೂಜೆ ಕೈಗೊಳ್ಳಲಾಗಿದ್ದು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು’ ಎಂದರು.
ಅನ್ನಸಂತರ್ಪಣೆ ಸಮಿತಿಯ ಅಧ್ಯಕ್ಷ ಬೊಳ್ಳಚೆಟ್ಟಿರ ಚಟ್ಟಿಚ್ಚ ಮಾತನಾಡಿ, ಗ್ರಾಮದ 21 ಸದಸ್ಯರು ಒಟ್ಟುಗೂಡಿ ಅನ್ನದಾನ ಸಮಿತಿ ರಚಿಸಿದ್ದೇವೆ. ಗ್ರಾಮಸ್ಥರ ದೇಣಿಗೆಯನ್ನು ಬಳಸಿ ಬಲಮುರಿ ಜಾತ್ರೆಯಂದು ಭಕ್ತರಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಗುತ್ತಿದೆ ಎಂದರು.
ಆಗಸ್ತ್ಯೇಶ್ವರ ದೇವಾಲಯ ಸಮಿತಿ ಹಾಗೂ ಮಹಾದೇವ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಕ್ತಿಗೀತೆ ಗಾಯನ ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರು ಭಕ್ತಿಗೀತೆಗಳನ್ನು ಹಾಡಿ ಜಾತ್ರೆಗೆ ಮೆರುಗು ತಂದರು.
ಬಲಮುರಿ ಕ್ಷೇತ್ರದಲ್ಲಿ ಭಕ್ತರು ಬೆಳಗಿನಿಂದಲೇ ಪಿಂಡಪ್ರದಾನ ಮಾಡಿದರು. ಕೇಶ ಮುಂಡನ ಮಾಡಿಸಿಕೊಂಡರು. ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಮಹಾಬಲೇಶ್ವರ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಅನ್ನದಾನ ಸಮಿತಿ ಅಧ್ಯಕ್ಷ ಬೊಳ್ಳಚೆಟ್ಟಿರ ವಿಜಯ್ ಚೆಟ್ಟಿಚ್ಚ, ಉಪಾದ್ಯಕ್ಷ ಪಾಲಂದಿರ ಚಂಗಪ್ಪ, ಬಲಮುರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ, ಕಾಫಿ ಮಂಡಳಿ ಮಾಜಿ ಸದಸ್ಯೆ ತಾರಾಅಯ್ಯಮ್ಮ, ಪ್ರಮುಖರಾದ ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟಿರ ಸುರೇಶ್ ಪಾಲ್ಗೊಂಡಿದ್ದರು.
ಕಾವೇರಿ ಎಡದಂಡೆಯ ಕಣ್ವ ಮುನೀಶ್ವರ ದೇವಾಲಯದಲ್ಲಿಯೂ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಯಿತು. ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆ ನೆರವೇರಿತು. ಇದಕ್ಕೂ ಮುನ್ನ ಅರ್ಚಕವೃಂದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರು. ಅರ್ಚಕ ರವಿ ಕಲ್ಲೂರಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಮಧ್ಯಾಹ್ನ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಎರಡೂ ದೇವಾಲಯಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಉತ್ತಪ್ಪ, ಕಾರ್ಯದರ್ಶಿ ಚೇಯಂಡ ತಿಮ್ಮಯ್ಯ ಪಾಲ್ಗೊಂಡಿದ್ದರು.
ತ್ರಿವೇಣಿ ಸಂಗಮದಂತೆ ಅಭಿವೃದ್ಧಿ: ಪೊನ್ನಣ್ಣ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ ಮಾತನಾಡಿ ಅಗಸ್ತ್ಯ ಮಹರ್ಷಿ ಪೂಜಿಸಿದ ಸ್ಥಳವಾದ ಈ ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ದಿ ಹೊಂದಿಲ್ಲ. ಭಕ್ತರಿಗೆ ಶೌಚಾಲಯ ಅರ್ಚಕರಿಗೆ ಮನೆ ದೇವಾಲಯಕ್ಕೆ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿಕಾರ್ಯಗಳು ಆಗಬೇಕಿದೆ. ಶಾಸಕರು ಅನುದಾನ ನೀಡುವಂತೆ ಕೋರಿದರು. ದೇವಾಲಯ ಸಮಿತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸ ಕೆ.ಎಸ್.ಪೊನ್ನಣ್ಣ ಬಲಮುರಿ ಯನ್ನು ಹೊಂದಿದ ಸ್ಥಳ. ತ್ರಿವೇಣಿ ಸಂಗಮದಲ್ಲಿ ಅಭಿವೃದ್ಧಿ ಪಡಿಸಲಾಗಿರುವಂತೆ ಕಾವೇರಿ ನೀರಾವರಿ ನಿಗಮದಿಂದ ಕಾವೇರಿ ಸೇತುವೆ ಮತ್ತು ನದಿ ಭಾಗದ ಉನ್ನತೀಕರಣ ಮಾಡುವಂತಹ ಯೋಜನೆ ರೂಪಿಸಲಾಗುವುದು ಎಂದರು. ಮೂರ್ನಾಡು ಕೊಡವ ಸಮಾಜದ ಕಾರ್ಯದರ್ಶಿ ಸೂರಜ್ ತಮ್ಮಯ್ಯ ನೆರವಂಡ ಕ್ಯಾಪ್ಟನ್ ಸುಭಾಷ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.