ವಿರಾಜಪೇಟೆ: ಪಟ್ಟಣದ ಎವೆಂಜರ್ಸ್ ಬ್ಯಾಸ್ಕೆಟ್ ಬಾಲ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ‘ಕೊಡಗು ಬ್ಯಾಸ್ಕೆಟ್ ಬಾಲ್ ಲೀಗ್-2' ನಲ್ಲಿ ಮಳೆಯಿಂದಾಗಿ ಗೋಣಿಕೊಪ್ಪಲಿನ ಡಿ.ಕೋಚ್ ಹಾಗೂ ಪೊನ್ನಂಪೇಟೆ ಟೀಗಲ್ ಹೂಫ್ ಸ್ಟಾರ್ ತಂಡಗಳು ಜಂಟಿಯಾಗಿ ಪ್ರಶಸ್ತಿಯನ್ನು ಪಡೆದುಕೊಂಡವು.
ಪಟ್ಟಣದ ಪ್ರಗತಿ ಶಾಲೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಿ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಆಯೋಜಕರು ಘೋಷಿಸಿದರು.
ಮೊದಲ ಸೆಮಿಫೈನಲ್‌ನಲ್ಲಿ ವಿರಾಜಪೇಟೆಯ ಬ್ಲಾಕ್ ಕೋಬ್ರಾಸ್ ತಂಡವನ್ನು ಮತ್ತು ಗೋಣಿಕೊಪ್ಪಲಿನ ಡಿ.ಕೋಚ್ ತಂಡವು 54-37 ಪಾಯಿಂಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ರೋಚಕ ದ್ವಿತೀಯ ಸೆಮಿಫೈನಲ್‌ನಲ್ಲಿ ಪೊನ್ನಂಪೇಟೆಯ ಟೀಗಲ್ ಹೂಫ್ ಸ್ಟಾರ್ ತಂಡವು ಮಡಿಕೇರಿಯ ಮಾರ್ಷಲ್ಸ್ ತಂಡವನ್ನು 45-43 ಪಾಯಿಂಟ್‌ಗಳಿಂದ ಮಣಿಸಿತ್ತು.
ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ಸಮಾನವಾಗಿ ನೀಡಲಾಯಿತು. ಟೂರ್ನಿಯ ಉತ್ತಮ ಗುರಿಕಾರ ಪ್ರಶಸ್ತಿಯನ್ನು ಅರ್ಪಣ್, ಉತ್ತಮ ರಕ್ಷಣಾತ್ಮಕ ಆಟಗಾರ ಪ್ರಶಸ್ತಿಯನ್ನು ಹೇಮು ಮುದ್ದಯ್ಯ, ಉತ್ತಮ ಕಲಾತ್ಮಕ ಆಟಗಾರ ಪ್ರಶಸ್ತಿಯನ್ನು ಸೋನಂ ಮತ್ತು ಅಮೂಲ್ಯ ಆಟಗಾರರಾಗಿ ಪ್ರಶಸ್ತಿಯನ್ನು ಪರದಂಡ ಬೋಪಣ್ಣ ಪಡೆದುಕೊಂಡರು.
ಟೂರ್ನಿಯಲ್ಲಿ ಮಡಿಕೇರಿ, ಗೋಣಿಕೊಪ್ಪಲು, ಪೊನ್ನಂಪೇಟೆ, ವಿರಾಜಪೇಟೆ ಸೇರಿದಂತೆ ವಿವಿಧ ಸ್ಥಳಗಳಿಂದ ಒಟ್ಟು 6 ತಂಡಗಳು ಈ ಲೀಗ್ ಟೂರ್ನಿಯಲ್ಲಿ ಭಾಗವಹಿಸಿದ್ದವು.
ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ತೀರ್ಪುಗಾರರು ಟೂರ್ನಿಯಲ್ಲಿ ಕಾರ್ಯನಿರ್ವಹಿಸಿದ್ದರು. ಬ್ಯಾಸ್ಕೆಟ್ ಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಪರದಂಡ ಬೋಪಣ್ಣ ಭಾಗವಹಿಸಿದ್ದು ವಿಶೇಷವಾಗಿತ್ತು.
ಸಮಾರೋಪ ಸಮಾರಂಭ: ಡಿ.ಕೊಚ್ ಸಂಸ್ಥೆ ಸಂಸ್ಥಾಪಕ ನಿತೀನ್ ಕುಂಡಚ್ಚೀರ ಮಾತನಾಡಿ, ಯುವಜನರು ಕ್ರೀಡೆಯ ಬಗ್ಗೆ ಆಸಕ್ತಿ ತೋರಬೇಕು. ಜಿಲ್ಲೆಯಲ್ಲಿರುವ ಬೆರಳೆಣಿಕೆಯಷ್ಟು ಮಂದಿ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುಗಳು ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಕೌಶಲವನ್ನು ತೋರುತ್ತಿದ್ದಾರೆ ಎಂದರು.
ಜಿಲ್ಲೆಯ ಹಿರಿಯ ಬ್ಯಾಸ್ಕೆಟ್‌ಬಾಲ್ ಪಟು ಚೇಂದ್ರಿಮಾಡ ಗಣಪತಿ ಮಾತನಾಡಿ, ಹಿಂದೆ ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಬ್ಯಸ್ಕೆಟ್‌ಬಾಲ್ ಕ್ರೀಡಾಂಗಣಗಳಿದ್ದವು. ಇದೀಗ 17 ಕ್ರೀಡಾಂಗಣಗಳಿವೆ ಎಂದರು. ಹಿರಿಯ ಕ್ರೀಡಾಪಟು ಸೋಮಯ್ಯ ಸಿ.ಎಸ್ ಅವರು ಮಾತನಾಡಿದರು. ಹಿರಿಯ ಆಟಗಾರರಾದ ಲೋಹಿತ್ ಮಡಿಕೇರಿ ಮತ್ತು ಸೋನಂ ಕುಶಾಲನಗರ ಅವರನ್ನು ಸನ್ಮಾನಿಸಲಾಯಿತು. ರವೂಫ್, ತಯ್ಯಾಬ್, ಝಬಿ ಮತ್ತು ಮಾದಂಡ ತಿಮ್ಮಯ್ಯ, ಎವೆಂಜರ್ಸ್ ಕ್ಲಬ್‌ನ ಇರ್ಷಾದ್, ನೌಶೀಬ್ ಮತ್ತು ಸದಸ್ಯರು, ವಿವಿಧ ತಂಡಗಳ ಮಾಲೀಕರು, ಪ್ರಮುಖ ಪ್ರಯೋಜಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.