ADVERTISEMENT

ಮಡಿಕೇರಿ: ಚುನಾವಣೆಗೂ ಮೊದಲೇ ಮತಗಟ್ಟೆಗೆ ಮತಯಂತ್ರ!

ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 4:58 IST
Last Updated 22 ಫೆಬ್ರುವರಿ 2023, 4:58 IST
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯುನ್ಮಾನ ಮತಯಂ‌ತ್ರದಲ್ಲಿ ಮತದಾನ ಮಾಡುವ ಮೂಲಕ ಮಂಗಳವಾರ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯುನ್ಮಾನ ಮತಯಂ‌ತ್ರದಲ್ಲಿ ಮತದಾನ ಮಾಡುವ ಮೂಲಕ ಮಂಗಳವಾರ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು   

ಮಡಿಕೇರಿ: ವಿಧಾನಸಭಾ ಚುನಾ ವಣೆಗೂ ಮೊದಲೇ ವಿದ್ಯುನ್ಮಾನ ಮತಯಂತ್ರಗಳು ಎಲ್ಲ ಮತಗಟ್ಟೆ ಗಳಿಗೂ ಬರಲಿದ್ದು, ಇದರಲ್ಲಿ ಮತದಾರರು ಅಣಕು ಮತದಾನ ಮಾಡುವ ಮೂಲಕ ಮತಯಂತ್ರದ ಕಾರ್ಯನಿರ್ವಹಣೆಯನ್ನು ಸ್ವಯಂ ತಿಳಿದುಕೊಳ್ಳಬಹುದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿ ಗಳಲ್ಲಿ ಸದ್ಯ ಎರಡು ಮತಯಂತ್ರಗಳನ್ನು ಇರಿಸಲಾಗಿದೆ. ಈ ಎರಡೂ ಯಂತ್ರಗಳಲ್ಲಿ ಸಾರ್ವಜನಿಕರು ಅಣಕು ಮತದಾನ ಮಾಡಬಹುದು. ಈ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನೂ ದೃಢೀಕರಿಸಿಕೊಳ್ಳ ಬಹುದು.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ‘ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುವವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ. ಜೊತೆಗೆ, ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ 542 ಮತಗಟ್ಟೆ ವ್ಯಾಪ್ತಿಯ ಲ್ಲಿಯೂ ಸಹ ಜಾಗೃತಿ ಮೂಡಿಸಲಾ ಗುತ್ತದೆ. ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಅವಕಾಶವನ್ನು ಬಳಸಿಕೊಳ್ಳ ಬಹುದು ಎಂದು ತಿಳಿಸಿದರು.

ADVERTISEMENT

ಭಾರತ ಚುನಾವಣಾ ಆಯೋಗದಿಂದ ಕೊಡಗು ಜಿಲ್ಲೆಗೆ ಹೈದರಾಬಾದಿನ ಭಾರತೀಯ ವಿದ್ಯುನ್ಮಾನ ನಿಗಮದಿಂದ ವಿವಿಎಂ ಮತ್ತು ವಿವಿಪ್ಯಾಟ್ ಪೂರೈಕೆಯಾಗಿದ್ದು, ಅದರಲ್ಲಿ ಬ್ಯಾಲೆಟ್ ಯುನಿಟ್ 1,013, ಕಂಟ್ರೋಲ್ ಯುನಿಟ್ 711 ಮತ್ತು ವಿವಿ ಪ್ಯಾಟ್ 768 ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನಾ ಕಾರ್ಯವನ್ನು ಭಾರತೀಯ ವಿದ್ಯುನ್ಮಾನ ನಿಗಮದ ಎಂಜಿನಿಯರ್‌ಗಳು ನಡೆಸಿದರು. ಇದರಲ್ಲಿ ಒಂದು ಬ್ಯಾಲೆಟ್ ಯೂನಿಟ್ ಮಾತ್ರ ತಿರಸ್ಕೃತಗೊಂಡಿತ್ತು ಎಂದರು.

ಫೆಬ್ರುವರಿ ಮೊದಲ ವಾರದಲ್ಲಿ ವಿದ್ಯುನ್ಮಾನ ಮತಯಂತ್ರದ ಮೊದಲ ಹಂತದ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿತ್ತು. ಅದರಂತೆ 1,011 ಬ್ಯಾಲೆಟ್ ಯೂನಿಟ್ ಸರಿಯಾಗಿದ್ದು, ಒಂದು ತಿರಸ್ಕೃತಗೊಂಡಿದೆ. 704 ಕಂಟ್ರೋಲ್ ಯುನಿಟ್ ಸರಿಯಾಗಿದ್ದು, 7 ತಿರಸ್ಕೃತಗೊಂಡವು. 765 ವಿವಿ ಪ್ಯಾಟ್ ಸರಿಯಾಗಿದ್ದು, 3 ತಿರಸ್ಕೃತಗೊಂಡವು. ತಿರಸ್ಕೃತಗೊಂಡವುಗಳನ್ನು ನಿಗಮಕ್ಕೆ ಹಿಂತಿರುಗಿಸಲಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ಕೆ ಶೇ 10ರಷ್ಟು ವಿವಿಎಂ ಮತ್ತು ವಿವಿಪ್ಯಾಟ್‍ನ್ನು ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ರಾಜಕೀಯ ಪಕ್ಷಗಳ ಪ್ರಮುಖರಾದ ಕೆ.ಎಂ.ಅಪ್ಪಣ್ಣ (ಬಿಜೆಪಿ), ಸದಾ ಮುದ್ದಪ್ಪ (ಕಾಂಗ್ರೆಸ್), ರಮೇಶ್ (ಸಿಪಿಐಎಂ), ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.