ADVERTISEMENT

ಗೋಣಿಕೊಪ್ಪಲು: ರೋಮಾಂಚನಕಾರಿ ಬೈಕ್ ಸ್ಟಂಟ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:00 IST
Last Updated 29 ಸೆಪ್ಟೆಂಬರ್ 2025, 6:00 IST
ಗೋಣಿಕೊಪ್ಪಲು ಯುವ ದಸರಾ ಅಂಗವಾಗಿ ನಡೆದ ಬೈಸಿಕಲ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಯುವಕರು
ಗೋಣಿಕೊಪ್ಪಲು ಯುವ ದಸರಾ ಅಂಗವಾಗಿ ನಡೆದ ಬೈಸಿಕಲ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಯುವಕರು   

ಗೋಣಿಕೊಪ್ಪಲು: ಕೈ ಬಿಟ್ಟು ಒಂದೇ ಚಕ್ರದಲ್ಲಿ ಮೋಟಾರ್ ಬೈಕ್ ಓಡಿಸಿದ ಪರಿ, ಹ್ಯಾಂಡಲ್ ಹಿಡಿಯದೆ ಭೋರ್ಗರೆಯುತ್ತಿದ್ದ ಬೈಕ್ ಅನ್ನು ಕಾಲಿನಲ್ಲಿಯೇ ನಿಯಂತ್ರಣಗೊಳಿಸಿ ಮುಂದೆ ಚಲಿಸಿದ ರೀತಿಯು ಭಾನುವಾರ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ನೋಡುಗರನ್ನು ನಿಬ್ಬೆರಗಾಗಿಸಿತು.

ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜನೆಗೊಳಿಸಿದ್ದ ಯುವ ದಸರಾದಲ್ಲಿ 25 ವರ್ಷದೊಳಗಿನ ಯುವಕರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಭೋರ್ಗರೆಯುತ್ತಾ ಮುನ್ನುಗ್ಗಿದರು.

ಬಸ್ ನಿಲ್ದಾಣದಲ್ಲಿ ನಡೆದ ಬೈಕ್ ಸ್ಟಂಟ್ ಸ್ಪರ್ಧೆಯಲ್ಲಿ ಯುವಕರು ಜೀವದ ಹಂಗು ತೊರೆದು ಬೈಕ್ ಓಡಿಸಿದ ರೀತಿ ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು. ಕಿವಿಗಡಚಿಕ್ಕುವ ಶಬ್ದ ಮಾಡುತ್ತಾ ನಿಂತಲ್ಲಿಯೇ ಬೈಕ್ ಓಡಿಸುತ್ತಿದ್ದ ಬೈಕ್ ಸವಾರರ ಚಾಣಾಕ್ಷತನ ಮತ್ತು ಕೌಶಲವನ್ನು ಕಂಡು ಬೆರಗಾದರು.

ADVERTISEMENT

ಬೈಕ್ ಸವಾರರಾದ ಮೈಸೂರಿನ ಸಿದ್ದಿಕ್, ಮುನೀರ್, ಸ್ಥಳೀಯರಾದ ದೀಪಕ್, ತಿಮ್ಮಯ್ಯ ಮೊದಲಾದವರು ಬೈಕ್ ಚಾಲನೆ ಮಾಡಿದರು. ಸ್ಪರ್ಧೆಯನ್ನು ಪೊಲೀಸರೂ ಕೂಡ ಅಚ್ಚರಿಯಿಂದ ನೋಡಿದರು.

ಗೋಣಿಕೊಪ್ಪಲು ಸುತ್ತಮುತ್ತಲಿನ ಕಾಫಿ ತೋಟದ ನಡುವಿನ ತಿರುವುಮುರುವಿನ ರಸ್ತೆಯಲ್ಲಿ ನಡೆದ ಬೈಸಿಕಲ್ ರ್‍ಯಾಲಿಯಲ್ಲಿ ಪಾಲ್ಗೊಂಡ ಯುವಕರು ಹಳ್ಳ ದಿಣ್ಣೆಗಳ ನಡುವೆ ಏದುಸಿರು ಬಿಡುತ್ತಾ ಸಾಗುತ್ತಿದ್ದ ರೀತಿ ಸಾಹಸಮಯ ಕ್ರೀಡೆಗೆ ಸಾಕ್ಷಿಯಾಗಿತ್ತು.

ರಕ್ತದಾನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಯುವ ದಸರಾದಲ್ಲಿ ಯುವಕರು ರಕ್ತದಾನ ಮಾಡಿದರು. ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಭಾನುವಾರ ರಕ್ತದಾನ ಮಾಡುವ ಮೂಲಕ 59 ಬಾರಿ ರಕ್ತದಾನ ಮಾಡಿದ ಹಿರಿಮೆಗೆ ಪಾತ್ರರಾದರು.

ಯುವ ದಸರಾ ಸಮಿತಿ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ರೆಡ್ ಕ್ರಾಸ್ ಪೊನ್ನಂಪೇಟೆ ರೆಡ್ ಕ್ರಾಸ್ ಸಂಚಾಲಕ ಬಿ.ಎನ್. ಪ್ರಕಾಶ್, ದೀಲನ್ ಚಂಗಪ್ಪ, ಕಾರ್ಯದರ್ಶಿ ಚಂದನ್ ಕಾಮತ್, ಸಹಕಾರ್ಯದರ್ಶಿ ಎಂ.ಎಂ.ನಾಗೇಶ್, ಕೋಶಾಧಿಕಾರಿ ಪಿ.ಜಿ.ರಾಜಶೇಖರ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆ ಚೈತ್ರ ಚೇತನ್, ಜಗದೀಶ್ ಜೋಡುಬೀಟಿ, ದಸರಾ ಸಮಿತಿ ಉಪಾಧ್ಯಕ್ಷ ನಾಯಂದಿರ ಶಿವಾಜಿ, ಗಣೇಶ ರೈ, ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಮುಖ್ಯ ಶಿಕ್ಷಕ ಕುಮಾರ್ ಹಾಜರಿದ್ದರು.

ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ನಡೆದ ಬೈಕ್ ಸ್ಟಂಟ್‌ನಲ್ಲಿ ಯುವಕರು ಸಾಹಸ ರೀತಿಯಲ್ಲಿ ಬೈಕ್ ಓಡಿಸಿ ಪ್ರೇಕ್ಷರನ್ನು ರೋಮಾಂಚನಗೊಳಿಸಿದರು
ಒಂದೇ ಚಕ್ರದಲ್ಲಿ ಬೈಕ್ ನಡೆಸಿದ ರೀತಿ
ಗೋಣಿಕೊಪ್ಪಲು ಯುವ ದಸರಾ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ದಿಲನ್ ಚಂಗಪ್ಪ ಬಿ.ಎನ್.ಪ್ರಕಾಶ್ ಚಂದನ್ ಕಾಮತ್ ಪಾಲ್ಗೊಂಡರು

ಸೈಕಲ್ ರೇಸ್ ಸ್ಪರ್ಧೆ ವಿಜೇತರು 15ರ ವಯೋಮಿತಿ ಒಳಗಿನ ಬಾಲಕರ ವಿಭಾಗದಲ್ಲಿ ಬಿ.ಜೆ.ಕುಶಾಲಪ್ಪ ಪ್ರಥಮ ವಿರನ್ ಸೋಮಣ್ಣ ದ್ವಿತೀಯ ಬಿ.ಎಂ.ಕೌಶಿಕ್ ತೃತೀಯ ಬಹುಮಾನ ಪಡೆದರು. 15 ವರ್ಷದೊಳಗಿನ ಬಾಲಕಿಯರಲ್ಲಿ ವೇಪ್ರಿಯ ಪಾಟೀಲ್ ಪ್ರಥಮ ಟಿ.ಎಂ.ವಂದನಾ ದ್ವಿತೀಯ ಟಿ.ಎಂ.ರಿಶಿ ತೃತೀಯ ಬಹುಮಾನ ಪಡೆದರು. ಮುಕ್ತ ವಿಭಾಗದಲ್ಲಿ ಕೃತಿನ್ ಮಿತಿ ಪ್ರಥಮ ಎಚ್. ಕೃತಿಕ್ ದ್ವಿತೀಯ ಸಚಿನ್ ಕಾಂತಿ ತೃತೀಯ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.