ADVERTISEMENT

ಸಾಹಿತ್ಯ ಸಮ್ಮೇಳನ ಜಾತಿ ಧರ್ಮದ ಸಮ್ಮೇಳನವಾಗಿದೆ‌, ಬಹಿಷ್ಕರಿಸುತ್ತೇನೆ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 8:30 IST
Last Updated 4 ಜನವರಿ 2023, 8:30 IST
ಎಚ್ ವಿಶ್ವನಾಥ್
ಎಚ್ ವಿಶ್ವನಾಥ್    

ಮಡಿಕೇರಿ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ತಿಳಿಸಿದರು.

ಸಾಹಿತ್ಯ ಸಮ್ಮೇಳನವು ಜಾತಿ ಧರ್ಮದ ಸಮ್ಮೇಳನವಾಗಿದೆ‌. ಜತೆಗೆ ಅದೊಂದು ದಿಕ್ಕುದೆಸೆ ಇಲ್ಲದ ಸಮ್ಮೇಳನ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸರ್ಕಾರ ₹20 ಕೋಟಿ ಹಣ ನೀಡಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲೆ ಸಮ್ಮೇಳನ ನಡೆಯುತ್ತಿದೆ‌. ಒಂದೇ ಒಂದು ಪೂರ್ವಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಈಗಾಗಲೇ ಹಲವರಿಂದ ಅಸಮಾಧಾನಗಳು ಹೊರಹೊಮ್ಮಿವೆ. ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನನಗೂ ಆಹ್ವಾನ ಪತ್ರಿಕೆ ಕಳುಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷದ ಸಮ್ಮೇಳನದಂತೆ ಆಹ್ವಾನಪತ್ರಿಕೆ ಕಾಣುತ್ತಿದೆ. ಸನ್ಮಾನಿತರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಆ ಕುರಿತು ಒಂದೇ ಒಂದು ವಿಚಾರ ಗೋಷ್ಠಿಯೂ ಇಲ್ಲ. ಪ್ರಜಾತಂತ್ರದ ಜೀವಾಳವಾದ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ. ಆ ಕುರಿತು ಒಂದೂ ಗೋಷ್ಠಿಯೂ ಇಲ್ಲ‌. ಇದೊಂದು ಡೋಂಗಿ ಸಮ್ಮೇಳ‌ನ ಎಂದು ಹರಿಹಾಯ್ದರು.

ಮೀಸಲಾತಿ ವಿಷಯದಲ್ಲಿ ಸರ್ಕಾರ ಮೋಸ ಮಾಡುತ್ತಿದೆ. ಮೀಸಲಾತಿಯ ಅರ್ಥವನ್ನೇ ಬುಡಮೇಲು ಮಾಡಿದೆ. ಕಡಲೆಕಾಯಿ ತಿನ್ನುವವರಿಂದ ಕಿತ್ತುಕೊಂಡು ಬಾದಾಮಿ ತಿನ್ನುವವರಿಗೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯದವರಿಗೆ ಈಗ ನೀಡಿರುವ ಮೀಸಲಾತಿಯನ್ನು ಯಾವ ಅಧ್ಯಯನದ ಅಧಾರದ ಮೇಲೆ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಅವರ ಮೇಲೆ ಅಭಿಮಾನ ಇದೆ. ಆದರೆ ಇಂದು ಬಜರಂಗದಳ, ಶ್ರೀರಾಮ ಸೇನೆಯಂತಹ ಸಂಘಟನೆಗಳೇ ಆಡಳಿತದಲ್ಲಿ ಭಾಗಿಯಾಗಿವೆ. ಜನರಿಗೆ ಒಳ್ಳೆಯದಾಗುತ್ತದೆ ಎಂದು ಜನಾದೇಶ ಇಲ್ಲದ ಈ ಸರ್ಕಾರವನ್ನು ತಂದೆವು. ಆದರೆ ಸರ್ಕಾರ ಜನರಿಗೆ ಒಳಿತು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಳಿನ್ ಕುಮಾರ್ ಕಟೀಲ್ ಹೇಳಿಕೆ ಸರಿಯಲ್ಲ; ವಿಶ್ವನಾಥ್

ADVERTISEMENT

ಮಡಿಕೇರಿ: ರಸ್ತೆ, ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡದೆ ಲವ್ ಜಿಹಾದ್ ನಂತಹ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಟೀಕಿಸಿದರು.

ಒಂದು ರಾಜ್ಯದ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ರಸ್ತೆ, ಚರಂಡಿ ಅವರಿಗೆ ಸಣ್ಣ ಪುಟ್ಟ ವಿಷಯ ಇರಬಹುದು.‌ ಆದರೆ, ಸಾಮಾನ್ಯ ಜನರಿಗೆ ಇದೆ ದೊಡ್ಡ ವಿಷಯ. ಆದರೆ ಕಟೀಲ್ ಅವರ ಹೇಳಿಕೆ ಜನರ ದಿಕ್ಕು ತಪ್ಪಿಸುವಂತದ್ದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.