ADVERTISEMENT

ಪ್ರಧಾನಿಗೆ ಅವಹೇಳನ ಖಂಡಿಸಿ ಬಿಜೆಪಿ ಪ್ರತಿಭಟನೆ, ಆಕ್ರೋಶ

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ, ಟಿಪ್ಪು ಜಯಂತಿ ಆಚರಿಸದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:41 IST
Last Updated 12 ಡಿಸೆಂಬರ್ 2025, 2:41 IST
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಮಡಿಕೇರಿಯ ಇಂದಿರಾ ಗಾಂಧಿ ವೃತ್ತ (ಚೌಕಿ)ದಲ್ಲಿ ಪ್ರತಿಭಟನೆ ನಡೆಸಿದರು
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಮಡಿಕೇರಿಯ ಇಂದಿರಾ ಗಾಂಧಿ ವೃತ್ತ (ಚೌಕಿ)ದಲ್ಲಿ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಪ್ರಧಾನಮಂತ್ರಿಗೆ ಅವಹೇಳನ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಾಗೂ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಗುರುವಾರ ಭಾರಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಸೇರಿದ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದರಿಂದ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತು. 

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ‘ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶಾಂತಿಯನ್ನು ಕದಡುವ ಉದ್ದೇಶದಿಂದ ಕೆಲವರು ದೇಶದ ಪ್ರಧಾನಮಂತ್ರಿ ಕುರಿತು ಅಶ್ಲೀಲವಾಗಿ ನಿಂದಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟು ಮಾತ್ರ ಸಾಲದು, ಗಡಿಪಾರು ಮಾಡುವುದು ಸೇರಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ವಿಧಾನಸಭಾ ಅಧಿವೇಶನದಲ್ಲಿ ಶಾಸಕರೊಬ್ಬರು ಟಿಪ್ಪು ಜಯಂತಿ ಆಚರಿಸಬೇಕು ಎಂದು ಪ್ರಸ್ತಾಪ ಮಾಡಿದ್ದಾರೆ. ಹಿಂದೆಯೂ ಕಾಂಗ್ರೆಸ್ ಸರ್ಕಾರವೇ ಟಿಪ್ಪು ಜಯಂತಿ ಆಚರಿಸುವ ಮೂಲಕ ಕೊಡಗು ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಪ್ರಸ್ತಾಪ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲು ನಾವು ಬಿಡುವುದಿಲ್ಲ’ ಎಂದರು.

ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಪ್ರಧಾನಿ ಕುರಿತು ತೀರಾ ತುಚ್ಛವಾಗಿ ಮಾತನಾಡಿರುವುದು ಸರಿಯಲ್ಲ. ನಮ್ಮ ದೇಶದ ಅನ್ನ ತಿಂದು, ನೀರು ಕುಡಿದು, ಈ ದೇಶದ ಪ್ರಧಾನಿ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿಗಳಿಗೆ ಇಲ್ಲಿ ವಾಸಿಸಲು ಹಕ್ಕಿಲ್ಲ. ಕೂಡಲೆ, ಆರೋಪಿಗಳನ್ನು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

ಆರೋಪಿಗಳು ಕೆಲಸ ಮಾಡಿದ್ದ ಮಳಿಗೆಗೆ ಮುತ್ತಿಗೆ‌

ಪ್ರಧಾನಮಂತ್ರಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದ ಆರೋಪಿಗಳು ಕೆಲಸ ಮಾಡುತ್ತಿದ್ದ ಮಳಿಗೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಮಳಿಗೆಯ ಬಾಗಿಲಿಗೆ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದರು. ಒಂದೆರಡು ಕಲ್ಲುಗಳನ್ನೂ ಮಳಿಗೆಯತ್ತ ತೂರಿದರು.

ಶಟರ್ ತೆರೆದು ಮಳಿಗೆಯ ಒಳಗೆ ಏನಿದೆ ಎಂಬುದನ್ನು ತಪಾಸಣೆ ಮಾಡಬೇಕು ಎಂದು ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದರು.

ಪ್ರಕರಣ ಕುರಿತು ಈಗಾಗಲೇ ಎಲ್ಲ ಬಗೆಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿ ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ವೇಳೆ ಕೆಲಕಾಲ ತಳ್ಳಾಟ ನೂಕಾಟ ನಡೆಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಮನುಮುತ್ತಪ್ಪ, ಸಜಿಲ್ ಕೃಷ್ಣ, ಪಿ.ಎಂ.ರವಿ, ಬಿ.ಕೆ.ಅರುಣ್‌ಕುಮಾರ್, ಜಗದೀಶ್, ಸತೀಶ್, ಅನಿತಾ ಪೂವಯ್ಯ, ಮನು ಮಂಜುನಾಥ್ ಭಾಗವಹಿಸಿದ್ದರು.

ಪ್ರಧಾನಮಂತ್ರಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಟಿಪ್ಪು ಜಯಂತಿ ಆಚರಿಸಬಾರದು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಡಿಕೇರಿಯ ಇಂದಿರಾ ಗಾಂಧಿ ವೃತ್ತ (ಚೌಕಿ)ದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಪ್ರಧಾನಮಂತ್ರಿ ಅವರನ್ನು ಅವಹೇಳನ ಮಾಡಿದ ಪ್ರಕರಣದ ಆರೋಪಿಗಳು ಕೆಲಸ ಮಾಡುತ್ತಿದ್ದ ಮಳಿಗೆಗೆ ಬಿಜೆಪಿ ಕಾರ್ಯಕರ್ತರು ಗುರುವಾರ ಮುತ್ತಿಗೆ ಹಾಕಿದಾಗಿ ಪೊಲೀಸರು ತಡೆದರು

ಟಿಪ್ಪು ಜಯಂತಿ ವಿಚಾರದಲ್ಲಿ ಶಾಸಕರ ನಿಲುವೇನು?

ಟಿಪ್ಪು ಜಯಂತಿ ಆಚರಿಸುವ ವಿಚಾರದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕರ ನಿಲುವೇನು? ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ‘ನಾವು ಮುಸ್ಲಿಮರ ವಿರೋಧಿ ಅಲ್ಲ. ಅಬ್ದುಲ್ ಕಲಾಂ ಕೆ.ಎಸ್.ನಿಸಾರ್ ಅಹಮ್ಮದ್ ಅವರ ಜಯಂತಿ ಮಾಡಲಿ. ನಾವೂ ಭಾಗವಹಿಸುತ್ತೇವೆ. ಆದರೆ ಟಿಪ್ಪು ಜಯಂತಿಯನ್ನೇ ಮಾಡಬೇಕು ಎನ್ನುವುದು ಸಮಾಜವನ್ನು ಒಡೆಯುವ ತಂತ್ರ’ ಎಂದು ಅವರು ಆರೋಪಿಸಿದರು. ಮುಖ್ಯಮಂತ್ರಿಯ ಕಾನೂನು ಸಲಹೆಗಾರರು ಒಳ್ಳೆಯ ಸಲಹೆ ನೀಡಿ ಟಿಪ್ಪು ಜಯಂತಿ ಆಚರಿಸದಂತೆ ತಡೆಯಬೇಕು ಎಂದರು.

‘ಭಗಂಡೇಶ್ವರ ದೇಗುಲ ಹೊಳೆ ಪಾವಿತ್ರ್ಯತೆ ಉಳಿಸಿ’

‘ಭಗಂಡೇಶ್ವರ ದೇಗುಲದ ಆವರಣ ಹಾಗೂ ಪಕ್ಕದ ಹೊಳೆಯ ಪಾವಿತ್ರ್ಯತೆ ಉಳಿಸಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ‘ದೇಗುಲದ ಆವರಣದಲ್ಲಿ ಏನು ಕಟ್ಟುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಹೀಗೆ ಗುಪ್ತವಾಗಿ ಕಾಮಗಾರಿ ನಡೆಸುವುದಾದರೂ ಏಕೆ’ ಎಂದು ಪ್ರಶ್ನಿಸಿದರು. ಮುಖಂಡರಾದ ವಿ.ಕೆ.ಲೋಕೇಶ್ ಬಿ.ಕೆ.ಅರುಣ್‌ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.