ADVERTISEMENT

ಮಡಿಕೇರಿ | ಬಿಪಿಎಲ್‌, ಎಪಿಎಲ್‌ ಅರ್ಜಿದಾರರಿಗೂ ಪಡಿತರ

ಹೊರ ರಾಜ್ಯ, ಹೊರ ಜಿಲ್ಲೆಯ ಕಾರ್ಮಿಕರಿಗೆ ತಲುಪದ ಆಹಾರ ಕಿಟ್‌

ಅದಿತ್ಯ ಕೆ.ಎ.
Published 16 ಏಪ್ರಿಲ್ 2020, 2:22 IST
Last Updated 16 ಏಪ್ರಿಲ್ 2020, 2:22 IST
ನೆರವಿನ ನಿರೀಕ್ಷೆ... ಕುಶಾಲನಗರದ ಹೌಸಿಂಗ್‌ ಬೋರ್ಡ್‌ನ ಖಾಲಿ ಪ್ರದೇಶದಲ್ಲಿ ವಾಸ್ತವ್ಯ ಮಾಡಿರುವ ಹೊರ ಜಿಲ್ಲೆಯ ಕಾರ್ಮಿಕರು ನೆರವಿನ ನಿರೀಕ್ಷೆಯಲ್ಲಿದ್ಧಾರೆ 
ನೆರವಿನ ನಿರೀಕ್ಷೆ... ಕುಶಾಲನಗರದ ಹೌಸಿಂಗ್‌ ಬೋರ್ಡ್‌ನ ಖಾಲಿ ಪ್ರದೇಶದಲ್ಲಿ ವಾಸ್ತವ್ಯ ಮಾಡಿರುವ ಹೊರ ಜಿಲ್ಲೆಯ ಕಾರ್ಮಿಕರು ನೆರವಿನ ನಿರೀಕ್ಷೆಯಲ್ಲಿದ್ಧಾರೆ    

ಮಡಿಕೇರಿ: ದೇಶದಲ್ಲಿ ಲಾಕ್‌ಡೌನ್‌ 2.0 ಆರಂಭವಾಗಿದ್ದು ಮತ್ತೆ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ಧಾರೆ. ಏ.14ರ ಬಳಿಕ ಸ್ವಲ್ಪಮಟ್ಟಿಗೆ ವಿನಾಯಿತಿ ಸಿಗಬಹುದು ಎಂದು ಕಾರ್ಮಿಕರು ನಿರೀಕ್ಷಿಸಿದ್ದರು. ಆದರೆ, ಮೇ 3ರ ತನಕ ಲಾಕ್‌ಡೌನ್‌ ವಿಸ್ತರಣೆ ಆಗಿರುವುದು ಅವರ ದುಗುಡವನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವು ಕಾರ್ಮಿಕರು ಜಿಲ್ಲಾಡಳಿತದ ಪರಿಹಾರ ಕೇಂದ್ರ ಸೇರಿದ್ದರೆ, ಮತ್ತೆ ಕೆಲವರು ಕಾಫಿ ತೋಟದ ಲೈನ್‌ಮನೆಗಳಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ.

ಇನ್ನು ಎಪಿಎಲ್‌, ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದವರಿಗೆ ಪಡಿತರ ಸಿಗದೇ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಅವರಿಗೆ ಮೊದಲ ಹಂತದಲ್ಲಿ ಪಡಿತರ ಸಿಕ್ಕಿಲ್ಲ. ಕೊನೆಗೂ ಅವರಿಗೆ ಪಡಿತರ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ.

ಕೊಡಗು ಜಿಲ್ಲೆಯಲ್ಲಿ 5 ಸಾವಿರ ಮಂದಿ ಬಿ.ಪಿ.ಎಲ್‌, 3,300 ಕುಟುಂಬಗಳು ಎ.ಪಿ.ಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿವೆ. ಅಂತಹ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಸದ್ಯದಲ್ಲೇ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ADVERTISEMENT

ಏನೇನು ದಾಖಲೆ ಅಗತ್ಯ?: ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಕುಟುಂಬಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಹೋಗುವಾಗ ಆಧಾರ್‌ ಕಾರ್ಡ್‌ ಹಾಗೂ ಅರ್ಜಿಯ ಸಂಖ್ಯೆ ನೀಡಿದರೆ ಸಾಕು. ಆ ಕುಟುಂಬಕ್ಕೆ ಪಡಿತರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಶೇ 85 ಪೂರ್ಣ:ಇನ್ನು ಎ.ಪಿ.ಎಲ್‌, ಬಿ.ಪಿ.ಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ಹೊಂದಿರುವ ಕುಟುಂಬಕ್ಕೆ ಏಪ್ರಿಲ್‌, ಮೇ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಶೇ 85ರಷ್ಟು ಮಂದಿಗೆ ಪಡಿತರ ವಿತರಣೆ ಪೂರ್ಣಗೊಂಡಿದೆ.

ಆದರೆ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಕಾಫಿ ಎಸ್ಟೇಟ್‌ಗಳಿಗೆ ಕೂಲಿ ಕೆಲಸ ಅರಸಿ ಬಂದ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಅವರಿಗೆ ತೋಟದಲ್ಲಿ ಕೂಲಿಯೂ ಸಿಗುತ್ತಿಲ್ಲ. ಇತ್ತ ಕಾರ್ಡ್‌ ಇಲ್ಲದೇ ಪಡಿತರವೂ ಸಿಗುತ್ತಿಲ್ಲ. ಹಲವು ಕುಟುಂಬಗಳು ತಮ್ಮೂರಿನಲ್ಲಿಯೇ ದಾಖಲಾತಿ ಬಿಟ್ಟುಬಂದು ಸಮಸ್ಯೆಯ ಸುಳಿಗೆ ಸಿಲುಕಿವೆ. ಕಾರ್ಮಿಕ ಇಲಾಖೆ ಹಾಗೂ ಐ.ಟಿ.ಡಿ.ಪಿ ಇಲಾಖೆಯಿಂದ ಅಂದಾಜು 2 ಸಾವಿರ ಕುಟುಂಬಗಳಿಗೆ ಆಹಾರ್‌ ಕಿಟ್‌ ಲಭಿಸಿದೆ. ಇನ್ನು ಕುಗ್ರಾಮಗಳಲ್ಲಿ ಎಷ್ಟೇ ಕುಟುಂಬಗಳು ಆಹಾರ ಕಿಟ್‌ಗಾಗಿ ಕಾಯುತ್ತಿವೆ.

‘2ನೇ ಹಂತದ ವಿತರಣೆಯ ವೇಳೆ ದೂರದ ಗ್ರಾಮಗಳಲ್ಲಿ ನೆಲೆಸಿರುವ ಕಾರ್ಮಿಕ ಕುಟುಂಬಕ್ಕೆ ಆಹಾರ ಕಿಟ್‌ ತಲುಪಿಸಬೇಕು. ಜತೆಗೆ ತೋಟದ ಮಾಲೀಕರು ತಮ್ಮ ತೋಟದಲ್ಲಿರುವ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.