ADVERTISEMENT

ಸುಂಟಿಕೊಪ್ಪ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ತಪ್ಪದ ಸಂಕಟ

ಮಳೆ, ಗಾಳಿ ವೇಳೆ ನೆಟ್‌ವರ್ಕ್ ಇಲ್ಲ, ಗ್ರಾಹಕರಿಗೆ ತೊಂದರೆ

ಸುನಿಲ್ ಎಂ.ಎಸ್.
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಹಲವು ತಿಂಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪರ್ಕದಲ್ಲಿ ಬಹಳಷ್ಟು ಸಮಸ್ಯೆಗಳು ತಲೆದೋರಿದ್ದು, ಇದರಿಂದ ಈ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.

ನಿರ್ವಹಣೆಯ ಕೊರತೆಯಿಂದ ಏಳೆಂಟು ಗ್ರಾಮದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಗಾಳಿ ವಿಪರೀತವಾಗಿದ್ದು, ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕ್ಷಣದಲ್ಲೇ ಮೊಬೈಲ್ ಮತ್ತು ದೂರವಾಣಿ ಸಂಪರ್ಕ ಕಡಿತಗೊಳ್ಳುತ್ತದೆ. ಈ ಬಗ್ಗೆ ಹಲವಾರು ಬಾರಿ ಈ ಭಾಗದ ಗ್ರಾಮಸ್ಥರು ಸಮಸ್ಯೆಗೆ ಪರಿಹಾರ ನೀಡುವಂತೆ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗರ್ವಾಲೆಯ ನಿವಾಸಿ ಸಚಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳೇ ಉಪಕರಣಗಳ ಬಳಕೆಯಿಂದ ಸಮಸ್ಯೆ

ADVERTISEMENT

ಸೋಮವಾರಪೇಟೆ ಸಮೀಪದ ಹರಗ ಎಂಬಲ್ಲಿ ಕಳೆದ ಹಲವು ವರ್ಷಗಳ ಹಿಂದೆಯೇ ಬಿಎಸ್‌ಎನ್‌ಎಲ್ ಟವರ್‌ಅನ್ನು ಅಳವಡಿಸಲಾಗಿತ್ತು. ಮೊದಲು ಉತ್ತಮವಾದ ಸೇವೆ ನೀಡುತ್ತಾ ಬಂದ ಇಲಾಖೆ, ನಂತರದ ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಹಳೆಯ ಯಂತ್ರೋಪಕರಣಗಳ ಬಳಕೆಯಿಂದ ಆ ನೆಟ್‌ವರ್ಕ್ ಹೊಂದಿರುವ ಸುಂಟಿಕೊಪ್ಪ ಸಮೀಪದ ಗರ್ವಾಲೆ, ಸೂರ್ಲಬ್ಬಿ, ಬೆಟ್ಟದಳ್ಳಿ, ಕುಂದಳ್ಳಿ, ಬೀದಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾದಾಗ ಮೊಬೈಲ್ ಸಂಪರ್ಕ ಕಡಿತಗೊಳ್ಳುತ್ತವೆ. ಹರಗದಲ್ಲಿರುವ ಟವರ್ ಹಳೆಯ ಮಾದರಿಯ ಯಂತ್ರೋಪಕರಣಗಳನ್ನು ಹೊಂದಿದಲ್ಲದೇ ಅದಕ್ಕೆ ಅಳವಡಿಸಿರುವ ಬ್ಯಾಟರಿಯೂ ಕೆಲಸ ನಿರ್ವಹಿಸುತ್ತಿಲ್ಲ. ಅಲ್ಲದೇ, ಇಲಾಖೆಯ ಏಕಪಕ್ಷೀಯ ಧೋರಣೆಯಿಂದ ಒಬ್ಬ ವ್ಯಕ್ತಿಗೆ 7ರಿಂದ 8 ಟವರ್‌ಗಳ ಮೇಲ್ವಿಚಾರಣೆ ನೀಡಿದ್ದು, ಆ ಒಬ್ಬನಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮೊದಮೊದಲು ಡಿಸೇಲ್ ಕೊರತೆಯಿಂದ ಸಮಸ್ಯೆ ಉಂಟಾಗಿದ್ದರೆ, ಇದೀಗ ಹಳೆಯ ಮಾದರಿಯ ಯಂತ್ರಗಳ ಬಳಕೆಯಿಂದ ಸಮಸ್ಯೆ ಉಂಟಾಗುತ್ತಿದೆ. ಮಳೆಗಾಲ ಪ್ರಾರಂಭವಾದರಂತೂ ಈ ಭಾಗದಲ್ಲಿ 15ರಿಂದ 20 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಆ ಸಂದರ್ಭ ತುರ್ತು ಸೇವೆಗಳಿಗೆ ಕರೆ ಮಾಡಬೇಕಾದರೆ ನೆಟ್‌ವರ್ಕ್ ಇರುವುದಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಅಲ್ಲದೇ, ಕೊರೊನಾ ಸೋಂಕು ಮಿತಿಮೀರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವಂತೆ ಸರ್ಕಾರ ಸೂಚಿಸಿದೆ. ಆ ಭಾಗದಲ್ಲಿ ಬಹಳಷ್ಟು ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ಅಧ್ವಾನವಾಗಿದ್ದಾರೆ.

ಜಿಯೋ ಸಮಸ್ಯೆ

ಏಳೆಂಟು ಗ್ರಾಮಗಳಿಗೆ ಬಿಎಸ್‌ಎನ್‌ಎಲ್ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡ ಜಿಯೋ ಖಾಸಗಿ ಸಂಸ್ಥೆಯೊಂದು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ, ಸುಂಟಿಕೊಪ್ಪ ಸಮೀಪದ ಸೂರ್ಲಬ್ಬಿ ಮತ್ತು ಗರ್ವಾಲೆಯಲ್ಲಿ ಟವರ್ ಅನ್ನು ನಿರ್ಮಿಸಿದೆ. ಗರ್ವಾಲೆಯಲ್ಲಿ ಟವರ್ ನಿರ್ಮಿಸಿದ್ದರೂ ಅಧಿಕಾರಿಗಳು ಕೆಲವೊಂದು ಸಮಾಜಾಯಿಷಿ ನೀಡಿ ಸಂಪರ್ಕವನ್ನು ನೀಡುತ್ತಿಲ್ಲ. ಅಲ್ಲದೇ ಕಳೆದ ಐದಾರು ತಿಂಗಳಿನ ಹಿಂದೆ ಸೂರ್ಲಬ್ಬಿಯ ಜಿಯೋ ತನ್ನ ಸೇವೆಯನ್ನು ನೀಡಿದ್ದರೂ ಈ ಭಾಗದ ಜನರಿಗೆ ಮಾತ್ರ ಸಮರ್ಪಕವಾದ ನೆಟ್‌ವರ್ಕ್ ಸಿಗದೇ ಆಕ್ರೋಶ ವ್ಯಕ್ತಡಿಸಿದ್ದಾರೆ.

‘ಈ ಏಳೆಂಟು ಗ್ರಾಮಗಳ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿತನದ ಕರ್ತವ್ಯ ಮತ್ತು ಹಳೆಯ ಯಂತ್ರಗಳಲ್ಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಯನ್ನು ಜನ ಸಾಮಾನ್ಯರು ಎದುರಿಸುವುದರಲ್ಲಿ ಸಂಶಯವಿಲ್ಲ’ ಎಂದು ಗರ್ವಾಲೆ-ಸೂರ್ಲಬ್ಬಿ ಭಾಗದ ಗ್ರಾಮಸ್ಥರಾದ ಜಿ.ಎ.ಶಿವಕುಮಾರ್, ಜಿ.ಕೆ.ವಿನೋದ್, ಸಿ.ಪಿ.ಸಂತೋಷ್, ಜಿ.ಪಿ.ಮಿಲನ್, ಜಿ.ಎಸ್. ಚಂಗಪ್ಪ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.