ADVERTISEMENT

ಮಡಿಕೇರಿ: ತಂಪನ್ನೀಯದ ತಂಪು ಜಿಲ್ಲೆಯ ತಂಗುದಾಣಗಳು

ಇದ್ದೂ ಇಲ್ಲದಂತಾದ ಗ್ರಾಮೀಣ ಬಸ್‌ ನಿಲ್ದಾಣಗಳು, ಹಲವೆಡೆ ಪುಂಡ ಪೋಕರಿಗಳಿಗೆ ಆಶ್ರಯತಾಣ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 19:30 IST
Last Updated 20 ಫೆಬ್ರುವರಿ 2023, 19:30 IST
ಡಾಂಬರೀಕರಣವಾಗದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಬಸ್‌ ನಿಲ್ದಾಣ
ಡಾಂಬರೀಕರಣವಾಗದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಬಸ್‌ ನಿಲ್ದಾಣ   

ಮಡಿಕೇರಿ: ತಂಪು ಜಿಲ್ಲೆ ಎನಿಸಿದ ಕೊಡಗಿನಲ್ಲಿರುವ ಬಸ್‌ ತಂಗುದಾಣಗಳು ಪ್ರಯಾಣಿಕರಿಗೆ ತಂಪು ನೀಡುತ್ತಿಲ್ಲ. ಹಲವೆಡೆ ಶಿಥಿಲಾವಸ್ಥೆಗೆ ಸರಿದಿರುವ ಈ ತಂಗುದಾಣಗಳಲ್ಲಿ ನಿಲ್ಲುವುದೇ ಜೀವಕ್ಕೆ ಬೆದರಿಕೆ ಎನಿಸಿವೆ.

ಸದಾ ಮಳೆ ಬೀಳುವ ಕೊಡಗಿನಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸುಸಜ್ಜಿತವಾದ ತಂಗುದಾಣಗಳ ಅಗತ್ಯ ಇದೆ. ಈ ಅಗತ್ಯತೆಯನ್ನು ಮನಗಾಣದ ಎಂಜಿನಿಯರ್‌ಗಳು ಬೇರೆ ಜಿಲ್ಲೆಗಳಲ್ಲಿ ನಿರ್ಮಿಸಿದಂತಹ ತಂಗುದಾಣಗಳನ್ನೇ ಇಲ್ಲಿಯೂ ನಿರ್ಮಿಸುತ್ತಾರೆ. ಕಟ್ಟಿದ ಕಟ್ಟಡಗಳನ್ನು ಸರಿಯಾಗಿ ನಿರ್ವಹಣೆಯನ್ನೂ ಮಾಡುತ್ತಿಲ್ಲ. ಹೀಗಾಗಿ, ಬಹುತೇಕ ತಂಗುದಾಣಗಳು ಜೀವಕ್ಕೆ ಎರವಾಗುವಂತಿವೆ.

ಇಲ್ಲಿನ ನಗರ ಕೇಂದ್ರ ಬಸ್‌ನಿಲ್ದಾಣ ನೋಡುವುದಕ್ಕೆ ಸುಸಜ್ಜಿತ ಎನಿಸಿದರೂ ರಾತ್ರಿ ವೇಳೆ ಕಲ್ಪಿಸಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಮಂಗಳೂರಿನಿಂದ ಮೈಸೂರಿಗೆ ಹೋಗುವ ಹಾಗೂ ಮೈಸೂರಿನಿಂದ ಮಂಗಳೂರಿಗೆ ಹೋಗುವ ಯಾವುದೇ ಬಸ್‌ಗಳು ಕೇಂದ್ರ ಬಸ್‌ ನಿಲ್ದಾಣಕ್ಕೆ ರಾತ್ರಿ 11ರ ಬಳಿಕ ಬರುವುದಿಲ್ಲ. ಎಲ್ಲವೂ ಟೋಲ್‌ಗೇಟ್‌ನಲ್ಲೇ ಪ್ರಯಾಣಿಕರನ್ನು ಇಳಿಸಿ ಹೊರಟು ಹೋಗುತ್ತವೆ. ಮಹಿಳೆಯರು, ಮಕ್ಕಳು ರಾತ್ರಿ ವೇಳೆ ನಡೆದುಕೊಂಡೇ ರಕ್ಷಣೆ ಇಲ್ಲದೇ ತಮ್ಮ ಮನೆ ತಲುಪಬೇಕಿದೆ.

ADVERTISEMENT

ಈ ವಿಷಯ ತಿಳಿಯದ ಪ್ರವಾಸಿಗರು ರಾತ್ರಿ ಇಡೀ ಬಸ್‌ನಿಲ್ದಾಣದಲ್ಲಿ ಕಾಯುತ್ತಿರುತ್ತಾರೆ. ಹಗಲಿನ ವೇಳೆ ಹೇಗೆ ಬಸ್‌ಗಳು ಸಂಚರಿಸುತ್ತವೋ ಅದೇ ಮಾರ್ಗದಲ್ಲಿ ಸಂಚರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಇನ್ನು ಇಲ್ಲಿರುವ ಖಾಸಗಿ ಬಸ್‌ನಿಲ್ದಾಣ ಮೂಲಸೌಕರ್ಯದಿಂದ ವಂಚಿತವಾಗಿದೆ. ಜನರು ಇಲ್ಲಿಗೆ ಬಾರದೇ ಮುಂದಿನ ಸ್ಟಾಪ್‌ಗಳಲ್ಲೇ ನಿಂತು ಬಸ್‌ ಹತ್ತುತ್ತಾರೆ. ಹಾಗಾಗಿ, ಮೂಲಸೌಕರ್ಯ ಇಲ್ಲದ ಈ ನಿಲ್ದಾಣ ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇನ್ನು ಉಳಿದ ಕಡೆ ಇರುವ ಕೆಲವೊಂದು ತಂಗುದಾಣಗಳು ಸುಸ್ಥಿತಿಯಲ್ಲಿವೆ.

ಅವ್ಯವಸ್ಥೆಯ ಅಗರ ಹೆಬ್ಬಾಲೆ ನಿಲ್ದಾಣ
ಕುಶಾಲನಗರ
: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಸಾರಿಗೆ ಬಸ್ ನಿಲ್ದಾಣ ಅವ್ಯವಸ್ಥೆಗಳ ಅಗರವಾಗಿದೆ.

ಹೆಬ್ಬಾಲೆ ಬಸ್ ನಿಲ್ದಾಣ ಒಳಗಡೆ ಡಾಂಬರೀಕರಣವಾಗಲಿ ಅಥವಾ ಕಾಂಕ್ರೀಟೀಕರಣವಾಗಲಿ ಮಾಡಿಲ್ಲ. ಕಲ್ಲು, ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಆದರೆ, ನಿತ್ಯ ಬಸ್‌ಗಳ ಓಡಾಟದಿಂದ ಕಲ್ಲುಗಳೆಲ್ಲ ಮೇಲೆದ್ದು ಬಂದಿವೆ. ಪ್ರಯಾಣಿಕರಿಗಾಗಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಇದರ ನಿರ್ವಹಣೆಗೆ ಜನರಿಲ್ಲದೆ ಶೌಚಾಲಯ ಬಾಗಿಲು ಮುಚ್ಚಿದೆ. ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮೂತ್ರ ವಿಸರ್ಜನೆಗಾಗಿ ಪರದಾಡಬೇಕಾದ ಪರಿಸ್ಥಿತಿ ಇದೆ. ನಿಲ್ದಾಣದ ಆವರಣದಲ್ಲಿಯೇ ಮೂತ್ರವಿಸರ್ಜನೆ ಮಾಡುತ್ತಿದ್ದು, ಇದರಿಂದ ನಿಲ್ದಾಣದ ಸುತ್ತಮುತ್ತ ಗಬ್ಬೆದ್ದು ನಾರುವಂತಹ ಪರಿಸ್ಥಿತಿ ಇದೆ.

ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ವರ್ಷಗಳೆ ಕಳೆದಿದ್ದು, ಕುಡಿಯುವ ನೀರು ಕುಡಿಯಲು ಯೋಗ್ಯವಾಗಿಲ್ಲ. ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಆದರೆ, ದುಬಾರಿ ಬಾಡಿಗೆಯಾದ ಕಾರಣ ವ್ಯಾಪಾರಸ್ಥರು ಯಾರು ಬಾಡಿಗೆ ಪಡೆಯಲು ಮುಂದೆ ಬರುತ್ತಿಲ್ಲ. ನಿಲ್ದಾಣಕ್ಕೆ ನಿಯಂತ್ರಣಾಧಿಕಾರಿಗಳು ಇದ್ದರೂ ಯಾವುದೇ ಪ್ರಯೋಜನವಿಲ್ಲ. ಸಂಜೆ 5 ಗಂಟೆಗೆ ಅಧಿಕಾರಿಗಳು ಮನೆಗೆ ಹೋಗುತ್ತಾರೆ. ನಂತರ ಪುಂಡರ, ಮದ್ಯವ್ಯಸನಿಗಳ ತಾಣವಾಗಿ ನಿಲ್ದಾಣ ಮಾರ್ಪಡುತ್ತದೆ. ನಿಲ್ದಾಣದಲ್ಲಿ ಮದ್ಯ ಸೇವನೆ ಮಾಡಿ ಖಾಲಿ ಬಾಟಲ್, ಪ್ಯಾಕೆಟ್‌ಗಳನ್ನು ಅಲ್ಲಿಯೇ ಬೀಸಾಡಿ ಹೋಗುತ್ತಾರೆ. ಈ ಬಸ್ ನಿಲ್ದಾಣ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ.

ವಾಣಿಜ್ಯ ಕೇಂದ್ರ ಗೋಣಿಕೊಪ್ಪಲಿಗೆ ಇಲ್ಲ ತಂಗುದಾಣ!
ಗೋಣಿಕೊಪ್ಪಲು:
ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಮೈಸೂರು– ವಿರಾಜಪೇಟೆ– ತಲಚೇರಿ– ಕಣ್ಣೂರು ಹೆದ್ದಾರಿಯಲ್ಲಿರುವ ಈ ಪಟ್ಟಣಕ್ಕೆ ಬಸ್‌ ನಿಲ್ದಾಣವೇ ಇಲ್ಲ!

ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಬಸ್ ನಿಲ್ದಾಣ ಕುಸಿದು ಬಿದ್ದು, ಐದಾರು ವರ್ಷ ಕಳೆದ ಬಳಿಕ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಾಣ ಮಾಡಲಾಯಿತು. ಈ ಶೆಡ್ ಕೂಡ ಭಿಕ್ಷುಕರ ತಂಗುದಾಣವಾಗಿದೆ.

ಇಲ್ಲಿಗೆ ನೂರಾರು ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್‌ಗಳು ನಿತ್ಯ ಬಂದು ಹೋಗುತ್ತವೆ. ಈ ಬಸ್‌ಗಳು ನಿಲ್ಲುವುದಕ್ಕೆ ಸ್ಥಳವಿಲ್ಲ. ಸಾರಿಗೆ ಬಸ್ ರಸ್ತೆ ಬದಿಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟರೆ, ಖಾಸಗಿ ಬಸ್ ಒಂದರ ಹಿಂದೆ ಒಂದು ನಿಲ್ಲುತ್ತಿವೆ. ಪ್ರಯಾಣಿಕರು ಬಸ್ ನಿಲ್ದಾಣದ ಸುತ್ತ ಇರುವ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲುತ್ತಾರೆ. ಮಳೆಗಾಲದಲ್ಲಂತೂ ಇವರ ಹಿಂಸೆ ಹೇಳ ತೀರದು. ಬೇಸಿಗೆಯಲ್ಲಿ ನೆರಳು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಇದೆ.

ಇಲ್ಲಿ ಹೆಸರಿಗೆ ಮಾತ್ರ ಶೌಚಾಲಯ ಇದೆ. ಪ್ರಯಾಣಿಕರ ಸೌಲಭ್ಯಕ್ಕೆ ದೂರ. ರಾತ್ರಿ ವೇಳೆ ಬೆಂಗಳೂರು ಮೈಸೂರಿನಿಂದ ಬರುವ ಪ್ರಯಾಣಿಕರ ತುರ್ತು ಪ್ರಕೃತಿ ಕರೆಯ ಗೋಳು ಅನುಭವಿಸುವವರಿಗೇ ಗೊತ್ತು.

ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬೆಳಿಗ್ಗೆ ಮತ್ತು ಸಂಜೆ ಗ್ರಾಮೀಣ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಜಮಾಯಿಸುತಾರೆ. ಅವರಿಗೆ ಇಲ್ಲಿ ವಾಹನಗಳಿಂದ ಸುರಕ್ಷತೆಯೂ ಇಲ್ಲದಾಗಿದೆ. ತಮ್ಮ ಭಾಗದ ಬಸ್ ಬಂದಾಗ ಕ್ಕಿಕ್ಕಿರಿದು ನಿಂತು ವಾಹನಗಳ ಮಧ್ಯದಲ್ಲಿಯೇ ನುಸುಳಿಕೊಂಡು ಓಡುತ್ತಾರೆ.

ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದರೂ ನಿತ್ಯ ಮೈಸೂರು– ಮಂಗಳೂರು ಕಡೆಗೆ ಹೋಗುವ ನೂರಾರು ಬಸ್‌ಗಳು ಇಲ್ಲಿ ರಸ್ತೆಯಲ್ಲೇ ಪ್ರಯಾಣಿಕರನ್ನು ನಿಲ್ಲಿಸುತ್ತಿವೆ. ಬಸ್‌ ನಿಲ್ಲಿಸುವ ಜಾಗ ಚಿಕ್ಕರಸ್ತೆಯಾಗಿರುವುದರಿಂದ ಬಸ್‌ನ ಹಿಂಭಾಗದಲ್ಲಿ ಬರುವ ವಾಹನಗಳು ಬಸ್‌ ಚಲಿಸುವವರೆಗೂ ನಿಂತಲ್ಲೆ ನಿಲ್ಲಬೇಕಿದೆ. ಇದರಿಂದ ನಿತ್ಯ ಬೆಳಿಗ್ಗೆ ಸಂಚಾರದಟ್ಟಣೆ ಏರ್ಪಡುತ್ತಿದೆ.

ಅಪಾಯದ ಸ್ಥಿತಿ ತಲುಪಿದ ತಂಗುದಾಣಗಳು
ಸೋಮವಾರಪೇಟೆ:
ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದ ಪ್ರೇಮಾ ಕಾರ್ಯಪ್ಪ ತಮ್ಮ ಅನುದಾನದಲ್ಲಿ ಗ್ರಾಮೀಣ ಭಾಗಗಳಲ್ಲಿ ಹೈಟೆಕ್ ಬಸ್ ತಂಗುದಾಣಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ, ನಿರ್ವಹಣೆ ಇಲ್ಲದೆ ಅವು ಅಪಾಯದ ಸ್ಥಿತಿ ತಲುಪಿದ್ದರೂ, ಸ್ಥಳೀಯಾಡಳಿತ ಮಾತ್ರ ದುರಸ್ತಿಗೆ ಮುಂದಾಗಿಲ್ಲ.

ಇಲ್ಲಿನ ಆಲೆಕಟ್ಟೆ ರಸ್ತೆಯ ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಎದುರು, ಶಾಂತಳ್ಳಿ ಗ್ರಾಮ ಪಂಚಾಯಿತಿ ಬಳಿ, ಮಾದಾಪುರ ಸೇರಿದಂತೆ ಹಲವು ನಿಲ್ದಾಣಗಳು ಶಿಥಿಲಾವಸ್ಥೆ ತಲುಪಿವೆ. ಈ ನಿಲ್ದಾಣಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸ್ಥಳೀಯ ಜನರು ಬಸ್ ಮತ್ತು ವಾಹನಗಳಿಗಾಗಿ ಇಲ್ಲಿಯೇ ಕಾಯತ್ತಿರುತ್ತಾರೆ. ಭಾರಿ ಗಾಳಿ ಮತ್ತು ಮಳೆಯಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ದುಃಸ್ಥಿತಿಗೆ ಒಳಗಾಗಿರುವ ನಿಲ್ದಾಣದ ಚಾವಣಿ ಯಾವಾಗ ಬೇಕಾದರೂ ಬೀಳಬಹುದಾಗಿದೆ. ಪ್ರವಾಸಿ ತಾಣವಾಗಿರುವ ಶಾಂತಳ್ಳಿಯಲ್ಲಿ ಭಾರಿ ಗಾಳಿ–ಮಳೆ ಇರುತ್ತದೆ. ಆದರೆ, ಸರಿಯಾದ ಬಸ್ ತಂಗುದಾಣ ಇಲ್ಲದಿರುವುದರಿಂದ ಜನರು ರಸ್ತೆ ಬದಿಯೇ ನಿಂತು ಬಸ್‍ಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ.

ಅಭಿಪ್ರಾಯಗಳು
ಗಬ್ಬೆದ್ದು ನಾರುವ ಬಸ್‌ ನಿಲ್ದಾಣ

ಹೆಬ್ಬಾಲೆ ಬಸ್ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಶೌಚಾಲಯ ಇದ್ದರೂ ಕೂಡ ನಿರ್ವಹಣೆಗೆ ಜನರಿಲ್ಲದೆ ಬಾಗಿಲು‌ ಮುಚ್ಚಲಾಗಿದೆ. ನಿಲ್ದಾಣದ ಆವರಣದಲ್ಲಿಯೇ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ವಾತಾವರಣವೆಲ್ಲ ಗಬ್ಬೆದ್ದು ನಾರುತ್ತಿದೆ. ನಿಲ್ದಾಣದ ನಿಯಂತ್ರಣಾಧಿಕಾರಿಗಳು ಬಸ್ ನಿಲ್ದಾಣ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ.
–ಎಚ್.ಎಂ.ವಿಶ್ವನಾಥ್, ನಿವಾಸಿ ಹೆಬ್ಬಾಲೆ.

ತಂಗುದಾಣ ಬೇಕಿದೆ
ಸುಂಟಿಕೊಪ್ಪದಲ್ಲಿ ಬಸ್ ತಂಗುದಾಣದ ಕೊರತೆ ಇದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಅಂಗಡಿಗಳ ಮುಂಭಾಗದಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ಎದುರಾಗಿದೆ. ಜನ್ರತಿನಿಧಿಗಳು, ಸಂಬಂಧಪಟ್ಟವರು ಗಮನಹರಿಸಬೇಕು.
–ಭರತ್ ಕುಮಾರ್, ವ್ಯಾಪಾರಿ ಸುಂಟಿಕೊಪ್ಪ

ತಂಗುದಾಣ ನಿರ್ಮಾಣವಾಗಲಿದೆ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನೆಯ ನಂತರ ಈಗ ಇರುವ ಮಾರುಕಟ್ಟೆಯನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಸುಸಜ್ಜಿತವಾದ ಬಸ್ ತಂಗುದಾಣದ ಕಾಮಗಾರಿಯು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.
–ಬಿ.ಎಚ್.ವೇಣುಗೋಪಾಲ್, ಪಿಡಿಒ, ಸುಂಟಿಕೊಪ್ಪ

ಶಿಥಿಲಾವಸ್ಥೆ ತಲುಪಿದ ತಂಗುದಾಣ
ಸೋಮವಾರಪೇಟೆ ತಾಲ್ಲೂಕಿನ ಬಿಟಿಸಿಜಿ ಕಾಲೇಜು ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿದೆ. ಬೀಳಬಹುದಾಗಿರುವ ತಂಗುದಾಣವನ್ನು ತೆರವುಗೊಳಿಸಿ ನೂತನವಾಗಿ ನಿರ್ಮಿಸಬೇಕು.
–ಬಿ.ಈ. ಜಯೇಂದ್ರ, ಬೆಟ್ಟದಳ್ಳಿ ಗ್ರಾಮ.

ಅಪಾಯ ತಪ್ಪಿಸಿ
ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿನ ಸಾಕಷ್ಟು ಬಸ್ ತಂಗುದಾಣಗಳು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದ್ದರೂ, ಸ್ಥಳೀಯಾಡಳಿತ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಕೂಡಲೇ ಇವುಗಳನ್ನು ಸರಿಪಡಿಸಿ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಬೇಕು.
ಕೆ.ಎನ್. ದೀಪಕ್, ಕರ್ನಾಟಕ ರಕ್ಷಣಾ ವೇದಿಕೆ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ

____________________________________________________________________________

ನಿರ್ವಹಣೆ: ಕೆ.ಎಸ್.ಗಿರೀಶ್

ಪೂರಕ ಮಾಹಿತಿ: ರಘು ಹೆಬ್ಬಾಲೆ, ಜೆ.ಸೋಮಣ್ಣ, ಡಿ.ಪಿ.ಲೋಕೇಶ್, ಎಂ.ಎಸ್‌.ಸುನೀಲ್,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.