
ಮಡಿಕೇರಿ: ಬೆಲೆ ಏರಿಕೆ ಎಷ್ಟಾಗಿದೆ ಎಂಬುದು ನಿಮಗೆ ಗೊತ್ತಾ ? ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
'ಅಚ್ಛೆ ದಿನ್ ಆಯೇಗಾ ಎಂದ ನರೇಂದ್ರ ಮೋದಿಯವರೇ ಎಲ್ಲಿದೆ ನಿಮ್ಮ ಅಚ್ಛೆ ದಿನ್' ಎಂದು ಪ್ರಶ್ನಿಸಿದ ಅವರು ಪೆಟ್ರೋಲ್, ಡೀಸೆಲ್ , ಅಡುಗೆ ಅನಿಲ ಬೆಲೆ ಇಳಿಕೆ ಮಾಡಿದಿರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾಷಣ ಮಾಡಿದ ಮೋದಿಯವರೇ ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಲ್ಲಿವೆ 20 ಕೋಟಿ ಉದ್ಯೋಗ ತೋರಿಸಿ ಎಂದು ಪ್ರಶ್ನೆಗಳ ಸುರಿಮಳೆಗರೆದರು.
ದೇಶದಲ್ಲಿ ಬಿಜೆಪಿಯವರು ಒಂದೇ ಒಂದು ಅಣೆಕಟ್ಟು ಕಟ್ಟಿದ ಉದಾಹರಣೆ ಇದ್ದರೆ ನಾನು ಅವರ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದೂ ಸವಾಲೆಸೆದರು.
ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ ಎಂದು ಹರಿಹಾಯ್ದರು.
ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳಿದರೂ ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರದು ಸಂವಿಧಾನ ವಿರೋಧಿ ನಿಲುವು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರೂಪಾಯಿ ಬರ ಪರಿಹಾರವನ್ನೂ ಬಿಡುಗಡೆ ಮಾಡಿಸಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಇಲ್ಲಿನ ಸಂಸದ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಲಿಲ್ಲ ಎಂದು ಚಾಟಿ ಬೀಸಿದರು.
ನಾವು 2013 ರಿಂದ 2018 ರವರೆಗೂ ನುಡಿದಂತೆ ನಡೆದಿದ್ದೇವೆ. ಈಗ ಸರ್ಕಾರ ಬಂದ 7 ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನೂ ಜಾರಿಗೆ ತಂದಿದ್ದೇವೆ. ಇದರಿಂದ ಕರ್ನಾಟಕದ ಬಡವರು ಮತ್ತು ಮಧ್ಯಮ ವರ್ಗದ ಜನರ ಸಂಕಷ್ಟ ಕಡಿಮೆ ಆಗಿದೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಗೃಹ ಸಚಿವ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ಕೆಪಿಸಿಸಿ ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷ ಮೆಹರೂಸ್ ಖಾನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.