ADVERTISEMENT

ಪುಸ್ತಕಗಳು ಡಿಜಿಟಲೀಕರಣಗೊಳ್ಳಲಿ, ಮುಂದಿನ ತಲೆಮಾರಿಗೂ ಸಿಗಲಿ: ರತನ್‌ ಕುಟ್ಟಯ್ಯ

ಕೊಡವ ಮಕ್ಕಡ ಕೂಟಕ್ಕೆ ಸಲಹೆ, ಏಕಕಾಲಕ್ಕೆ 2 ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:19 IST
Last Updated 19 ಫೆಬ್ರುವರಿ 2026, 3:19 IST
ಕೊಡವ ಮಕ್ಕಡ ಕೂಟದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಮಡಿಕೇರಿಯ ಪತ್ರಿಕಾ ಭವನದಲ್ಲಿ ಬುಧವಾರ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ ‘ನೆನಪಿನ ಅಲೆ’ ಮತ್ತು ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’  ಪುಸ್ತಕಗಳನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹಾಗೂ ಸಮಾಜ ಸೇವಕ ಹಾಗೂ ದಾನಿ ಮಂಡೇಪಂಡ ರತನ್‌ ಕುಟ್ಟಯ್ಯ ಲೋಕಾರ್ಪಣೆಗೊಳಿಸಿದರು
ಕೊಡವ ಮಕ್ಕಡ ಕೂಟದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಮಡಿಕೇರಿಯ ಪತ್ರಿಕಾ ಭವನದಲ್ಲಿ ಬುಧವಾರ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ ‘ನೆನಪಿನ ಅಲೆ’ ಮತ್ತು ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’  ಪುಸ್ತಕಗಳನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹಾಗೂ ಸಮಾಜ ಸೇವಕ ಹಾಗೂ ದಾನಿ ಮಂಡೇಪಂಡ ರತನ್‌ ಕುಟ್ಟಯ್ಯ ಲೋಕಾರ್ಪಣೆಗೊಳಿಸಿದರು   

ಮಡಿಕೇರಿ: ಕೊಡವ ಮಕ್ಕಡ ಕೂಟ ಇಲ್ಲಿಯವರೆಗೆ ಹೊರತಂದಿರುವ 125 ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವ ಮಹತ್ವದ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಸಮಾಜ ಸೇವಕ ಹಾಗೂ ದಾನಿ ಮಂಡೇಪಂಡ ರತನ್‌ ಕುಟ್ಟಯ್ಯ ಸಲಹೆ ನೀಡಿದರು.

ಕೊಡವ ಮಕ್ಕಡ ಕೂಟದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸಂಘಟನೆಯ 124 ಮತ್ತು 125ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಸಾಹಿತ್ಯ ಉಳಿಸಿ ಬೆಳೆಸುವುದು ನಿಜಕ್ಕೂ ಕಷ್ಟಕರವಾದ ಸಂಗತಿ. ಕೊಡವ ಮಕ್ಕಡ ಕೂಟವು ಅಮೂಲ್ಯ ಎನಿಸಿರುವ 125 ಪುಸ್ತಕಗಳನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಕಾಣಿಕೆ ನೀಡಿದೆ. ಈ ಪುಸ್ತಕಗಳು ಡಿಜಿಟಲೀಕರಣಗೊಂಡಲ್ಲಿ ಮುಂದಿನ ತಲೆಮಾರಿಗೂ ಸಿಗುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಲೇಖಕಿ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಮಾತನಾಡಿ, ‘ನಾವು ಎಲ್ಲೆ ಹೋದರೂ ನಮ್ಮ ಜನ್ಮಭೂಮಿ ಮತ್ತು ಮಾತೃಭಾಷೆಯನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

‘ಬೆಂಗಳೂರಿನಲ್ಲಿ ಕನ್ನಡ ಉಳಿಸುವುದೇ ಕಷ್ಟಕರವಾಗಿದೆ. ನಾನು ಟ್ಯೂಷನ್‌ ತೆಗೆದುಕೊಳ್ಳುತ್ತಿದ್ದು, ಯಾವುದೇ ವಿಷಯಕ್ಕೆ ವಿದ್ಯಾರ್ಥಿಗಳು ಟ್ಯೂಷನ್‌ಗೆ ಬಂದರೂ, ಅವರಿಗೆ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಿರುವೆ’ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆ ಮತ್ತು ಸಾಮಾಜಿಕ ಕಳಕಳಿಯ ಉದ್ದೇಶದಿಂದ 2013ರಲ್ಲಿ ಆರಂಭವಾದ ಕೊಡವ ಮಕ್ಕಡ ಕೂಟವು ಇಂದು 13ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸರ್ಕಾರದ ಅನುದಾನವಿಲ್ಲದೆ ಕೇವಲ 9 ವರ್ಷಗಳಲ್ಲಿ 125 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ ಹೆಗ್ಗಳಿಕೆ ನಮ್ಮದು’ ಎಂದು ಹೇಳಿದರು.

‘ಆಟ್‌ಪಾಟ್ ಪಡಿಪು’ ಎಂಬ ಪುಸ್ತಕದ ನಾಲ್ಕು ಸಾವಿರ ಪ್ರತಿಗಳನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. 123 ಪುಸ್ತಕಗಳಲ್ಲಿ 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ’ ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿ ಪ್ರದರ್ಶನ ಕಂಡಿವೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಎಂಬ ಪರಾಮರ್ಶನ ಪುಸ್ತಕವನ್ನು 1,500 ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟವು ಪುಸ್ತಕದ ಪ್ರಕಾಶನದ ಜೊತೆಗೆ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದೆ ಎಂದರು.

ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ ‘ನೆನಪಿನ ಅಲೆ’ ಮತ್ತು ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’  ಪುಸ್ತಕಗಳು ಲೋಕಾರ್ಪಣೆಗೊಂಡವು.

ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ, ಸಮಾಜ ಸೇವಕಿ ಕೊಳುವಂಡ ಅನಿತಾ ಸುಬ್ಬಯ್ಯ, ಕೊಳುವಂಡ ಸುಬ್ಬಯ್ಯ, ಮೂಕೋಂಡ ಪೂಣಚ್ಚ, ಮೂಕೋಂಡ ನಿತಿನ್ ಕುಶಾಲಪ್ಪ, ಲೇಖಕಿ ಐಚಂಡ ರಶ್ಮಿ ಮೇದಪ್ಪ, ಮುಕ್ಕಾಟಿರ ವಿನಯ್, ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಕೊಡವ  ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಭಾಗವಹಿಸಿದ್ದರು.

ಲೇಖಕರಿಗೆ ಪ್ರೋತ್ಸಾಹ ನೀಡಲು ಬಾಚರಣಿಯಂಡ ಅಪ್ಪಣ್ಣ ಕರೆ

ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ ‘ಸಾಹಿತಿಗಳು ತಮ್ಮ ಕೃತಿಗಳನ್ನು ಹೊರ ತರಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹಿಂದೆ ಕೊಡಗಿನಲ್ಲಿ ದಾನಿಗಳ ಕೊರತೆ ಇದ್ದ ಕಾರಣ ಹೆಚ್ಚಿನ ಬರಹಗಾರರಿಗೆ ತಮ್ಮ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಸಹೃದಯಿ ದಾನಿಗಳು ಲೇಖಕರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು. ‘ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳು ಹಾಗೂ ಪುಸ್ತಕಗಳಲ್ಲಿ ಹೆಚ್ಚು ಹೆಚ್ಚು ತಪ್ಪುಗಳು ನುಸುಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು ‘ಬರಹಗಾರರು ತಾವು ಬರೆದ ಪುಸ್ತಕದಲ್ಲಿನ ತಪ್ಪುಗಳನ್ನು ಪರಿಶೀಲಿಸಲು ತಮಗೆ ವಿಶ್ವಾಸ ಇರುವವರಿಗೆ ಮೊದಲು ಓದಲು ನೀಡಬೇಕು. ತಪ್ಪುಗಳನ್ನು ಸರಿಪಡಿಸಿದ ನಂತರವಷ್ಟೇ ಪುಸ್ತಕಗಳನ್ನು ಹೊರತರಬೇಕು. ಮಾತ್ರವಲ್ಲ ಓದುಗರ ಅಭಿಪ್ರಾಯವನ್ನೂ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.