ADVERTISEMENT

ಕೊಡಗು| ಕಣ್ಮನ ಸೆಳೆಯುವ ಚಿಕ್ಲಿಹೊಳೆ ಜಲಾಶಯ

ಈ ಭಾಗದಲ್ಲಿ ನಯಾಗರ ಫಾಲ್ಸ್ ಎಂದೇ ಕರೆಯುವ ಚಿಕ್ಲಿಹೊಳೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:24 IST
Last Updated 19 ಜುಲೈ 2020, 16:24 IST
ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯದಿಂದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯ
ಕುಶಾಲನಗರ ಸಮೀಪದ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಜಲಾಶಯದಿಂದ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯ   

ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಅತೀ ಚಿಕ್ಕದಾದ ಕೊಡಗಿನ ರಂಗಸಮುದ್ರ ಬಳಿ ಇರುವ ‘ನಯಾ‌ಗರ ಫಾಲ್ಸ್’ ಎಂದೇ ಪ್ರಖ್ಯಾತಿಯಾಗಿರುವ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯ ನಯನಮನೋಹರವಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಲಿಹೊಳೆ ಜಲಾಶಯ ಮೈದುಂಬಿ ನಿಂತಿದೆ. ಅಣೆಕಟ್ಟೆ ತುಂಬಿರುವುದರಿಂದ ಹೆಚ್ಚುವರಿ ನೀರು ಜಲಾಶಯದ ಅರ್ಧ ಚಂದ್ರಾಕೃತಿಯ ತಡೆಗೋಡೆಯ ಮೇಲಿಂದ ಹಾಲು ನೊರೆಯಂತೆ ಹರಿಯುತ್ತಿದೆ.

ಯಾವುದೇ ಕ್ರಸ್ಟ್‌ಗೇಟ್‌ಗಳನ್ನು ಹೊಂದಿರದೆ ಕೇವಲ ಬಾವಿಯಾಕಾರದ ಮಾದರಿಯಲ್ಲಿ ಏಕೈಕ ದೊಡ್ಡ ತೂಬು ನಿರ್ಮಿಸಲಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದಂತೆ ನೀರು ತನ್ನಿಂದಾಗಿ ಅಣೆಕಟ್ಟೆಯ ಹೊರಗೆ ಹರಿಯುತ್ತದೆ. ಗರಿಷ್ಠ 72.6 ಮೀಟರ್ ಎತ್ತರ ಹೊಂದಿರುವ ಅಣೆಕಟ್ಟಿನಲ್ಲಿ 0.18 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ. ಧಾರಾಕಾರವಾಗಿ ಬಿದ್ದ ಮಳೆಯಿಂದ ಜಲಾಶಯ ಇದೀಗ ಭರ್ತಿಯಾಗಿದೆ.

ADVERTISEMENT

ಮೀನುಕೊಲ್ಲಿ ಮೀಸಲು ಅರಣ್ಯದ ಮಧ್ಯೆ ಸದಾ ಹಸಿರಿನಿಂದ ಕಂಗೊಳಿಸುವ ಸುಂದರ ಪರಿಸರದಲ್ಲಿ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಜಲಾಶಯದ ಹಿನ್ನೀರು ಪ್ರದೇಶವು ಒಂದೆಡೆ ದಟ್ಟ ಕಾಡು ಹಾಗೂ ಮತ್ತೊಂದೆಡೆ ಕಾಫಿ ತೋಟಗಳ ಸಾಲಿನಿಂದ ಆವೃತಗೊಂಡಿದೆ.

ರೈತರಲ್ಲಿ ಹರ್ಷ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಗೆ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.