
ಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮಸಭೆ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.
ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್ ಗ್ರಾಮಸಭೆಗೆ ಚಾಲನೆ ನೀಡಿದರು. ವಿದ್ಯಾರ್ಥಿನಿ ಎಚ್.ಈ.ಇಂಚರಾ ಸಭೆಯ ಅಧ್ಯಕ್ಷತೆ ವಹಿಸಿದ್ದಳು.
ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಾನಗಲ್ಲು ಶೆಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಸಮಸ್ಯೆಗಳನ್ನು ಅನಾವರಣ ಮಾಡಿದರು.
‘ಹಾನಗಲ್ಲು ಶಾಲೆಯ ಶೌಚಾಲಯ ದುರಸ್ತಿ ಮಾಡಿಕೊಡಿ, ಕೈತೊಳೆಯಲು ಸಿಂಕ್ ಅಳವಡಿಸಿಬೇಕು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಧ್ವನಿವರ್ಧಕ ಬೇಕು’ ಎಂದು ವಿದ್ಯಾರ್ಥಿಗಳಾದ ಪ್ರಥಮ್, ಭೂಮಿಕಾ, ಕಾರ್ತಿಕ್, ತೇತಸ್,ಶ್ರೇಯಸ್ ಬೇಡಿಕೆಯಿಟ್ಟರು.
ಕಲ್ಕಂದೂರು ಶಾಲೆಗೆ ತೆರಳುವ ಸಂದರ್ಭ ಹಾಗೂ ಮೈದಾನದಲ್ಲಿ ಆಟವಾಡುವ ಸಂದರ್ಭ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಕೆಲವೊಮ್ಮೆ ಮಕ್ಕಳನ್ನು ಅಟ್ಟಿಸಿಕೊಂಡು ಬರುತ್ತವೆ. ಶಾಲೆಗೆ ತೆರಳಲು ಭಯವಾಗುತ್ತದೆ ಎಂದು ವಿದ್ಯಾರ್ಥಿನಿ ಪೂರ್ವಿ ಸಭೆಯಲ್ಲಿ ತಿಳಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
‘ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡಬೇಕಿದ್ದು, ವಾಟರ್ ಫಿಲ್ಟರ್ ಕೊಡಿಸಿ’ ಎಂದು ಭುವನ್ ಪಂಚಾಯಿತಿಗೆ ಬೇಡಿಕೆ ಸಲ್ಲಿಸಿದ. ಕೆಲವರು ಸಂಜೆ ಶಾಲೆಯ ಗೇಟ್‌ನ ಬೀಗ ಹೊಡೆದು ಶಾಲಾ ಆವರಣ ಪ್ರವೇಶಿಸಿ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಒಂದು ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಡಿ’ ಎಂದು ಬೇಡಿಕೆ ಇಟ್ಟ.
‘ನಾವು ಪ್ರತಿಷ್ಠಾನ’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನ ಮ್ಯಾಥ್ಯು ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕಾದ ಅಗತ್ಯವಿದ್ದು, ಎದೆ ಹಾಲು ಸಿಗದೆ ಯಾವುದೇ ಮಗು ಸಾಯಬಾರದು, ಪೌಷ್ಟಿಕ ಆಹಾರದ ಕೊರತೆಯಿಂದ ಯಾವುದೇ ತಾಯಿ ಪ್ರಾಣ ಕಳೆದುಕೊಳ್ಳಬಾರದು ಎಂಬ ಮಹತ್ವದ ಉದ್ದೇಶದಿಂದ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಹೇಳಿದರು.
‘ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಪೋಷಣೆಯೇ ದೇಶದ ಭವಿಷ್ಯ ರೂಪಿಸಲಿದ್ದು, ಮಕ್ಕಳ ಸಮಗ್ರ ಅಭಿವೃದ್ಧಿಯ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯ. ಈ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಸಮಾಜವೂ ಕೈಜೋಡಿಸಬೇಕು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಅವರು ಇಲಾಖೆಯಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿ ಪಿಡಿಒ ಸ್ಮಿತಾ ಮಾತನಾಡಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮೋಹಿನಿ, ಸಿಆರ್‌ಪಿ ಚಂದ್ರಕಲಾ, ಮುಖ್ಯಶಿಕ್ಷಕರಾದ ಸುಕುಮಾರ್, ಎಲ್.ಎಂ.ಪ್ರೇಮಾ, ದಾನಿಗಳಾದ ಪದ್ಮನಾಭ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಪಂಚಾಯಿತಿ ಸದಸ್ಯರು ಇದ್ದರು.
ಯಡೂರು ಶಾಲೆಯ ಸುತ್ತ ಬೇಲಿ ನಿರ್ಮಿಸಲು ಆಗ್ರಹ ಕಳೆದ ಸಾಲಿನ ಬೇಡಿಕೆ ಈಡೇರಿಕೆಗೆ ಪ್ರಯತ್ನ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.