
ಮಡಿಕೇರಿ: ಇಲ್ಲಿನ ಹೊರವಲಯದಲ್ಲಿ ಬುಧವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ವತಿಯಿಂದ ನಡೆದ 35ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆಯಲ್ಲಿ 10 ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‌ಗೆ ಸೇರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಮಾತನಾಡಿ, ‘ಕೊಡಗಿಗೆ ಮಾತ್ರ ಸೀಮಿತವಾಗಿರುವ ಕೊಡವರ ಕುಲ ಸಮಸ್ಯೆಯನ್ನು ಬಗೆಹರಿಸಿ ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನಾನು ಸಂಸದ ಯದುವೀರ್ ಸೇರಿದಂತೆ ಎಲ್ಲರ ಬಳಿಗೂ ನಿಯೋಗ ಕೊಂಡೊಯ್ಯುತ್ತೇನೆ. ಇದಕ್ಕಾಗಿ ಬುದ್ಧಿಜೀವಿಗಳನ್ನು ಒಳಗೊಂಡ ಒಂದು ‘ಇನ್ನರ್ ಕ್ಯಾಬಿನೇಟ್’ ರಚಿಸಬೇಕು’ ಎಂದು ಸಲಹೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಸಂಜೀವ್ ಚೋಪ್ರ ಮಾತನಾಡಿ, ‘ಪ್ರತ್ಯೇಕ ರಾಷ್ಟ್ರ, ರಾಜ್ಯ ಕೇಳುವುದು ಅವಾಸ್ತಾವಿಕ. ಆದರೆ, ಸಿಎನ್‌ಸಿ ಈ ಎರಡನ್ನೂ ಕೇಳದೇ ಮಂಡಿಸುತ್ತಿರುವ ಬೇಡಿಕೆಗಳನ್ನು ಸಂವಿಧಾನದಡಿಯಲ್ಲಿ ಪರಿಶೀಲಿಸಬಹುದಾಗಿದೆ’ ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಡಾ.ಮಾತಂಡ ಅಯ್ಯಪ್ಪ ಅವರು ಎನ್.ಯು.ನಾಚಪ್ಪ ಅವರ ಇದುವರೆಗಿನ ಹೋರಾಟವನ್ನು ಶ್ಲಾಘಿಸಿದರು. ಹಾಗೂ ಕೊಡವರ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕಲಿಯಂಡ ಮೀನಾ, ಮಂದಪಂಡ ರಚನಾ, ಚೋಳಪಂಡ ಜ್ಯೋತಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಪ್ಪಚ್ಚೀರ ರೀನ ನಾಣಯ್ಯ, ಪಚ್ಚಾರಂಡ ಶಾಂತಿ, ಕೊಡಂದೇರ ಉತ್ತರೆ ತಿಮ್ಮಯ್ಯ, ನಂದೇಟಿರ ಕವಿತಾ, ಕಾಂಡೇರ ಸುರೇಶ್, ಉದಿಯಂಡ ಚಂಗಪ್ಪ, ಚಂಬಂಡ ಜನತ್, ಹಂಚೆಟ್ಟಿರ ನಿತೀನ್, ಕಾಟಿಮಾಡ ಜಿಮ್ಮಿ, ನಂದೇಟಿರ ರವಿ ಸುಬ್ಬಯ್ಯ, ಹಂಚೆಟ್ಟಿರ ಮನು ಮುದ್ದಪ್ಪ, ಪೆಮ್ಮುಡಿಯಂಡ ವೇಣು, ಮಣವಟ್ಟೀರ ಚಿಣ್ಣಪ್ಪ ಭಾಗವಹಿಸಿದ್ದರು.