
ಮಡಿಕೇರಿ: ‘ತುಳು ಭಾಷೆಯಂತೆ ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು. ಭಾಷೆ ಉಳಿದರೆ ದೇಶ ಉಳಿಯುತ್ತದೆ. ವೈವಿಧ್ಯಮಯ ರಾಷ್ಟ್ರವನ್ನು ಒಂದಾಗಿಟ್ಟು ಮುಂದುವರಿಯಲು ಕೊಡವ ಭಾಷೆ ಸೇರಿದಂತೆ ಇಲ್ಲಿನ ಹಲವು ಆದಿಮಸಂಜಾತ ಭಾಷೆಗಳನ್ನು ಮುನ್ನಲೆಗೆ ತಂದು ಸಮಾನ ಪ್ರಾತಿನಿಧ್ಯ ನೀಡಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಕೊಡವ ಭಾಷೆಯನ್ನು ಸಂವಿಧಾನದ 345 ಪ್ರಕಾರ ರಾಜ್ಯದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕು. ಒಂದೇ ಭಾಷೆಗೆ ಜೋತು ಬಿದ್ದು, ಭಾಷಾ ಪ್ರಾಬಲ್ಯದ ಮೂಲಕ ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕ್ಕಿದರೆ ದೇಶದ ಏಕತೆಗೆ ಧಕ್ಕೆ ಬರುತ್ತದೆ, ಒಗ್ಗಟ್ಟಾಗಿ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
ಈಗ ರಾಜ್ಯ ಸರ್ಕಾರವು ನಮ್ಮ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಕೊಡವ ತಕ್, ತುಳು ಮತ್ತು ಬಂಜಾರ ಭಾಷೆಗಳನ್ನು ಸೇರಿಸಲು ಪ್ರಸ್ತಾವನೆಗಳನ್ನು ಶಿಫಾರಸು ಮಾಡಲು ಪ್ರಾರಂಭಿಸಿದೆ, ಇದು ಸಕಾರಾತ್ಮಕ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ, ತುಳುನಾಡು ಅಥವಾ ಕರಾವಳಿ ಕರ್ನಾಟಕದ ಪ್ರತಿನಿಧಿಗಳು, ವಿಶೇಷವಾಗಿ ಪುತ್ತೂರು ಶಾಸಕ ಅಶೋಕ್ ರೈ, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಗುರುತಿಸುವ ವಿಷಯವನ್ನು ಪ್ರಸ್ತಾಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಸದನದಲ್ಲಿ ಅಧಿಕೃತವಾಗಿ ಸಮ್ಮತಿ ಸೂಚಿಸಿದರು. ನಾವು ಅದನ್ನು ಸ್ವಾಗತಿಸುತ್ತೇವೆ, ಆದರೆ ಅದೇ ಸ್ಫೂರ್ತಿ ಮತ್ತು ಉತ್ಸಾಹದಿಂದ, ಕೊಡವ ತಕ್ ಅನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಗುರುತಿಸಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು ಎಂಬ ಭಾಷಾ ಹಕ್ಕೊತ್ತಾಯದ ಕುರಿತು ಸುದೀರ್ಘ ಮನವಿ ಪತ್ರವನ್ನು ರಾಷ್ಟ್ರಪತಿಗಳು, ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಕೊಡಗು ಜಿಲ್ಲೆಯ ಇಬ್ಬರು ಶಾಸಕರಿಗೆ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.