ADVERTISEMENT

ಮಳೆಗೆ ಅರಳಿದ ಹೂವು-ಕಾಫಿ ಕೊಯ್ಲು ಸಮಸ್ಯೆ

ತುಂತುರು ಹನಿನೀರಾವರಿ ವ್ಯವಸ್ಥೆಗೆ ಮೊರೆಹೋದ ರೈತರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 13:14 IST
Last Updated 10 ಫೆಬ್ರುವರಿ 2020, 13:14 IST
ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಸೋಮವಾರ ತುಂತುರು ನೀರಾವರಿ ಮೂಲಕ ಕಾಫಿಯ ಹೂಗಳನ್ನು ಅರಳಿಸುವತ್ತ ಬೆಳೆಗಾರರು ತೊಡಗಿದ್ದರು
ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಸೋಮವಾರ ತುಂತುರು ನೀರಾವರಿ ಮೂಲಕ ಕಾಫಿಯ ಹೂಗಳನ್ನು ಅರಳಿಸುವತ್ತ ಬೆಳೆಗಾರರು ತೊಡಗಿದ್ದರು   

ನಾಪೋಕ್ಲು: ಹತ್ತು ದಿನಗಳ ಹಿಂದೆ ಸುರಿದ ಮೊದಲ ಮಳೆಯಿಂದ ನಾಪೋಕ್ಲು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಕಾಫಿಯ ಹೂಗಳು ಅರಳಿ ಘಮಘಮಿಸುತ್ತಿದೆ. ಪಾಲೂರು, ಕೊಟ್ಟಮುಡಿ ಮತ್ತಿತರ ಭಾಗಗಳಲ್ಲಿ ಸುರಿದ ಮಳೆಗೆ ಹೂಗಳು ಅರಳಿವೆ. ಹಲವೆಡೆ ವರ್ಷದ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಸಿದ್ದವಾಗಿದ್ದು ಕಾಫಿ ಬೆಳೆಗಾರರು ಹೂ ಅರಳಿಸುವತ್ತ ಮುಂದಾಗಿದ್ದಾರೆ.

ಅಲ್ಪಪ್ರಮಾಣದ ಮಳೆಯಾಗಿದ್ದ ಭಾಗಗಳಲ್ಲಿ ತುಂತುರು ನೀರಾವರಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಫೆಬ್ರುವರಿ - ಮಾರ್ಚ್ ತಿಂಗಳಲ್ಲಿ ಬರುವ ಮಳೆ ಕಾಫಿಯ ಹೂ ಮಳೆಯೆಂದೇ ಕೃಷಿ ವಲಯದಲ್ಲಿ ಜನಪ್ರಿಯ. ಆದರೆ, ಫೆಬ್ರುವರಿ ತಿಂಗಳ ಮೊದಲವಾರ ದಿಢೀರಾಗಿ ಸುರಿದ ಮಳೆ ಕೆಲವು ಬೆಳೆಗಾರರನ್ನು ತುಂತುರು ನೀರಾವರಿಗೆ ಮೊರೆ ಹೋಗುವಂತೆ ಮಾಡಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ರೋಬಸ್ಟಾ ಕಾಫಿ ಕೊಯ್ಲು ಪ್ರಗತಿಯಲ್ಲಿದೆ. ಕೂಲಿ ಕೆಲಸಗಾರರ ಅಭಾವದ ನಡುವೆಯೂ ಹೊರಜಿಲ್ಲೆಯ ಕಾರ್ಮಿಕರನ್ನು ಕರೆಸಿ ಕಾಫಿ ಕೆಲಸ ಪೂರೈಸುವ ತರಾತುರಿಯಲ್ಲಿದ್ದಾರೆ ಬೆಳೆಗಾರರು.

ADVERTISEMENT

ಕಾಫಿ ಕೊಯ್ಲು ಮುಗಿಯುತ್ತಿದ್ದಂತೆ ಮುಂದಿನ ವರ್ಷದ ಕಾಫಿ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಮಳೆರಾಯನಿಗಾಗಿ ಕಾದು ಕುಳಿತಿವೆ. ಸಾಮಾನ್ಯವಾಗಿ ಹೂ ಅರಳಿಸುವ ಬೇಸಿಗೆ ಮಳೆ ಮಾರ್ಚ್ ತಿಂಗಳಲ್ಲಿ ಬೀಳುತ್ತವೆ. ಆ ಸಮಯದಲ್ಲಿ ಹೂ ಅರಳುವುದನ್ನು ಕಾಣುವುದು ಸಾಮಾನ್ಯ. ಹೂ ಮಳೆ ಬೀಳುವುದು ಮಾರ್ಚ್ ಗಿಂತಲೂ ತಡವಾದಲ್ಲಿ ಕಾಫಿ ಉತ್ಪಾದನೆಗೆ ತೀವ್ರ ಹಿನ್ನೆಡೆ ಉಂಟಾಗುತ್ತದೆ ಎಂದು ಭಾವಿಸಲಾಗುತ್ತದೆ. ಪ್ರತಿವರ್ಷ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಮಳೆಗಾಗಿ ಕಾದು ಕುಳಿತುಕೊಳ್ಳವುದು ಕಾಫಿ ಬೆಳೆಗಾರರ ನಿರಂತರ ಪ್ರಕ್ರಿಯೆ. ನೀರಿನ ಆಶ್ರಯವುಳ್ಳವರು ತುಂತುರು ನೀರಾವರಿ ಮೂಲಕ ನೀರೊದಗಿಸಿ ಉತ್ತಮ ಫಸಲು ಬರುವಂತೆ ನೋಡಿಕೊಳ್ಳುತ್ತಾರೆ. ಈ ವರ್ಷ ಸಮೀಪದ ಪಾಲೂರು ಗ್ರಾಮ ಸೇರಿದಂತೆ ಕೆಲವು ಭಾಗಗಳಲ್ಲಿ ಮೊದಲ ಮಳೆ ಉತ್ತಮವಾಗಿ ಸುರಿದಿದೆ. ಅಲ್ಪಸ್ವಲ್ಪ ಮಳೆಯಾದ ಕೆಲವು ಭಾಗಗಳಲ್ಲಿ ತುಂತುರು ನೀರಾವರಿ ವ್ಯವಸ್ಥೆಗೆ ಬೆಳೆಗಾರರು ಮುಂದಾಗಿದ್ದು ಕಾಫಿ ಮೊಗ್ಗು ಅರಳಿಸುವತ್ತ ಬೆಳೆಗಾರರು ಚಿತ್ತ ಹರಿಸಿದ್ದಾರೆ.‌

ಕಾಫಿ ಕೊಯ್ಲು ಕೆಲಸ ಪೂರ್ಣಗೊಂಡಿಲ್ಲ.ಕಾರ್ಮಿಕರ ಕೊರತೆ ಕಾಡುತ್ತಿದೆ.ಗಿಡಗಳಲ್ಲಿ ಮಳೆಯಿಂದಾಗಿ ಹೂವು ಅರಳಿರುವುದದ ಕೊಯ್ಲಿಗೆ ಸಮಸ್ಯೆಯಾಗಿದೆ.ಕಾಫಿ ಹಣ್ಣಾಗಿ ಗಿಡಗಳಲ್ಲಿ ಒಣಗುತ್ತಿವೆ ಎಂದು ಕೊಟ್ಟಮುಡಿಯ ಕಾಫಿ ಬೆಳೆಗಾರ ಹಂಸ ಅಳಲು ತೋಡಿಕೊಂಡರು.

ಕಾಫಿ ಕೊಯ್ಲು ಕೆಲಸ ಪೂರ್ಣಗೊಳ್ಳದೇ ಇರುವುದರಿಂದ ಫೆಬ್ರುವರಿ ತಿಂಗಳ ಬಳಿಕ ಮಳೆ ಸುರಿದರೆ ಉತ್ತಮ ಎಂಬ ಆಭಿಪ್ರಾಯವನ್ನು ಬೆಳೆಗಾರರು ವ್ಯಕ್ತಪಡಿಸುತ್ತಾರೆ.ಎಲ್ಲೆಡೆ ಕಾಫಿ ಕೊಯ್ಲು ಕೆಲಸ ಹಾಗೂ ಒಣಗಿಸುವ ಕೆಲಸ ಬಿರುಸಿನಿಂದ ಸಾಗಿದರೆ ಮೊದಲ ಮಳೆ ಬಿದ್ದ ಪಾಲೂರು ಹಾಗೂ ಕೊಟ್ಟಮುಡಿ ಗ್ರಾಮಗಳಲ್ಲಿ ರೊಬಸ್ಟಾ ಕಾಫಿಯ ಹೂಗಳು ಅರಳಿದ್ದು ಘಮಘಮಿಸುತ್ತಿವೆ. ಅಲ್ಲಿನ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.