ADVERTISEMENT

ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:20 IST
Last Updated 3 ಡಿಸೆಂಬರ್ 2025, 7:20 IST
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯಲ್ಲಿ ಹರಿಯುವ ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿರುವುದನ್ನು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ತೋರಿಸಿದರು
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯಲ್ಲಿ ಹರಿಯುವ ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿರುವುದನ್ನು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ತೋರಿಸಿದರು   

ಸೋಮವಾರಪೇಟೆ: ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿದ್ದು, ಜಲಚರಗಳು ಸಾಯುತ್ತಿವೆ. ಜಾನುವಾರುಗಳೂ ಇದೇ ನೀರನ್ನು ಸೇವಿಸುವ ಆತಂಕವಿದ್ದು, ತಕ್ಷಣ ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಆಗ್ರಹಿಸಿದೆ.

‘ಗ್ರಾಮದ ಹೊಳೆಗೆ ಕಾಫಿ ಪಲ್ಪರ್ ನೀರು ಬಿಟ್ಟಿರುವುದರಿಂದ ಹೊಳೆಯಲ್ಲಿರುವ ಜಲಚರಗಳು ಸತ್ತು ತೇಲುತ್ತಿವೆ. ಹೊಳೆಗೆ ಇಂತಹ ಕಲುಷಿತ ನೀರು ಬಿಡುತ್ತಿರುವ ಕಾಫಿ ಪಲ್ಪರ್ ಘಟಕದವರಿಗೆ ಮಾನವೀಯತೆಯೂ ಇಲ್ಲವಾಗಿದೆ. ಇದೇ ನೀರನ್ನು ದನಕರುಗಳು ಸಹ ಕುಡಿಯಲಿದ್ದು, ಅವುಗಳ ಪ್ರಾಣಕ್ಕೂ ಸಂಚಕಾರ ತಂದೊಡ್ಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಇಲಾಖೆ ಕೈಕಟ್ಟಿ ಕುಳಿತಿದೆ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರತಿ ವರ್ಷವೂ ಇಂತಹ ಕೃತ್ಯ ನಡೆಯುತ್ತಲೇ ಇದೆ. ಈ ಹಿಂದೆ ಜಿಲ್ಲಾಧಿಕಾರಿಗೆ ದೂರು ನೀಡಿದ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿದವರು ಮತ್ತೆ ಇತ್ತ ತಲೆಹಾಕಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಇದೀಗ ಕಾಫಿ ಪಲ್ಪಿಂಗ್ ಸಮಯವಾಗಿದ್ದು, ಕೆಲವೊಂದು ಕಡೆಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯದ ನೀರನ್ನು ಜಲಮೂಲಗಳಿಗೆ ಬಿಡಲಾಗುತ್ತಿದೆ. ಎಲ್ಲಾ ಕಾಫಿ ಪಲ್ಪಿಂಗ್ ಘಟಕಗಳನ್ನು ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ಎಚ್ಚರಿಕೆ ನೀಡುವ ಕೆಲಸವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.