ADVERTISEMENT

ಮುಂದೆ ಕಾದಿದೆ ಇನ್ನಷ್ಟು ಚಳಿ!

ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ, ನಾಗನಹಳ್ಳಿಯ ಕೃಷಿ ಹವಾಮಾನ ಸೇವಾ ವಿಭಾಗ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 3:10 IST
Last Updated 13 ಡಿಸೆಂಬರ್ 2025, 3:10 IST
ಉಮಾಶಂಕರ್
ಉಮಾಶಂಕರ್   

ಮಡಿಕೇರಿ: ಮುಂದಿನ 5 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ತಾಪ‍ಮಾನ ಕುಸಿತವಾಗಲಿದ್ದು, ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಳವಾಗಲಿದೆ. ಮುಂಬರುವ ದಿನಗಳಲ್ಲಿ ಶೀತ ಅಲೆ ಜಿಲ್ಲೆಗೂ ಬರುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

‘ಶೀತ ಅಲೆ ಈಗಾಗಲೇ ಉತ್ತರ ಕರ್ನಾಟಕದ ಭಾಗಗಳ‌ನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕನಿಷ್ಠ ತಾ‍ಪಮಾನ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬರುವ ದಿನಗಳಲ್ಲಿ ಕೊಡಗಿನಲ್ಲೂ ಇದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ’ ಎಂದು ಮೈಸೂರಿನ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಕೊಡಗು ಜಿಲ್ಲೆಯಲ್ಲಿ ಇಳಿಕೆ ಗತಿಯಲ್ಲಿದೆ. ಶುಕ್ರವಾರವಂತೂ 13.07 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಇದು ಶನಿವಾರ 12.09, ಭಾನುವಾರ 12.05 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.

ADVERTISEMENT

ಫೆಸಿಫಿಕ್‌ ಮಹಾ ಸಾಗರದಲ್ಲಿ ‘ಲಾ ನಿನಾ’ ಸೃಷ್ಟಿಯಾಗಿರುವುದರಿಂದ ಚಳಿಗಾಳಿ ಬೀಸಲಾರಂಭಿಸಿದೆ. ಶೀತ ಅಲೆ ವ್ಯಾಪಿಸುತ್ತಿದೆ. ಇದರಿಂದ ರಾಜ್ಯದ ನಾನಾ ಕಡೆ ಕನಿಷ್ಠ ತಾಪಮಾನ ಭಾರಿ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

ಈ ಬಗೆಯ ಚಳಿ ಜನವರಿ ಮತ್ತು ಫೆಬ್ರುವರಿಯಲ್ಲಿಯೂ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹವಾಮಾನಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಮುನ್ನಚ್ಚರಿಕಾ ಕ್ರಮಗಳು

ಮುಂಜಾನೆ ಮತ್ತು ಸಂಜೆ ತಡವಾಗಿ ಬರುವ ಶೀತವು ಬೆಳೆ ಬೆಳವಣಿಗೆ, ಹಣ್ಣಿನ ರಚನೆ ಮತ್ತು ಜಾನುವಾರು ಮತ್ತು ಕೋಳಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರೈತರು ತಮ್ಮ ಬೆಳೆಗಳು ಮತ್ತು ಪ್ರಾಣಿಗಳನ್ನು ರಕ್ಷಿಸಲು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿಗೆ, ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಮತ್ತು ಶೀತದ ಒತ್ತಡವನ್ನು ಕಡಿಮೆ ಮಾಡಲು ಒಣಹುಲ್ಲಿನ ಅಥವಾ ಒಣ ಎಲೆಗಳಿಂದ ಹಸಿಗೊಬ್ಬರ ಹಾಕಲು ಶಿಫಾರಸು ಮಾಡಲಾಗಿದೆ. ಬೇರುಗಳಿಗೆ ಹಾನಿಯಾಗದಂತೆ ತಡೆಯಲು ಸಂಜೆ ತಡವಾಗಿ ನೀರಾವರಿ ಮಾಡುವ ಬದಲು ಬೆಳಿಗ್ಗೆ ನೀರಾವರಿ ಮಾಡುವುದು ಸೂಕ್ತ. ಬಾಳೆ, ಕಾಫಿ, ಮೆಣಸು ಮತ್ತು ಅಡಿಕೆಯಂತಹ ತೋಟ ಬೆಳೆಗಳನ್ನು ಸಾಕಷ್ಟು ಮಣ್ಣಿನ ತೇವಾಂಶದೊಂದಿಗೆ ನಿರ್ವಹಿಸಬೇಕು ಮತ್ತು ಗಾಳಿತಡೆಗಳು ಅಥವಾ ನೆರಳು ಪರದೆಗಳು ಎಳೆಯ ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜಾನುವಾರುಗಳಿಗೆ ಬೆಚ್ಚಗಿನ ಆಶ್ರಯಗಳು, ಒಣ ಹಾಸಿಗೆ ಮತ್ತು ಪೋಷಕಾಂಶ-ಭರಿತ ಮೇವನ್ನು ಒದಗಿಸಬೇಕು, ಆದರೆ ಶೀತ ಸಂಬಂಧಿತ ಒತ್ತಡವನ್ನು ತಡೆಗಟ್ಟಲು ಕೋಳಿ ಶೆಡ್‌ಗಳನ್ನು ನಿರೋಧಿಸಬೇಕು. ಈ ಅವಧಿಯಲ್ಲಿ ರೇಷ್ಮೆ ಹುಳು ಸಾಕಣೆಗೆ ವಿಳಂಬವಾದ ಗೂಡು ರಚನೆಯನ್ನು ತಪ್ಪಿಸಲು ಎಚ್ಚರಿಕೆಯ ತಾಪಮಾನ ನಿರ್ವಹಣೆಯ ಅಗತ್ಯವಿರುತ್ತದೆ ಎಂದು ಮೈಸೂರಿನ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ನೋಡಲ್ ಅಧಿಕಾರಿ ಡಾ.ಎನ್.ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.