ADVERTISEMENT

ಕೊಡಗು: ವಿಮಾ ಮೊತ್ತ ನೀಡಲು ಗ್ರಾಹಕರ ಆಯೋಗ ಆದೇಶ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:33 IST
Last Updated 2 ಜುಲೈ 2025, 6:33 IST
   

ಮಡಿಕೇರಿ: ‘ವೇಟಿಂಗ್ ಪಿರಿಯಡ್’ ನೆವವೊಡ್ಡಿ ಆರೋಗ್ಯ ವಿಮೆ ನೀಡಲು ನಿರಾಕರಿಸಿದ್ದ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಮಾ ಮೊತ್ತ ನೀಡಲು ಆದೇಶಿಸಿದೆ.

ಜೈರಸ್ ಥಾಮಸ್ ಅಲೆಕ್ಸಾಂಡರ್ ಮತ್ತು ಅವರ ಪತ್ನಿ ಶಾಲಿನಿ ಅವರು ಆರೋಗ್ಯ ವಿಮಾ ಕಂಪನಿಯೊಂದರಿಂದ ₹ 5 ಲಕ್ಷಕ್ಕೆ ಆರೋಗ್ಯ ವಿಮೆಯನ್ನು ಪಡೆದಿದ್ದರು. ಶಾಲಿನಿ ಅವರಿಗೆ ಕಾಯಿಲೆಯೊಂದು ಕಾಣಿಸಿಕೊಂಡು ಅದರ ಚಿಕಿತ್ಸಾ ವೆಚ್ಚ ₹ 3.81 ಲಕ್ಷವನ್ನು ಕ್ಲೈಂ ಮಾಡಲು ಹೋದಾಗ ಕಂಪನಿಯು 2 ವರ್ಷಗಳ ವೇಟಿಂಗ್ ಪಿರಿಯಡ್ ಇದೆ ಎಂದು ಹೇಳಿ ವಿಮಾ ಮೊತ್ತ ನೀಡಲು ನಿರಾಕರಿಸಿದರು. ನಂತರ, ಇವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದರು.

ಅರ್ಜಿಯನ್ನು ಪರಿಗಣಿಸಿದ ಆಯೋಗದ ಪ್ರಭಾರ ಅಧ್ಯಕ್ಷೆ ಡಾ.ಸಿ.ರೇಣುಕಾಂಬ ಮತ್ತು ಸದಸ್ಯೆ ಗೌರಮ್ಮಣ್ಣಿ ಅವರು, ‘ವಿಮಾ ಕಂಪನಿಯ ವ್ಯವಸ್ಥಾಪಕರಿಗೆ ಈ ಕಾಯಿಲೆ ಕಾಣಿಸಿಕೊಂಡಿದ್ದರೆ 2 ವರ್ಷ ಕಳೆದ ನಂತರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ’ ಎಂದು ಪ್ರಶ್ನಿಸಿ ದೂರುದಾರರಿಗೆ ಆಸ್ಪತ್ರೆ ವೆಚ್ಚ ₹ 3.81 ಲಕ್ಷ, ಮಾನಸಿಕ ವೇದನೆಗೆ ₹ 25 ಸಾವಿರ, ವ್ಯಾಜ್ಯದ ಖರ್ಚು ವೆಚ್ಚಗಳಿಗೆ ₹ 10 ಸಾವಿರವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿದರು.

ADVERTISEMENT

ನಿಶ್ಚಿತ ಠೇವಣಿ ವಾಪಸ್ಸಿಗೆ ಆದೇಶ

₹ 10 ಲಕ್ಷ ನಿಶ್ಚಿತ ಠೇವಣಿ ಅವಧಿ ಮುಗಿದರೂ ವಾಪಸ್‌ ನೀಡದ ಸಹಕಾರ ಸಂಘಕ್ಕೆ ವಾಪಸ್ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಎಂ.ಡಿ.ಕಾರಿಯಪ್ಪ ಅವರು ₹ 10 ಲಕ್ಷ ಹಣವನ್ನು 2023ರಲ್ಲಿ ಸಹಕಾರ ಸಂಘವೊಂದರಲ್ಲಿ ನಿಶ್ಚಿತ ಠೇವಣಿಯಾಗಿ ಇರಿಸಿದ್ದರು. ಅದರ ಅವಧಿ 2024ಕ್ಕೆ ಮುಗಿದಾಗ ವಾಪಸ್ ನೀಡಲು ಸಂಘದವರು ವಿಳಂಬ ಧೋರಣೆ ಅನುಸರಿಸಿದರು. ಇದನ್ನು ಪ್ರಶ್ನಿಸಿ ಕಾರಿಯಪ್ಪ ಆಯೋಗಕ್ಕೆ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಆಯೋಗದ ಪ್ರಭಾರ ಅಧ್ಯಕ್ಷೆ ಡಾ.ಸಿ.ರೇಣುಕಾಂಬ ಮತ್ತು ಸದಸ್ಯೆ ಗೌರಮ್ಮಣ್ಣಿ ಅವರು, ಸಂಘದವರು ಸಹಕಾರ ಕಾಯ್ದೆಯನ್ನು ಉಲ್ಲಂಘಿಸಿದ್ದು ಠೇವಣಿಯ ಮೊತ್ತ ಹಾಗೂ ಬಡ್ಡಿ ಸೇರಿಸಿ ₹ 10.90 ಲಕ್ಷ, ಮಾನಸಿಕ ವೇದನೆಗೆ ₹ 10 ಸಾವಿರ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳಿಗೆ ₹ 10 ಸಾವಿರವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.