ADVERTISEMENT

ಕೊರೊನಾ ವೈರಸ್ ಪರಿಣಾಮ: ಎರಡು ಗ್ರಾಮಗಳು ಬಂದ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 13:57 IST
Last Updated 26 ಮಾರ್ಚ್ 2020, 13:57 IST
ಸೋಮವಾರಪೇಟೆ ಸಮೀಪದ ಕುಸುಬೂರು ಗ್ರಾಮದಲ್ಲಿ ಹೊರಗಿನವರಿಗೆ ಗ್ರಾಮ ಪ್ರವೇಶ ನಿಷೇಧಿಸಿ, ರಸ್ತೆ ಬಂದ್ ಮಾಡಿರುವುದು
ಸೋಮವಾರಪೇಟೆ ಸಮೀಪದ ಕುಸುಬೂರು ಗ್ರಾಮದಲ್ಲಿ ಹೊರಗಿನವರಿಗೆ ಗ್ರಾಮ ಪ್ರವೇಶ ನಿಷೇಧಿಸಿ, ರಸ್ತೆ ಬಂದ್ ಮಾಡಿರುವುದು   

ಸೋಮವಾರಪೇಟೆ: ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಮ್ಮ ಗ್ರಾಮಕ್ಕೂ ಅದರ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ತಾಲ್ಲೂಕಿನ ಎರಡು ಗ್ರಾಮಗಳು ತಾತ್ಕಾಲಿಕವಾಗಿ ಸಂಬಂಧ ಕಡಿತಗೊಳಿಸಿಕೊಂಡಿವೆ.

ನೇರಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮ ಹಾಗೂ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು-ಬೇಳೂರು ಗ್ರಾಮದೊಳಗೆ ಹೊರಗಿನವರು ಸಂಚರಿಸಬಾರದೆಂದು ಗ್ರಾಮ ಸಭೆಯಲ್ಲಿ ನಿರ್ಧರಿಸಿ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದಾರೆ.

ಗ್ರಾಮದವರು ಬೈಕ್ ನಲ್ಲಿ ಅವಶ್ಯಕವಿದ್ದಲ್ಲಿ ಮಾತ್ರ ಸಂಚರಿಸಬೇಕು. ಹೊರ ಜಿಲ್ಲೆ ಮತ್ತು ಹೊರದೇಶಗಳಲ್ಲಿರುವ ಗ್ರಾಮ ನಿವಾಸಿಗಳು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಗ್ರಾಮಕ್ಕೆ ಬರಬೇಕು. ಗ್ರಾಮಕ್ಕೆ ಸಂಬಂಧಪಡದವರು, ಗ್ರಾಮಾಧ್ಯಕ್ಷರ ಅನುಮತಿ ಪಡೆದು ಬರಬೇಕು ಎಂದು ಗ್ರಾಮ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ADVERTISEMENT

ಮಸಗೋಡು ಗ್ರಾಮದಲ್ಲಿ ಸುಮಾರು 75 ಹಾಗೂ ಕುಸುಬೂರು ಗ್ರಾಮದಲ್ಲಿ 60 ಕುಟುಂಬಗಳಿವೆ. ಎಲ್ಲಾ ಕುಟುಂಬಗಳು ಕೃಷಿಕರಾಗಿದ್ದು, ಈಗಾಗಲೇ ಕಷ್ಟದ ಬದುಕನ್ನು ನಡೆಸುತ್ತಿರುವ ರೈತರಿಗೆ ಕರೋನ ವೈರಸ್ ನಿಂದ ಸಂಕಷ್ಟ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ವೈರಸ್ ಹರಡಿದರೆ, ಜೀವ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಈ ಕಾರಣದಿಂದ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಗ್ರಾಮದ ಪ್ರಮುಖರು ಹೇಳಿದರು.

ಕೊರೊನಾ ವಿರುದ್ಧ ಹೋರಾಟ ಮಾಡಲೇ ಬೇಕಾಗಿದೆ. ಸರ್ಕಾರದ ತುರ್ತು ಅದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮದವರೂ ಮನೆಯೊಳಗೆ ಇರುತ್ತೇವೆ. ಹೊರಗಿನಿಂದ ಊರುಗಳಿಂದ ಆಗಮಿಸಿದವರು ದಿನವಿಡಿ ಗ್ರಾಮದೊಳಗೆ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಯಾರಿಗೆ ವೈರಸ್ ಅಂಟಿರುವುದೋ ಗೊತ್ತಾಗುವುದಿಲ್ಲ. ಈ ಕಾರಣದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯ, ದೇಶಗಳಲ್ಲಿರುವ ಗ್ರಾಮದವರು, ಪರೀಕ್ಷೆ ಮಾಡಿಸಿಕೊಂಡು ಬರಬೇಕಾಗಿದೆ ಎಂದು ಗ್ರಾ.ಪಂ ಸದಸ್ಯ ಬೋಪಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.