ADVERTISEMENT

ಕೊಡಗು: ಮೂರು ದಿನ ಮಾತ್ರ ದಿನಸಿ, ತರಕಾರಿ ಖರೀದಿಗೆ ಅವಕಾಶ

ಮೀನು, ಮಾಂಸ ಮಾರಾಟ ಸಂಪೂರ್ಣ ನಿಷೇಧ 

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 12:08 IST
Last Updated 27 ಮಾರ್ಚ್ 2020, 12:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್‌ ಮತ್ತಷ್ಟು ವ್ಯಾಪಿಸುತ್ತಿದ್ದು ಕೊಡಗು ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆದು, ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೈಗೊಂಡ ಕೆಲವು ನಿರ್ಣಯಗಳು ಇಲ್ಲಿವೆ.

* ಬೆಳಿಗ್ಗೆ 6ರಿಂದ 8ರ ತನಕ ಹಾಲು, ದಿನಪತ್ರಿಕೆ ಖರೀದಿಸಲು ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆ ತೆರೆಯಲು ವರ್ತಕರಿಗೆ ಸಮಯ ನಿಗದಿ ಮಾಡಲಾಗಿದೆ.

ADVERTISEMENT

* ವಾರದ 3 ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮಾತ್ರ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹಣ್ಣು–ಹಂಪಲುಗಳ ಖರೀದಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಈ ಸಮಯದಲ್ಲಿ ಮಾತ್ರ ಅಂಗಡಿ ಬಾಗಿಲು ತೆರೆಯಬೇಕು. ಈ ಹಿಂದೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ದಿನಸಿ ಖರೀದಿಗೆ ಅವಕಾಶ ನೀಡಲಾಗಿತ್ತು.

* ಮೀನು ಮತ್ತು ಮಾಂಸದ ಮಾರಾಟ ನಿಷೇಧಿಸಲಾಗಿದೆ. ಈ ಮೊದಲು ಮೀನು ಮಾರಾಟಕ್ಕೆ ಅವಕಾಶ ಇತ್ತು.

* ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಆಗಮಿಸಬೇಕು.

* ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು.

* ಆಸ್ಪತ್ರೆ, ಕ್ಲಿನಿಕ್, ಫಾರ್ಮಸಿ, ಆಪ್ಟಿಕಲ್ ಸ್ಟೋರ್, ಡಯಾಗ್ನೋಸ್ಟಿಕ್ ಸೆಂಟರ್ ಒಳಗೊಂಡಂತೆ ಇತರೆ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಅಂಗಡಿ ಮಳಿಗೆಗಳು, ಗೋದಾಮು, ಕಾರ್ಖಾನೆಗಳು ದಿನದ 24 ಗಂಟೆಗಳು ಕಾರ್ಯಾಚರಿಸಲು ವಿನಾಯಿತಿ ಇರುತ್ತದೆ.

* ದಿನದ 24 ಗಂಟೆಗಳಲ್ಲಿಯೂ ನಿಷೇಧಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದು, ಗುಂಪುಗೂಡುವುದು ಕಂಡುಬಂದರೆ ಕಾನೂನು ಕ್ರಮ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.