ADVERTISEMENT

ಕೊರೊನಾ ಗೆದ್ದವರ ಕಥೆಗಳು | ಒಂದೆರಡು ದಿನದಲ್ಲಿ ವಾಸಿಯಾಗುವ ಕಾಯಿಲೆ

ಸುನಿಲ್ ಎಂ.ಎಸ್.
Published 2 ಆಗಸ್ಟ್ 2020, 13:10 IST
Last Updated 2 ಆಗಸ್ಟ್ 2020, 13:10 IST
ಎಂ.ವಿಸ್ಮಯ್, ಕೊರೊನಾ ಗೆದ್ದವರು,ಶಿವರಾಂ ರೈ ಬಡಾವಣೆ, ಸುಂಟಿಕೊಪ್ಪ
ಎಂ.ವಿಸ್ಮಯ್, ಕೊರೊನಾ ಗೆದ್ದವರು,ಶಿವರಾಂ ರೈ ಬಡಾವಣೆ, ಸುಂಟಿಕೊಪ್ಪ   

ಸುಂಟಿಕೊಪ್ಪ: ನನಗೆ ಕಳೆದ ವಾರ ತುಂಬಾ ಜ್ವರ ಇತ್ತು. ನನ್ನ ತಾಯಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಡೆಂಗಿ ಸೇರಿದಂತೆ ಜ್ವರಕ್ಕೆ ಸಂಬಂಧಿಸಿದ ಎಲ್ಲ ತಪಾಸಣೆಯನ್ನು ನೀಡಿದರು. ಆದರೂ, ಖಾಸಗಿ ವೈದ್ಯರ ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿದ ನಂತರ ವೈದ್ಯರು ನೀಡಿದ ಔಷಧಿಯನ್ನು ಸೇವಿಸಿ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಅದರಂತೆ ನಾನು ಮನೆಯಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದೆ.

ಆದರೆ, ಗಂಟಲು ದ್ರವ ನೀಡಿದ ಮೂರನೇ ದಿನ ಅಮ್ಮನಿಗೆ ದೂರವಾಣಿ ಕರೆ ಮಾಡಿ ನಿಮ್ಮ ಮಗನಿಗೆ ಕೊರೊನಾ ಸೋಂಕು ದೃಢವಾಗಿದೆ. ಆತನನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇವೆ ಎಂದಾಕ್ಷಣಾ ಎಲ್ಲರಿಗೂ ಒಮ್ಮೆಲೇ ದಿಗ್ಭ್ರಮೆ. ಆದಾಗಲೇ ನನಗೆ ಜ್ವರ ಮಾಯವಾಗಿತ್ತು. ಆದರೂ, ವೈದ್ಯರು, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯವರು ಮನೆಯವರಿಗೂ, ನನಗೆ ಧೈರ್ಯ ತುಂಬಿದರು. ಅಮ್ಮ ಅಳುತ್ತಿರುವುದನ್ನು ಕಂಡು ದುಃಖವಾಯಿತು. ನನ್ನನ್ನು ಆಂಬುಲೆನ್ಸ್ ಮೂಲಕ ಕುಶಾಲನಗರ ಸಮೀಪದ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಯಾರೂ ಪರಿಚಯವಿಲ್ಲದ ಜಾಗಕ್ಕೆ ಹೋಗಬೇಕಲ್ಲ ಎಂದು ಭಯವಾಯಿತು. ಆದರೆ, ನನ್ನ ನಮ್ಮೂರಿನ ಅಣ್ಣ ಇರುವ ಕೋಣೆಯಲ್ಲಿಯೇ ದಾಖಲಿಸಿದರು. ಇದರಿಂದ ಸಮಾಧಾನವಾಯಿತು. ಆಸ್ಪತ್ರೆಯಲ್ಲಿದ್ದ ನರ್ಸ್‌ಗಳು, ಸೋಂಕಿತ ಜನ, ವೈದ್ಯರು ತುಂಬಾ ಸಮಾಧಾನದಿಂದಲೇ ಮಾತನಾಡಿಸಿ, ಬೇಗ ಗುಣಮುಖನಾಗುತ್ತೀಯಾ; ಭಯ ಬೇಡ ಎಂದು ಧೈರ್ಯ ತುಂಬುತ್ತಾ ಮಾತ್ರೆ ನೀಡಿದರು.

ADVERTISEMENT

ಸಮಯಕ್ಕೆ ಸರಿಯಾಗಿ ಬಿಸಿನೀರು, ಸಮಯಕ್ಕೆ ಸರಿಯಾಗಿ ಬಂದು ಮಾತನಾಡಿಸುವ ಆರೋಗ್ಯ ಸಿಬ್ಬಂದಿ ನನಗೆ ಬಹಳ ಖುಷಿ ನೀಡಿತು. ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಸೇವಿಸಬೇಕು. ಮನೆಯಲ್ಲಿಯೂ ಔಷಧಿ ಮತ್ತು ಬಿಸಿಬಿಸಿ ಊಟ ಮಾಡಬೇಕು ಎಂದು ಸಲಹೆ ನೀಡಿದರು.

ಕೊರೊನಾ ಎಂದರೆ ಭ್ರಮೆ ಅಷ್ಟೇ. ನಮ್ಮ ಭಯವೇ ಕೊರೊನಾ. ನಾನು ಆಸ್ಪತ್ರೆಗೆ ಹೋಗುವ ಮುನ್ನ ಹೇಗಿದ್ದೆನೊ, ಬಿಡುಗಡೆಯ ನಂತರವೂ ಅದೇ ರೀತಿಯಲ್ಲಿ ಆರಾಮವಾಗಿಯೇ ಇದ್ದೇನೆ.

ಸುದ್ದಿ ವಾಹಿನಿಗಳಲ್ಲಿ ಕೊರೊನಾ ಎಂದರೆ ಆತಂಕ ಸೃಷ್ಟಿ ಮಾಡುವ ರೋಗ ಎಂದು ಭಾವಿಸಿದ್ದೆ. ಆದರೆ, ಇದು ಒಂದೆರಡು ದಿನದಲ್ಲಿಯೇ ವಾಸಿಯಾಗುವ ಕಾಯಿಲೆ. ಆದರೂ, ಮಾಸ್ಕ್, ಅಂತರ, ಬಿಸಿಬಿಸಿ ನೀರು, ಶಕ್ತಿ ನಿರೋಧಕ ಔಷಧಿ, ತರಕಾರಿ ಸೇವಿಸಿದರೆ ಈ ರೋಗದಿಂದ ದೂರ ಉಳಿಯಬಹುದು. ನಾನೇ ಧೈರ್ಯವಾಗಿದ್ದೇನೆ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಇರುವವರೆಲ್ಲರೂ ಖುಷಿ ಖುಷಿಯಾಗಿದ್ದಾರೆ.

ಅದರಲ್ಲೂ ನಮ್ಮ ಶಿವರಾಂ ರೈ ಬಡಾವಣೆಯ ಮನೆಯ ಸುತ್ತಮುತ್ತಲ ನಿವಾಸಿಗಳು ನನಗೆ ಸಿಹಿತಿಂಡಿ ನೀಡಿ, ಹೂವಿನ ಹಾರ ಹಾಕಿ ಬರಮಾಡಿಕೊಂಡಿದ್ದು, ಕೊರೊನಾ ಕೇವಲ ಭ್ರಮೆ ಎಂದೇ ತಿಳಿಯಿತು. ಬಡಾವಣೆಯ ಎಲ್ಲರಿಗೂ ಚಿರಋಣಿ.

– ಎಂ.ವಿಸ್ಮಯ್, ಕೊರೊನಾ ಗೆದ್ದವರು, ಶಿವರಾಂ ರೈ ಬಡಾವಣೆ, ಸುಂಟಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.