ಮಡಿಕೇರಿ: ಎರಡು ದಿನಗಳಿಂದ ಊಟ ಹಾಗೂ ದಿನಸಿ ಇಲ್ಲದೇ ಕಂಗಾಲಾಗಿದ್ದ ಹೊರ ಜಿಲ್ಲೆಯ ಕಾರ್ಮಿಕರಿಗೆ, ಕೊಡಗು ಜಿಲ್ಲಾ ಪೊಲೀಸರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಇಡೀ ದೇಶ ಕೊರೊನಾ ಕಂಟಕಕ್ಕೆ ಸಿಲುಕಿ ‘ಲಾಕ್‌ಡೌನ್’ ಸ್ಥಿತಿಯಲ್ಲಿದೆ. ಕೊಡಗು ಕೂಡ ಸ್ತಬ್ಧವಾಗಿದೆ. ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿವೆ. ಕೆಲಸವಿಲ್ಲದೆ ದಿನಗೂಲಿ ನೌಕರರು ಪರದಾಡುತ್ತಿದ್ದಾರೆ. ಕೊರೊನಾ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಈ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿಗೆ 6 ತಿಂಗಳ ಹಿಂದೆ ಬಂದಿದ್ದ ಕಟ್ಟಡ ಕಾರ್ಮಿಕರು, ಊಟ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದರು. ಒಂದೆಡೆ ಕೆಲಸವಿಲ್ಲ, ಮತ್ತೊಂದೆಡೆ ಹಣವಿಲ್ಲ. ಜೊತೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅಂಗಡಿ ಕೂಡ ಇಲ್ಲದ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿ ಕಳೆದೆರಡು ದಿನಗಳಿಂದ ಒಂದೊತ್ತು ಊಟ ಮಾಡುತ್ತ ಕಾರ್ಮಿಕರು ದಿನದೂಡುತ್ತಿದ್ದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಬಾಗದ ಖಾಲಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಜೋಪಾಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಐಹೊಳೆಯ 11 ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಬಡಪಾಯಿ ಕಾರ್ಮಿಕರು:ಕಳೆದ 6 ತಿಂಗಳುಗಳ ಹಿಂದೆ ಕಟ್ಟಡ ಕೆಲಸಕ್ಕೆಂದು 3 ಕುಟುಂಬದ11 ಮಂದಿ ಮಡಿಕೇರಿಗೆ ಆಗಮಿಸಿದ್ದರು. ಇವರೊಂದಿಗೆ ಜಿಲ್ಲೆಯ ವೃದ್ಧ ದಂಪತಿ ಕೂಡ ಜೋಪಾಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಊರೂರಿಗೆ ಕೆಲಸ ಅರಸಿಕೊಂಡು ತೆರಳುವ ಈ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಕೆಲಸಕ್ಕೆಂದು ಬರುತ್ತಿದ್ದರು. ಈ ವರ್ಷ ಕೂಡ ದುಡಿಮೆಗೆಂದು ಬಂದಿದ್ದ ಕಾರ್ಮಿಕರನ್ನು ಕೊರೊನಾ ವೈರಸ್ ಪರದಾಡುವಂತೆ ಮಾಡಿದೆ. ಇನ್ನೂ ಮಳೆಗಾಲ ಬರುವವರೆಗೂ ಇಲ್ಲೇ ಕೆಲಸ ಮಾಡಬೇಕೆಂದು ಕಾರ್ಮಿಕರು ನಿರ್ಧರಿಸಿದ್ದರು. ಆದರೆ, ಇದೀಗ ಇಲ್ಲಿರಲಾಗದೆ, ಊರಿನಲ್ಲಿರುವವರನ್ನು ನೋಡಲಾಗದೆ ಪರಿತಪಿಸುತ್ತಿದ್ದಾರೆ.
ಹಸಿವಿನಲ್ಲಿದ್ದ ಕಂದಮ್ಮಗಳು...: ಕಾರ್ಮಿಕರ ನಡುವೆ ಎರಡು ಪುಟ್ಟ ಕಂದಮ್ಮಗಳು ಹಸಿವಿನಲ್ಲಿ ನರಳುತ್ತಿದ್ದವು. ಊಟ, ಹಾಲು ಇಲ್ಲದೇ ನಿಶ್ಯಕ್ತಗೊಂಡಿದ್ದವು. ಇದ್ದ ಕೆಲ ಆಹಾರ ಸಾಮಗ್ರಿಗಳನ್ನು ಬಳಸಿ ಕಾರ್ಮಿಕರು ಹೇಗೊ ಒಂದೊತ್ತು ಊಟ ಮಾಡುತ್ತಿದ್ದರು. ಆದರೆ, ಶನಿವಾರ ಸಂಜೆ ಹೊತ್ತಿಗೆ ಒಂದಿಷ್ಟು ದಿನಸಿ ಸಾಮಗ್ರಿ ಇಲ್ಲದೆ ಪರದಾಡುತ್ತಿದ್ದರು. ಕಂದಮ್ಮಗಳ ಜೊತೆಗೆ, ಪೋಷಕರೂ ಉಪವಾಸ ಇದ್ದರು.
ಕೆಲಸದ ಒತ್ತಡದ ನಡುವೆಯೂ ಕೊಡಗು ಪೊಲೀಸರು ಹಸಿದ ಜೀವಗಳಿಗೆ ಊಟ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆ ತಿಳಿದರು. ನಂತರ, ಮಧ್ಯಾಹ್ನದ ಅನ್ನ, ಸಾಂಬಾರು, ವಡೆ ನೀಡಿ ಹಸಿವು ತಣಿಸಿದರು. ಇದರೊಂದಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಯ ಪ್ಯಾಕೇಜ್ ನೀಡಿದರು. ಪೊಲೀಸರ ಕಾರ್ಯಕ್ಕೆ ಹಸಿವಿನಲ್ಲಿದ್ದ ಕಾರ್ಮಿಕರು ಖುಷಿ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.