ADVERTISEMENT

ಮಡಿಕೇರಿ: ಕೊರೊನಾ ಸೃಷ್ಟಿಸಿದ ಕಣ್ಣೀರಿನ ಕಥೆಗಳು

ಸ್ವಗ್ರಾಮದಲ್ಲಿರುವ ವಯಸ್ಕ ತಂದೆ– ತಾಯಿಯ ಚಿಂತೆ

ಅದಿತ್ಯ ಕೆ.ಎ.
Published 3 ಏಪ್ರಿಲ್ 2020, 19:30 IST
Last Updated 3 ಏಪ್ರಿಲ್ 2020, 19:30 IST
ಲಾಕ್‌ಡೌನ್‌ನಿಂದ ಟ್ರಕ್‌ನಲ್ಲೇ ಕಾಲ ಕಳೆಯುತ್ತಿರುವ ಹೊರ ರಾಜ್ಯದ ಕೇಬಲ್‌ ಕೆಲಸಗಾರರು
ಲಾಕ್‌ಡೌನ್‌ನಿಂದ ಟ್ರಕ್‌ನಲ್ಲೇ ಕಾಲ ಕಳೆಯುತ್ತಿರುವ ಹೊರ ರಾಜ್ಯದ ಕೇಬಲ್‌ ಕೆಲಸಗಾರರು   

ಮಡಿಕೇರಿ: ಬೇಸಿಗೆ ವೇಳೆಯಲ್ಲೂ ಪ್ರಕೃತಿ ಮಡಿಲಿನಲ್ಲಿ ತಣ್ಣಗೆ ಇರುತ್ತಿದ್ದ ಕೊಡಗು ಜಿಲ್ಲೆಯಲ್ಲೂ ಕೊರೊನಾ ಭೀತಿ ಹಾಗೂ ಅದನ್ನು ತಡೆಗಟ್ಟಲು ಮಾಡಿರುವ ‘ಲಾಕ್‌ಡೌನ್‌’ ಹಲವು ಕಣ್ಣೀರಿನ ಕಥೆಗಳನ್ನೇ ಸೃಷ್ಟಿಸಿದೆ.

ದಿನದಿಂದ ದಿನಕ್ಕೆ ಜಿಲ್ಲೆಯ ಜನರು ಕಂಗಾಲಾಗಿ ಹೋಗುತ್ತಿದ್ದಾರೆ. ಎಲ್ಲೆಡೆಯೂ ಆತಂಕದ ವಾತಾವರಣ. ಕೊರೊನಾ ಸೃಷ್ಟಿಸಿರುವ ಕೆಲವು ಕಣ್ಣೀರು ಕಥೆಗಳು ಇಲ್ಲಿವೆ...

ಊರಿಗೆ ಹೋಗುವ ತುಡಿತ: ಕೊಡಗು ಜಿಲ್ಲೆಯ ಬಹುತೇಕ ಕಾಫಿ ಎಸ್ಟೇಟ್‌ಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರೇ ದುಡಿಯುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ತಮ್ಮೂರಿಗೆ ತೆರಳುವ ತುಡಿತ ಈಗ. ಅಲ್ಲಿರುವ ತಂದೆ, ತಾಯಿ ಸ್ಥಿತಿ ಏನಾಗಿದೆ? ಅವರಿಗೆ ಊಟ ಸಿಗುತ್ತಿದೆಯೇ? ಔಷಧಿ ಖರೀದಿ ಸಾಧ್ಯವಾಗಿದೆಯೇ? ಹೇಗಿದೆ ನಮ್ಮ ರಾಜ್ಯದ ಪರಿಸ್ಥಿತಿ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಕಾರ್ಮಿಕರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.

ಕೆಲವು ಮಾಲೀಕರು ತಮ್ಮ ಕಾರ್ಮಿಕರನ್ನು ಲೈನ್‌ಮನೆಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಉಳಿದವರು ಕೈಚೆಲ್ಲಿದ್ದಾರೆ. ಪರಿಸ್ಥಿತಿ ಸುಧಾರಣೆ ಆಗುವ ತನಕ ಕಾರ್ಮಿಕರು ನೆಲೆಸಿರುವ ಸ್ಥಳದಿಂದ ಯಾರೂ ಹೊರ ಹಾಕಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಬಿಡಾಡಿ ದನಗಳಿಗೂ ಗೋಳು:ಮಡಿಕೇರಿ, ವಿರಾಜಪೇಟೆ ಹಾಗೂ ಕುಶಾಲನಗರದಲ್ಲಿ ಹೆಚ್ಚಾಗಿ ಬಿಡಾಡಿ ದನಗಳು ಇವೆ. ಅವುಗಳು ನಗರದ ಸುತ್ತ ಅಡ್ಡಾಡಿ, ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಲಾಕ್‌ಡೌನ್ ಆದ ಮೇಲೆ ಈ ಬಿಡಾಡಿ ದನಗಳಿಗೂ ಆಹಾರದ ಕೊರತೆ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾಲೀಕರು ಹೇಗೋ ಗದ್ದೆಯಲ್ಲಿ ಮೇಯಲು ಬಿಟ್ಟು ಬರುತ್ತಿದ್ದಾರೆ. ನಗರ ಪ್ರದೇಶದ ಬಿಡಾಡಿ ದಿನಗಳಿಗೆ ತೊಂದರೆ ಉಂಟಾಗಿದೆ.

ADVERTISEMENT

ಟ್ರಕ್‌ನಲ್ಲೇ ವಾಸ...!:‘ಲಾಕ್‌ಡೌನ್‌’ ಬಳಿಕ ಉಳ್ಳವರು ಮನೆಯಲ್ಲಿ ಕಾಲ ಕಾಳೆಯುತ್ತಿದ್ದಾರೆ. ಆದರೆ, ಲಾರಿ ಚಾಲಕರು , ಕ್ಲೀನರ್‌ ಬದುಕು ಹೇಗೆ? ಅಂತರ ರಾಜ್ಯ ಗಡಿ ಬಂದ್ ಆಗಿರುವ ಕಾರಣಕ್ಕೆ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳು ಅಲ್ಲಲ್ಲೇ ಕಾಲಕಳೆಯುವ ಪರಿಸ್ಥಿತಿಯಿದೆ. ಮಡಿಕೇರಿಯ ಹಾಕಿ ಕ್ರೀಡಾಂಗಣದ ಎದುರು ಟ್ರಕ್‌ ನಿಲ್ಲಿಸಿಕೊಂಡಿರುವ ಜಾರ್ಖಂಡ್ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಲಾಕ್‌ಡೌನ್ ಘೋಷಣೆಯಾದ ದಿನಗಳಿಂದಲೂ ಅಲ್ಲೇ ಕಾಲ ಕಳೆಯುತ್ತಿದ್ದಾರೆ.

ಜಾರ್ಖಂಡ್‌ನಿಂದ 10 ಕಾರ್ಮಿಕರು ಕೇಬಲ್‌ ಕೆಲಸಕ್ಕಾಗಿ ಬಂದಿದ್ದರು. ಲಾಕ್‌ಡೌನ್‌ ಘೋಷಣೆಯಾದ ಮೇಲೆ ಇವರಿಗೂ ಸಂಕಷ್ಟ ಎದುರಾಗಿದೆ. ಅಲ್ಲಿಯೇ ಅಡುಗೆ, ಊಟ ತಯಾರಿಸಿಕೊಂಡು ಪಕ್ಕದಲ್ಲೇ ಟ್ಯಾಂಕರ್‌ವೊಂದರ ನೀರಿನಿಂದ ಸ್ನಾನ ಮಾಡಿಕೊಳ್ಳುತ್ತಿದ್ದಾರೆ. ಬೇಗ ಪರಿಸ್ಥಿತಿ ಸುಧಾರಣೆ ಆಗಲಿ ಎಂಬುದು ಈ ಕಾರ್ಮಿಕರ ಆಶಯ.

ಗುತ್ತಿಗೆ ಪಡೆದಿರುವ ಮಾಲೀಕರು, ದಿನ ಬಿಟ್ಟು ದಿನ ಆಹಾರ ತಂದು ಕೊಡುತ್ತಿದ್ದಾರೆ. ಎಲ್ಲರೂ ಟ್ರಕ್‌ನಲ್ಲೇ ಮಗಲುತ್ತಿದ್ದೇವೆ. ಇದುವರೆಗೂ ಅಷ್ಟು ಸಮಸ್ಯೆ ಆಗಿಲ್ಲ. ಮುಂದೆ ಗೊತ್ತಿಲ್ಲ. ಹೊರಗೆ‌ ಹೋಗಬೇಕಾದರೆ ಮಾಸ್ಕ್ ಧರಿಸಬೇಕು. ಮಾಸ್ಕ್‌ಗಳೂ ದೊರೆಯುತ್ತಿಲ್ಲ. ಮಾಸ್ಕ್‌ಗಳ ಅಗತ್ಯವಿದೆ ಎಂದು ಕಾರ್ಮಿಕ ರಾಮು ಹೇಳಿದರು.

ಗರ್ಭದಲ್ಲೇ ಜಗತ್ತು ತೊರೆದ ಕಂದಮ್ಮ:ರಾಯಚೂರು ಜಿಲ್ಲೆ, ಲಿಂಗಸೂರು ತಾಲ್ಲೂಕಿನ ಜಾಕಿನ್‌ಗೊಡು ಗ್ರಾಮದ ದೇವರಾಜ್ ಹಾಗೂ ಸರೋಜಾ ದಂಪತಿ ಕೆಲವು ತಿಂಗಳ ಹಿಂದೆ ಕೂಲಿ ಅರಸಿ ಕುಶಾಲನಗರ ಸಮೀಪದ ಕೂಡಿಗೆಗೆ ಬಂದಿದ್ದರು. ಅಲ್ಲೇ ಖಾಸಗಿ ಬಡಾವಣೆಯಲ್ಲಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದರು.

ಸರೋಜಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮೇಸ್ತ್ರಿಯೊಬ್ಬರ ಸಹಾಯದಿಂದ ಮಡಿಕೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಕೆಯನ್ನು ‍ಪರೀಕ್ಷಿಸಿದ್ದ ವೈದ್ಯರು, ಆಕೆಯ ಹೊಟ್ಟೆಯಲ್ಲೇ ಕಂದಮ್ಮ ಸಾವನ್ನಪ್ಪಿರುವ ಆಘಾತಕಾರಿ ಮಾಹಿತಿ ತಿಳಿಸುತ್ತಾರೆ. ಕಂದಮ್ಮನ ಕಳೇಬರ ಊರಿಗೆ ಕೊಂಡೊಯ್ಯಲು ಲಾಕ್‌ಡೌನ್‌ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಮಡಿಕೇರಿಯಲ್ಲಿ ಹೇಗಪ್ಪಾ ಅಂತ್ಯಸಂಸ್ಕಾರ ನೆರವೇರಿಸುವುದು ಎಂಬ ನೋವಿನಲ್ಲಿದ್ದ ದಂಪತಿಗೆ ಮಡಿಕೇರಿಯ ಯೂತ್ ಕಮಿಟಿ ಸದಸ್ಯರು ನೆರವಾಗಿದ್ದಾರೆ.

ಗೌರವಾಧ್ಯಕ್ಷ ಕಲೀಲ್, ಕಮಿಟಿ ಅಧ್ಯಕ್ಷ ಜೈನುಲ್ ಅಬಿದ್, ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು, ಮಡಿಕೇರಿ ರಕ್ಷಣಾ ವೇದಿಕೆಯ ಖಜಾಂಚಿ ಉಮೇಶ್ ಕುಮಾರ್ ಅವರು, ಅಂತ್ಯಸಂಸ್ಕಾರಕ್ಕೆ ನೆರವು ನೀಡಿದ್ದಾರೆ. ಕೊನೆಗೆ ಇದೇ ತಂಡದ ಸದಸ್ಯರು ವಾಹವದ ವ್ಯವಸ್ಥೆ ಮಾಡಿ ಸರೋಜ ಅವರ ಸ್ವಂತ ಊರಾದ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್‌ಡೌನ್‌ ವೇಳೆ ಈ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.