ಮಡಿಕೇರಿ: ಮಗ್ಗುಲಲ್ಲೇ ಇರುವ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದು ಕೊಡಗಿಗೂ ಎಚ್ಚರಿಕೆ ಗಂಟೆ ಎನಿಸಿದೆ. ಅತ್ತ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿವೆ. ಈ ಕಾರಣದಿಂದ ಜಿಲ್ಲೆಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸಕಲ ಸಿದ್ಧತೆಗಳನ್ನೂ ಮಾಡಬೇಕಿದೆ.
ವಾರಾಂತ್ಯದ ರಜೆ, ಬಿರುಸಿನ ಮಳೆಯ ನೆಪಗಳನ್ನು ಹೂಡದೇ ಕೋವಿಡ್ ಪ್ರಕರಣಗಳು ಒಂದು ವೇಳೆ ಜಿಲ್ಲೆಯಲ್ಲೂ ಕಂಡು ಬಂದರೆ ಅವರಿಗೆ ನೀಡಬೇಕಾದ ಚಿಕಿತ್ಸೆಗೆ ಎಲ್ಲ ಬಗೆಯ ಪೂರ್ವ ಸಿದ್ಧತೆಗಳನ್ನು ಮಾಡಬೇಕಾಗಿದೆ. ಸದ್ಯ, ಆಮ್ಲಜನಕ ಹಾಸಿಗೆಗಳಿಗೆ ಕೊರತೆ ಇಲ್ಲ ಎಂಬುದು ನಿಜ. ಸಾಕಷ್ಟು ಆಮ್ಲಜನಕ ತಯಾರಿಕಾ ಪ್ಲಾಂಟ್‌ಗಳೂ ಇವೆ. ಆದರೆ, ಅವುಗಳೆಲ್ಲವೂ ಕಾರ್ಯುನಿರ್ವಹಿಸುತ್ತಿವೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕಿದೆ.
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಕಾಲೇಜಿನ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಈಗಾಗಲೇ ಆಮ್ಲಜನಿಕ ಪ್ಲಾಂಟ್‌ಗಳಿವೆ. ಸಾಕಷ್ಟು ಆಮ್ಲಜನಕ ಹಾಸಿಗೆಗಳೂ ಇವೆ. ಇನ್ನು ಕೊಡಗು ಜಿಲ್ಲೆಯಲ್ಲಿರುವ 7 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 2 ತಾಲ್ಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಹಾಸಿಗೆಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಹೇಳುತ್ತಾರೆ. ಜಿಲ್ಲೆಯಲ್ಲಿರುವ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಜ್ವರಕ್ಕೆ ಬೇಕಾದ ಚಿಕಿತ್ಸೆ ಲಭ್ಯವಿದೆ.
ಆಮ್ಲಜನಿಕ ಪ್ಲಾಂಟ್‌ಗಳು, ಹಾಸಿಗೆಗಳು ಇದ್ದಾಗ್ಯೂ ಅವೆಲ್ಲವೂ ಸುಸ್ಥಿತಿಯಲ್ಲಿವೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಬೇಕಿದೆ. ಕೋವಿಡ್ ಲಕ್ಷಣಗಳಿಂದ ಬಳಲುವ ರೋಗಿಗಳಿಗೆ ಮೂಗು ಮತ್ತು ಗಂಟಲು ದ್ರವದ ಪರೀಕ್ಷೆ ಮಾಡಿಸಿ, ಕೋವಿಡ್ ಎಂದು ಖಚಿತಪಟ್ಟರೆ ಕ್ವಾರಂಟೈನ್‌ನಲ್ಲಿರಿಸಬೇಕಿದೆ. ಪಕ್ಕದಲ್ಲೆ ಕೇರಳವಿದ್ದು, ಹೆಚ್ಚಿನ ಸಂಚಾರ ಇರುವುದರಿಂದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ಇರಿಸಬೇಕಾದ ಅನಿವಾರ್ಯತೆ ಇದೆ.
ಇಲ್ಲಿಯವರೆಗೂ ಕೋವಿಡ್ ಪರೀಕ್ಷೆ ಜಿಲ್ಲೆಯಲ್ಲಿ ನಡೆಯುತ್ತಿರಲಿಲ್ಲ. ಈಗ ಸೋಮವಾರದಿಂದ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಜ್ವರದ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಂ.ಸತೀಶ್‌ಕುಮಾರ್ ಹೇಳುತ್ತಾರೆ.
ಇಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೆ 2 ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್‌ಗಳಿವೆ. ಆಕ್ಸಿಜನ್ ಜನರೇಟರ್ ಸಹ ಇದೆ. ಒಟ್ಟು ಇರುವ 550 ಹಾಸಿಗೆಗಳ ಪೈಕಿ 300ಕ್ಕೂ ಅಧಿಕ ಹಾಸಿಗೆಗಳಿಗೆ ಆಕ್ಸಿಜನ್ ಸೌಲಭ್ಯ ಇದೆ. 50ಕ್ಕೂ ಅಧಿಕ ತೀವ್ರ ನಿಗಾ ಘಟಕಗಳಿವೆ. ಹಾಗಾಗಿ, ಯಾವುದೇ ಆತಂಕ ಬೇಡ ಎಂಬುದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಭಯ.
ಮೂಡಿಸಬೇಕಿದೆ ಜಾಗೃತಿ
ಒಂದೆಡೆ ಆಕ್ಸಿಜನ್ ಹಾಸಿಗೆಗಳಿವೆ ಯಾವುದೇ ಆತಂಕ ಬೇಡ ಎಂದು ವೈದ್ಯರು ಹೇಳಿದರೂ ಮತ್ತೊಂದೆಡೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಕೋವಿಡ್ ಕಾಲಘಟ್ಟದ ನಂತರ ಇತ್ತೀಚಿನ ದಿನಗಳಲ್ಲಿ ಯಾವುದೇ ಜಾಗೃತಿ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ನಡೆದಿಲ್ಲ. ಹಾಗಾಗಿ, ಜನರಲ್ಲಿ ಕೋವಿಡ್ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕಿದೆ.
ಮುಖ್ಯವಾಗಿ, ‘ಜ್ವರ, ಶೀತ, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ವೈದ್ಯರು ಸೂಚಿಸಿದರೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಫಲಿತಾಂಶ ಬರುವವರೆಗೂ ಸ್ವಯಂ ಕ್ವಾರಂಟೈನ್‌ನಲ್ಲಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಹಿಸಬೇಕಾದ ಮುಂಜಾಗ್ರತೆ, ಮಾಸ್ಕ್ ಧರಿಸುವುದು, ಪದೇ ಪದೇ ಸಾಬೂನಿನಿಂದ ಕೈತೊಳೆಯುವುದು ಸೇರಿದಂತೆ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಮತ್ತೊಮ್ಮೆ ನೆನಪಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ತೆರೆಯಬೇಕಿದೆ ಕೋವಿಡ್‌ಗೆಂದೇ ಮೀಸಲು ಕೇಂದ್ರ
ಕೋವಿಡ್ ಪ್ರಕರಣಗಳು ಕೇರಳದಲ್ಲಿ ಹೆಚ್ಚುತ್ತಿರುವಂತೆ ಅದಕ್ಕೆ ಹೊಂದಿಕೊಂಡಿರುವ ಕೊಡಗಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಹಿಸಬೇಕಿದೆ. ಮುಖ್ಯವಾಗಿ ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ಗೆಂದೇ ಮೀಸಲಾದ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಬೇಕಿದೆ. ಈಗಂತೂ ಹೊಸ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದರಿಂದ ಹಳೆಯ ಆಸ್ಪತ್ರೆಯಲ್ಲಿ ಅದಕ್ಕೆಂದೇ ಜಾಗ ಸಿಗಲಿದೆ. ಅಥವಾ ಹೊಸ ಕಟ್ಟಡದಲ್ಲಾದರೂ ಕೇಂದ್ರವನ್ನು ತೆರೆಯಬಹುದಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಾಯಬಾರದು. ಕೋವಿಡ್ ಚಿಕಿತ್ಸೆಗೆಂದೇ ಇಂತಿಷ್ಟು ಸಂಖ್ಯೆಯ ವೈದ್ಯರು ನರ್ಸ್‌ಗಳು ಸೇರಿದಂತೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಕನಿಷ್ಠ ಒಂದೇ ಒಂದು ಪ್ರಕರಣ ಕಂಡು ಬಂದರೂ ತ್ವರಿತವಾಗಿ ಅವರಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಿದೆ.
ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಲಿ
2020ರಲ್ಲಿ ಕೋವಿಡ್‌ನಿಂದ ಲಾಕ್‌ಡೌನ್ ಮಾಡಲಾಗಿತ್ತು. ಜನರು ಸಂಕಷ್ಟ ಎದುರಿಸುವಂತಾಯಿತು. ಇದೀಗ ಮತ್ತೊಮ್ಮೆ ಕೋವಿಡ್ ಭೀತಿ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಕೋವಿಡ್ ಹರಡದಂತೆ ಕ್ರಮ ವಹಿಸಬೇಕು.ಎ.ಎಸ್ ಮುಸ್ತಫ, ಸಿದ್ದಾಪುರ, (2020ರ ಕೋವಿಡ್ ಸಂದರ್ಭ ಸೇವೆ ಸಲ್ಲಿಸದವರು)
ಪರೀಕ್ಷೆ ಬೇಕು, ಜನರೂ ಎಚ್ಚರ ಇರಬೇಕು
ಕೋವಿಡ್ ಇಡೀ ಜಗತ್ತಿಗೇ ಮಾರಿಯಾಗಿ ಕಾಡಿತು. ಎಲ್ಲಾ ವ್ಯವಸ್ಥೆಯನ್ನು ಬುಡಮೇಲು ಮಾಡಿತು. ಮತ್ತೆ ಕೋವಿಡ್ ಬರುತ್ತಿದೆ ಎಂಬ ಭಯ ಸೃಷ್ಠಿಸಿದೆ. ಜಿಲ್ಲಾಡಳಿತ ಕೋವಿಡ್ ಪರೀಕ್ಷೆ ಸೇರಿದಂತೆ ಆರೋಗ್ಯ ಸೇವೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಜನರು ಕೂಡ ಎಚ್ಚರಿಕೆ ವಹಿಸಬೇಕು.ಶಮೀರ್, ನೆಲ್ಯಹುದಿಕೇರಿ (2020ರ ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದವರು)
ಯಾವುದೇ ಆತಂಕ ಬೇಡ
ಕೋವಿಡ್ ಕುರಿತು ಯಾವುದೇ ಆತಂಕ ಬೇಡ. ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮುಂಜಾಗ್ರತಾ ವಹಿಸಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲೆಡೆ ಆಕ್ಸಿಜನ್ ಸರಬರಾಜು ಆಗುವ ಹಾಸಿಗೆಗಳು ಲಭ್ಯವಿವೆ. ಹಾಗಾಗಿ, ಸದ್ಯ ಯಾವುದೇ ಆತಂಕ, ಭೀತಿ ಪಡುವ ಅಗತ್ಯ ಇಲ್ಲಡಾ.ಕೆ.ಎಂ.ಸತೀಶ್‌ಕುಮಾರ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಯಾವುದೇ ಸಮಸ್ಯೆ ಇಲ್ಲ
ಕೋವಿಡ್ ಪ್ರಕರಣಗಳು ಒಂದು ವೇಳೆ ಕೊಡಗು ಜಿಲ್ಲೆಯಲ್ಲಿ ಕಂಡು ಬಂದರೂ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಬಗೆಯ ಔಷಧಗಳು ಸೇರಿದಂತೆ ಸಕಲ ವ್ಯವಸ್ಥೆಗಳೂ ಜಿಲ್ಲೆಯಲ್ಲಿವೆ. ಆಕ್ಸಿಜನ್ ಪ್ಲಾಂಟ್‌ಗಳು, ಆಕ್ಸಿಜನ್ ಜನರೇಟರ್‌ಗಳು ಸೇರಿದಂತೆ ಎಲ್ಲ ಬಗೆಯ ಸಾಧನ ಸಲಕರಣೆಗಳಿವೆ. ಜನರು ಆತಂಕಪಡುವ ಅಗತ್ಯ ಇಲ್ಲ.ಡಾ.ಲೋಕೇಶ್‌ಕುಮಾರ್, ಡೀನ್ ಮತ್ತು ನಿರ್ದೇಶಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.
ಕೋವಿಡ್ ಪರೀಕ್ಷೆ ಜಿಲ್ಲೆಯಲ್ಲಿಲ್ಲ!
ಈಗ ಕೋವಿಡ್ ಪರೀಕ್ಷೆ ಜಿಲ್ಲೆಯಲ್ಲಿ ಇಲ್ಲ. ಶಂಕಿತ ರೋಗಿಗಳ ಮೂಗು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆರ್‌ಟಿಪಿಸಿಆರ್ ಲ್ಯಾಬ್‌ಗೆ ಕಳುಹಿಸಿಕೊಡಬೇಕಿದೆ. ಈ ಕೇಂದ್ರವನ್ನು ಕೊಡಗು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರಯೋಗಾಲಯವನ್ನಾಗಿ ರಾಜ್ಯ ಸರ್ಕಾರ ಗುರುತಿಸಿ ಮೇ 23ರಂದು ಆದೇಶ ಹೊರಡಿಸಿದೆ. ಇದೇ ರೀತಿ ರಾಜ್ಯದಲ್ಲಿ ಒಟ್ಟು 10 ಪ್ರಯೋಗಾಲಯವನ್ನು ಕೋವಿಡ್ ಪರೀಕ್ಷೆಗಾಗಿಯೇ ನಿಗದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.