ADVERTISEMENT

ಮಡಿಕೇರಿ ದಸರೆಗೆ ದಶಮಂಟಪ ಸಿದ್ಧ | ₹1.76 ಕೋಟಿ ವೆಚ್ಚದಲ್ಲಿ ಮಂಟಪಗಳ ನಿರ್ಮಾಣ

ಕೆ.ಎಸ್.ಗಿರೀಶ್
Published 5 ಅಕ್ಟೋಬರ್ 2022, 8:35 IST
Last Updated 5 ಅಕ್ಟೋಬರ್ 2022, 8:35 IST
ಮಡಿಕೇರಿಯಲ್ಲಿ ವಿಜಯದಶಮಿಯ ರಾತ್ರಿ ನಡೆಯಲಿರುವ ದಸರಾ ದಶಮಂಟಪೋತ್ಸವಕ್ಕಾಗಿ ಮಂಟಪಗಳ ಸಿದ್ಧತಾ ಕಾರ್ಯ ಬಿರುಸಿನಿಂದ ನಡೆದಿದೆ
ಮಡಿಕೇರಿಯಲ್ಲಿ ವಿಜಯದಶಮಿಯ ರಾತ್ರಿ ನಡೆಯಲಿರುವ ದಸರಾ ದಶಮಂಟಪೋತ್ಸವಕ್ಕಾಗಿ ಮಂಟಪಗಳ ಸಿದ್ಧತಾ ಕಾರ್ಯ ಬಿರುಸಿನಿಂದ ನಡೆದಿದೆ   

ಮಡಿಕೇರಿ:‌ ಸತತ ನಾಲ್ಕು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯ ಮಡಿಕೇರಿ ದಸರೆಗೆ ಸಕಲ ಸಿದ್ಧತೆಗಳು ನಡೆದಿವೆ.

2018 ಮತ್ತು 2019ರಲ್ಲಿ ಸಂಭವಿಸಿದ್ದ ಮಹಾಮಳೆ, ಭೂಕುಸಿತಗಳ ನಂತರ 2020 ಹಾಗೂ 2021ರಲ್ಲಿ ವ್ಯಾಪಿಸಿದ್ದ ಕೋವಿಡ್‌ನಿಂದ ಉತ್ಸವವು ರಂಗನ್ನು ಕಳೆದುಕೊಂಡಿತ್ತು.ಈ ಬಾರಿ ಸಂಭ್ರಮ ಮೇರೆ ಮೀರಿದೆ.

ಅ.5ರಂದು ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆ ಹಿಂದೆಂದಿಗಿಂತಲೂ ಹೆಚ್ಚು ಅದ್ದೂರಿಯಾಗಿ ನಡೆಯಲಿದೆ. ಒಟ್ಟು ₹ 1.76 ಕೋಟಿ ವೆಚ್ಚದಲ್ಲಿ 10 ದೇವಸ್ಥಾನ ಸಮಿತಿಗಳ ಮಂಟಪಗಳು ಸಿದ್ಧವಾಗುತ್ತಿವೆ. ರಾತ್ರಿ 10 ಗಂಟೆಯಿಂದ ಆರಂಭವಾಗುವ ಪ್ರದರ್ಶನ ಮರುದಿನ ನಸುಕಿನ 4 ಗಂಟೆಯವರೆಗೂ ಇರಲಿದೆ. ಮೆರವಣಿಗೆ ಬೆಳಿಗ್ಗೆಯವರೆಗೂ ನಡೆಯಲಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.

ADVERTISEMENT

ಆಕರ್ಷಕ ಮಂಟಪಗಳಿಗೆ ಮಡಿಕೇರಿ ದಸರಾ ನಗರ ಸಮಿತಿಯು ಬಹುಮಾನವನ್ನೂ ನೀಡಲಿದ್ದು, ಅದಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಧ್ವನಿವರ್ಧಕಗಳು, ಮಂಟಪಗಳ ಸಿಂಗಾರ, ಫೈರ್‌ ವರ್ಕ್ಸ್‌ ಸೇರಿದಂತೆ ಮಂಟಪಗಳ ಸಿದ್ಧತೆಗಾಗಿ ತಮಿಳುನಾಡು, ಗುಜರಾತ್ ಹಾಗೂ ಗೋವಾದಿಂದ ಪರಿಣತರನ್ನು ಕರೆಸಲಾಗಿದೆ. ಪ್ರತಿ ಸಮಿತಿಯೂ ಹೆಚ್ಚು ಆಕರ್ಷಕವಾದ ಮಂಟಪ ತಯಾರಿಸಲು ಡಿಜಿಟಲ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನೂ ಬಳಸುತ್ತಿವೆ.

ರಸ್ತೆ ಗುಂಡಿಗಳದ್ದೇ ಭಯ

ಮಡಿಕೇರಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ದುರಸ್ತಿಗೆ ಟೆಂಡರ್ ಕರೆದಿದ್ದರೂ ಬಿಡುವು ನೀಡದ ಮಳೆಯಿಂದಾಗಿ ಕಾಮಗಾರಿ ಆರಂಭವಾಗಿಲ್ಲ. ಮಂಟಪಗಳು ಸಂಚರಿಸುವ ಮಾರ್ಗದಲ್ಲೂ ಹೊಂಡಗಳಿದ್ದು, ತಾತ್ಕಾಲಿಕವಾಗಿ ಮಣ್ಣು ಹಾಕಿ ತೇಪೆ ಹಾಕಲಾಗುತ್ತಿದೆ. ಮಳೆ ಬಂದರೆ ಇದೂ ಕೊಚ್ಚಿ ಹೋಗುವ ಸಾಧ್ಯತೆ ಇದ್ದು, ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.