ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಳೆ ಬಿರುಸು ತಗ್ಗಿದ್ದು ಕಾವೇರಿ ನದಿ ಪ್ರವಾಹ ಇಳಿಮುಖಗೊಂಡಿದೆ.
ಸಮೀಪದ ಕೊಟ್ಟಮುಡಿಯಲ್ಲಿ ಶುಕ್ರವಾರ ರಸ್ತೆ ಮೇಲೆ ನೀರು ಹರಿಯುತ್ತಿದ್ದು ನಾಪೋಕ್ಲು-ಮಡಿಕೇರಿ ನಡುವಿನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿತ್ತು. ಮಳೆ ಇಳಿಮುಖಗೊಂಡಿದ್ದರಿಂದ ಪ್ರವಾಹ ತಗ್ಗಿದೆ.
ನಾಪೋಕ್ಲು- ಮೂರ್ನಾಡು, ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಪ್ರವಾಹ ನಿಧಾನವಾಗಿ ಕಡಿಮೆಯಾಗಿದೆ. ನಾಪೋಕ್ಲು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನದಿ, ತೊರೆ, ಗದ್ದೆ, ತೋಟಗಳು ಜಲಾವೃತವಾಗಿವೆ. ಕೆಲವು ಭಾಗಗಳಲ್ಲಿ ರಸ್ತೆ ಮೇಲೆ ಪ್ರವಾಹದ ಮಾದರಿಯಲ್ಲಿ ನೀರು ಹರಿಯುತ್ತಿದೆ. ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪರ್ಯಾಯ ಸಂಪರ್ಕ ರಸ್ತೆಯನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ.
ಎಮ್ಮೆಮಾಡು ಗ್ರಾಮದಲ್ಲಿ ಕಾವೇರಿ ನದಿ ಪ್ರವಾಹದಿಂದ ನೂರಾರು ಎಕರೆ ಭತ್ತದ ಗದ್ದೆಯಲ್ಲಿ ನೀರು ತುಂಬಿದ್ದು, ನಾಟಿ ಮಾಡಲು ಮುಂದಾಗಿದ್ದ ರೈತರ ಪೈರುಗಳು ನಾಶವಾಗುವ ಆತಂಕ ಎದುರಾಗಿದೆ.
ಐನ್ ಮನೆ ಗೋಡೆ ಕುಸಿತ: ಬೆಟ್ಟಗೇರಿ ಗ್ರಾಮ ಪಂಚಾಯತಿ ಪಕ್ಕದ ಕಡ್ಲೇರ ಕುಟುಂಬದ ಐನ್ ಮನೆ ಮಾಳಿಗೆ ಹಾಗೂ ಗೋಡೆಗಳು ಬಿದ್ದು ನಷ್ಟ ಸಂಭವಿಸಿದೆ. ಬೆಟ್ಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ, ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಉದಯ, ಪಂಚಾಯತಿ ಸದಸ್ಯ ಅಯ್ಯೆಗಡ ಮುತ್ತಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಟ್ಟಣದ ಸುತ್ತಮುತ್ತ ಅಲ್ಲಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಕಾರಣ ನೆಲಜಿ, ಬಲ್ಲಮಾವಟ್ಟಿ, ಎಮ್ಮೆಮಾಡು, ಕಕ್ಕಬೆ ಸೇರಿ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೆಸ್ಕ್ ಸಿಬ್ಬಂದಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸುತ್ತಿದ್ದಾರೆ. ತುಂಬಿ ಹರಿಯುತ್ತಿರುವ ಕಾವೇರಿ ನದಿಯಿಂದಾಗಿ ನದಿ ಪಾತ್ರದ ಗದ್ದೆ ತೋಟಗಳು ನೀರಿನಲ್ಲಿ ಮುಳುಗಡೆಯಾಗಿದೆ.
ಸಮೀಪದ ಪಾಲೂರು ಹರಿಶ್ಚಂದ್ರ ದೇವಾಲಯ ಕಾವೇರಿ ನದಿ ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡು ದ್ವೀಪವಾಗಿದೆ. ಕಳೆದ ಹಲವು ದಿನಗಳಿಂದ ಕಾವೇರಿ ಪ್ರವಾಹ ದೇವಾಲಯದ ಸುತ್ತಲೂ ಆವರಿಸಿಕೊಂಡಿದ್ದು ಸಂಪರ್ಕ ಇಲ್ಲವಾಗಿದೆ.
ಗಾಳಿ-ಮಳೆಯಿಂದಾಗಿ ಹಲವೆಡೆ ಮರಗಳು ಬಿದ್ದು ನಷ್ಟ ಸಂಭವಿಸಿದೆ. ಶುಕ್ರವಾರ ಮಕ್ಕಿ ಶಾಸ್ತಾವು ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಮರವೊಂದು ಮುರಿದುಬಿದ್ದಿದ್ದು ಬಳಿಕ ತೆರವುಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.