ADVERTISEMENT

ದೀಪಾ ಭಾಸ್ತಿ ಅವರದ್ದು ಭಿನ್ನವಾದ ಅನುವಾದ: ಅನುವಾದಕಿ ಜ.ನಾ.ತೇಜಶ್ರೀ

ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:42 IST
Last Updated 9 ಜೂನ್ 2025, 14:42 IST
<div class="paragraphs"><p>ಬೂಕರ್ ಪ್ರಶಸ್ತಿ ಪಡೆದ ಅನುವಾದಕಿ ದೀಪಾ ಭಾಸ್ತಿ ಅವರನ್ನು ಮಡಿಕೇರಿಯ ರೆಡ್‌ಬ್ರಿಕ್ಸ್ ಹೋಟೆಲ್‌ನ ಸತ್ಕಾರ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ, ಮಡಿಕೇರಿ ತಾಲ್ಲೂಕು ಘಟಕ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಅಭಿನಂದಿಸಲಾಯಿತು.</p></div>

ಬೂಕರ್ ಪ್ರಶಸ್ತಿ ಪಡೆದ ಅನುವಾದಕಿ ದೀಪಾ ಭಾಸ್ತಿ ಅವರನ್ನು ಮಡಿಕೇರಿಯ ರೆಡ್‌ಬ್ರಿಕ್ಸ್ ಹೋಟೆಲ್‌ನ ಸತ್ಕಾರ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ, ಮಡಿಕೇರಿ ತಾಲ್ಲೂಕು ಘಟಕ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಅಭಿನಂದಿಸಲಾಯಿತು.

   

ಮಡಿಕೇರಿ: ದೀಪಾ ಭಾಸ್ತಿ ಅವರಿಗೆ ಬೂಕರ್‌ ಪ್ರಶಸ್ತಿ ಬಂದುದು ಅನುವಾದದ ಸೃಜನಶೀಲ ಆಲೋಚನಾ ಕ್ರಮಕ್ಕೆ ಸಂದ ಗೌರವ ಎಂದು ಅನುವಾದಕಿ ಹಾಗೂ ಲೇಖಕಿ ಜ.ನಾ.ತೇಜಶ್ರೀ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ, ಮಡಿಕೇರಿ ತಾಲ್ಲೂಕು ಘಟಕ ಮತ್ತು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಇಲ್ಲಿ ಸೋಮವಾರ ನಡೆದ ದೀಪಾ ಭಾಸ್ತಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ದೀಪಾ ಭಾಸ್ತಿ ಅವರದ್ದು ಭಿನ್ನವಾದ ಅನುವಾದವಾಗಿದೆ. ಅದು ಅನುವಾದ ಕ್ಷೇತ್ರದಲ್ಲಿ ನಿಜವಾದ ಬಂಡಾಯ ಎಂದು ಅವರು ವ್ಯಾಖ್ಯಾನಿಸಿದರು.

‘ಕನ್ನಡೀಕೃತ ಇಂಗ್ಲಿಷ್‌ನ್ನು ಬಳಕೆ ಮಾಡುವ ಮೂಲಕ ಅವರು ಸಾಂಪ್ರದಾಯಿಕ ಅನುವಾದವನ್ನು ಬಿಟ್ಟು ಭಿನ್ನವಾದ ಹಾದಿ ತುಳಿದರು. ಕನ್ನಡ, ಉರ್ದು, ಅರೇಬಿಕ್, ಸಂಸ್ಕೃತ ಮೊದಲಾದ ಭಾಷೆಯ ಹಲವು ಪದಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸದೇ ಹಾಗೆಯೇ ಉಳಿಸಿಕೊಂಡರು. ಇದರಿಂದ ಕನ್ನಡದ ಸ್ವಾದ ಇಂಗ್ಲಿಷ್‌ ಓದುಗರಿಗೆ ದಕ್ಕುವಂತಾಯಿತು’ ಎಂದರು.

‘ಇದಕ್ಕೂ ಮುಖ್ಯವಾಗಿ, ಅವರು ಹೀಗೇ ತಮ್ಮ ಕೃತಿಯಲ್ಲಿ ತಂದ ಕನ್ನಡ ಶಬ್ದಗಳನ್ನು ‘ಇಟಾಲಿಕ್ಸ್‌’ ಮಾಡಿ ಅಡಿ ಟಿಪ್ಪಣಿ ನೀಡಲಿಲ್ಲ. ಈ ಮೂಲಕ ಅವರು ಹೊಸದೊಂದು ಇಂಗ್ಲಿಷ್ ಕಟ್ಟುವಂತಹ ಹೊಸ ಬಗೆಯ ಪ್ರಯೋಗವೊಂದನ್ನು ಮಾಡಿದರು. ಮಾತ್ರವಲ್ಲ, ಈ ಪ್ರಯೋಗದಲ್ಲಿ ಅವರು ಯಶಸ್ಸನ್ನೂ ಕಂಡರು. ಇದು ಒಂದು ರೀತಿಯಲ್ಲಿ ಗಾಂಧಿ ಮಾರ್ಗ’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುವಾದಕಿ ದೀಪಾ ಭಾಸ್ತಿ, ‘ನಾನು ಚಿಕ್ಕಂದಿನಲ್ಲಿ ಓದಿದ ಇಂಗ್ಲಿಷ್‌ ಕಾಮಿಕ್ಸ್‌ನಲ್ಲಿ ಪಿಜ್ಜಾ, ಬರ್ಗರ್ ಎಂಬ ಶಬ್ದಗಳು ಬರುತ್ತಿತ್ತು. ಆಗ ನಮ್ಮಲ್ಲಿ ಈ ಬಗೆಯ ತಿನಿಸುಗಳಿರಲಿಲ್ಲ. ಹಾಗೆಂದು, ಆ ಪದಗಳಿಗೆ ಅವರು ವಿವರಣೆ ನೀಡಿರಲಿಲ್ಲ. ಇದು ನನ್ನ ಮನಸ್ಸಿನಲ್ಲಿತ್ತು. ಈಗ ನಾನು ಸಹ ಕನ್ನಡ ಪದಗಳನ್ನು ಹಾಗೆಯೇ ಇಂಗ್ಲಿಷ್‌ಗೆ ತಂದು, ಅದಕ್ಕೆ ಅರ್ಥ ನೀಡಲಿಲ್ಲ. ಇದರಿಂದ ಒಂದು ರೀತಿಯಲ್ಲಿ ವಸಾಹತುಷಾಹಿ ಭಾಷೆಯಾದ ಇಂಗ್ಲಿಷ್‌ನ ಶ್ರೇಷ್ಠತೆಯನ್ನು ಮುರಿದಂತಾಯಿತು’ ಎಂದು ಹೇಳಿದರು.

ಈ ಅನುವಾದದಿಂದ ಕನ್ನಡ ಮಹತ್ವ ಹೆಚ್ಚಿದೆ ಎನ್ನುವುದಕ್ಕಿಂತಲೂ ಕನ್ನಡದ ಅನೇಕ ಪದಗಳು ಇಂಗ್ಲಿಷ್‌ಗೆ ಹೋಗಿ ಆ ಭಾಷೆಗೆ ಹೆಚ್ಚು ಪ್ರಯೋಜನವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.