ಕುಶಾಲನಗರ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದ ಬಳಿ ಸುಂದರ ಹಸಿರು ವನಗಳ ಸುತ್ತ ಭೋರ್ಗರೆಯುತ್ತ ಹರಿಯುವ ಕಾವೇರಿ ನದಿಯಲ್ಲಿ ಆರಂಭಗೊಂಡಿರುವ ಸಾಹಸ ಜಲಕ್ರೀಡೆ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆ ಎನಿಸಿದೆ.
ವೀರ ಸೇನಾನಿಗಳ ಬೀಡಾದ ಕೊಡಗು ಜಿಲ್ಲೆ ಸಾಹಸಮಯ ಜಲಕ್ರೀಡೆಗೂ ಪ್ರಸಿದ್ಧಿ ಪಡೆದಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಲ್ಲಿ ನಡೆಯುವ ಅಪರೂಪ ಎನಿಸುವಂತಹ ಸಾಹಸ ಜಲಕ್ರೀಡೆಯು ಇಲ್ಲಿನ ವಿಶೇಷವಾಗಿದೆ.
ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ನೀರಿನ ಹರಿವು ಹೆಚ್ಚಿದ್ದು, ರ‍್ಯಾಫ್ಟಿಂಗ್ ಮಾಡುವ ಪ್ರವಾಸಿಗರಿಗೆ ಇದು ಮತ್ತಷ್ಟು ಹೊಸ ಅನುಭವ ನೀಡುತ್ತಿದೆ. ಒಂದು ರ‍್ಯಾಫ್ಟಿಂಗ್‌ನಲ್ಲಿ ಏಳರಿಂದ ಎಂಟು ಜನರು ಏಕಕಾಲದಲ್ಲಿ ಹೋಗಬಹುದು.
ದೂರದಿಂದ ನದಿಯ ಅಲೆಗಳನ್ನು ಸೀಳುತ್ತಾ ಮೇಲೇಳುತ್ತಾ, ಜಿಗಿಯುತ್ತಾ ಸಾಗುವುದನ್ನು ನೋಡುವುದೆ ಕಣ್ಣಿಗೊಂದು ಹಬ್ಬ. ನದಿ ಹರಿಯುತ್ತಿರುವಾಗ ಅದರಲ್ಲಿ ರ‍್ಯಾಫ್ಟಿಂಗ್ ಮಾಡುವ ಅನುಭವವೇ ಬೇರೆ. ಅದರಲ್ಲೂ ಹೆಚ್ಚಿನ ಮಳೆಯಾದ ಇಂತಹ ಸಂದರ್ಭದಲ್ಲಿ ಜಲಸಾಹಸಗಳಲ್ಲಿ ಭಾಗವಹಿಸಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸಾಹಸ ಜಲಕ್ರೀಡೆಗೆ ಜೀವಕಳೆ ಬಂದಂತೆ ಆಗಿದೆ. ಇದು ಜಿಲ್ಲೆಯ ಮಳೆಗಾಲದ ಪ್ರವಾಸೋದ್ಯಮದ ವಿಶೇಷವಾಗಿದೆ.
ಇಲ್ಲಿನ ದುಬಾರೆ ಬಳಿ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಕಳೆದ ಕೆಲವು ದಿನಗಳಿಂದ ಜಲಕ್ರೀಡೆ ಆರಂಭಗೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕುಶಾಲನಗರದಿಂದ 15 ಕಿ.ಮೀ ದೂರದಲ್ಲಿರುವ ನಂಜರಾಯಪಟ್ಟಣ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಅರಣ್ಯದ ಸಾಕಾನೆ ಶಿಬಿರದ ಬಳಿ ಕಾವೇರಿ ನದಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸಲಾಗುತ್ತಿದೆ.
ಸಾಹಸಮಯ ಜಲಕ್ರೀಡೆಯಲ್ಲಿ ಜಿಲ್ಲೆಯವರಲ್ಲದೆ ಬೆಂಗಳೂರು, ಚೆನ್ನೈ, ಕೇರಳ, ತಮಿಳುನಾಡು, ಮುಂಬೈ ಮುಂತಾದ ದೂರದ ಸ್ಥಳಗಳಿಂದ ಕೂಡ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಲಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ದುಬಾರೆ ಸಾಕಾನೆ ಶಿಬಿರದ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಬಳಿ ಸುಂದರ ಹಸಿರು ವನಗಳ ಸುತ್ತ ಭೋರ್ಗರೆಯುತ್ತ ಹರಿಯುವ ಕಾವೇರಿ ನದಿಯಲ್ಲಿ ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಸಾಹಸಮಯ ರಿವರ್ ರ‍್ಯಾಫ್ಟಿಂಗ್ ಸಾಹಸಿಗರ ಪ್ರಮುಖ ಆಕರ್ಷಣೆ ಆಗಿದೆ.
ಇಲ್ಲಿನ ಆನೆ ಶಿಬಿರದಿಂದ ಆರಂಭವಾಗುವ ರ‍್ಯಾಫ್ಟಿಂಗ್ ಹೊಸಪಟ್ಟಣ, ತೆಪ್ಪದಕಂಡಿ ಬಳಿ ಮುಕ್ತಾಯಗೊಳ್ಳುತ್ತದೆ. ಇದರಲ್ಲಿ ಪಾಲ್ಗೊಳ್ಳುವವವರಿಗೆ ಮೊದಲು ಜೀವರಕ್ಷಕ ಜಾಕೆಟ್ ಹಾಗೂ ಹೆಲೈಟ್‌ಗಳನ್ನು ನೀಡಲಾಗುತ್ತದೆ.
ನುರಿತ ಗೈಡ್‌ಗಳು ರ‍್ಯಾಫ್ಟಿಂಗ್ ಮುನ್ನಡೆಸುವುದರಿಂದ ಯಾವುದೇ ಅಪಾಯವಿಲ್ಲ. ಆರಂಭಕ್ಕೂ ಮುನ್ನ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ನದಿಯ ಮಧ್ಯೆ ರ‍್ಯಾಫ್ಟಿಂಗ್ ಸಾಗುವಾಗ ಗೈಡ್ಸ್‌ಗಳು ಪ್ರವಾಸಿಗರನ್ನು ನದಿಯಲ್ಲಿ ಧುಮುಕಿಸಿ ಮತ್ತೆ ಅವರನ್ನು ರ‍್ಯಾಫ್ಟಿಂಗ್ ಹತ್ತಿಸಿಕೊಳ್ಳುತ್ತಾರೆ. ಇದು ಪ್ರವಾಸಿಗರಿಗೆ ಭಯವನ್ನು ಹೋಗಿಸುವುದರ ಜೊತೆಗೆ ಹೊಸ ಅನುಭವವನ್ನು ನೀಡುತ್ತಿದೆ.
ಪ್ರವಾಸಿಗರಿಗೆ ಮೊದಲು ಜೀವರಕ್ಷಕ ಜಾಕೆಟ್ ಹೆಲ್ಮೆಟ್‌ಗಳನ್ನು ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ನುರಿತ ಗೈಡ್‌ಗಳು ರ‍್ಯಾಫ್ಟಿಂಗ್ ಮುನ್ನಡೆಸುವುದರಿಂದ ಯಾವುದೇ ಅಪಾಯವಿಲ್ಲರಾಜೇಶ್ ಗೈಡ್ಸ್ ದುಬಾರೆ ರಿವರ್ ರ‍್ಯಾಫ್ಟಿಂಗ್.
ರಿವರ್ ರ‍್ಯಾಫ್ಟಿಂಗ್‌ನಲ್ಲಿ ಭಾಗವಹಿಸಿದ್ದು ತುಂಬ ಖುಷಿಯಾಯಿತು. ಇದೇ ಮೊದಲು ಹೊಸ ಅನುಭವ ನೀಡಿತು. ಮೊದಲು ಸ್ವಲ್ಪ ಭಯವಾಯಿತು. ಆದರೆ ಗೈಡ್ಸ್‌ಗಳು ಧೈರ್ಯ ತುಂಬಿದರುಅಂಜನಾ ಪ್ರವಾಸಿ ಚೆನ್ನೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.