ADVERTISEMENT

ಕಾಡಾನೆ ಹಾವಳಿ: ರೈತರ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:26 IST
Last Updated 25 ಫೆಬ್ರುವರಿ 2021, 13:26 IST
ಪಾಲಂಗಾಲ ಗ್ರಾಮದಲ್ಲಿ ಕಾಡಾನೆಗಳು ಕಾಫಿ ಫಸಲನ್ನು ಧ್ವಂಸಮಾಡಿವೆ
ಪಾಲಂಗಾಲ ಗ್ರಾಮದಲ್ಲಿ ಕಾಡಾನೆಗಳು ಕಾಫಿ ಫಸಲನ್ನು ಧ್ವಂಸಮಾಡಿವೆ   

ನಾಪೋಕ್ಲು: ಕಾಡಾನೆ ಹಾವಳಿ ತಡೆಗಟ್ಟಲು ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಪಾಲಂಗಾಲ ಗ್ರಾಮಸ್ಥರು ಬುಧವಾರ ವಿರಾಜಪೇಟೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು

ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಮಾತನಾಡಿ, ಪಾಲಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕೃಷಿ ಭೂಮಿ ಹಾಗೂ ಉತ್ಪನ್ನಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಅರಣ್ಯಾಧಿಕಾರಿಗೆ ಮನವಿ ಮಾಡಿದರೂ, ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿದರು.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ. ಇಳುವರಿಗೂ ಸಂಚಕಾರ ತಂದೊಡ್ಡುತ್ತಿವೆ. ಕೊಯ್ಲು ಮಾಡಿದ ಕಾಫಿಯನ್ನು ಮನೆಯಂಗಳದಲ್ಲಿ, ಕಣದಲ್ಲಿ ಒಣಗಲು ಹಾಕಿದರೆ ಅವುಗಳನ್ನೂ ಕಾಡಾನೆಗಳು ಚೆಲ್ಲಾಡುತ್ತಿವೆ. ಹತ್ತಾರು ಸಮಸ್ಯೆಗಳ ನಡುವೆ ಬೆಳೆದ ಫಸಲು ಕೈ ಸೇರುತ್ತಿಲ್ಲ ಎಂದು ಅವರು ಹೇಳಿದರು.

ADVERTISEMENT

ರೈತರು ಬ್ಯಾಂಕಿನಲ್ಲಿ ಸಾಲ ಪಡೆದು ಬೆಳೆದ ಕಾಫಿ, ಭತ್ತ, ಮಿಶ್ರ ಬೆಳೆಗಳಾದ ಬಾಳೆ, ಅಡಿಕೆ, ತೆಂಗು, ಏಲಕ್ಕಿ ಕೃಷಿಯ ಫಸಲು ರೈತರಿಗೆ ಲಭಿಸದಂತಾಗಿದೆ. ರೈತರು ಸಾಲ ಮರುಪಾವತಿಗೊಳಿಸಲು ಸಾಧ್ಯವಾಗದೆ ಜೀವನೋಪಾಯಕ್ಕೆ ವರಮಾನವೂ ಇಲ್ಲದ ಆತಂಕದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ಶಿಬಿರ ಹೂಡಲಿ: ರೈತರ ಎಲ್ಲಾ ಸಮಸ್ಯೆಗಳನ್ನು ಮನಃಗಂಡು ಗ್ರಾಮದ ಬೆಳೆಗಾರರ ಕಾಫಿ ಕೊಯ್ಲು ಹಾಗೂ ಕೃಷಿ ನೀರಾವರಿ ಕೆಲಸ ಮುಗಿಯುವವರೆಗೆ ಪಾಲಂಗಾಲ ಗ್ರಾಮದಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಶಾಶ್ವತವಾಗಿ ಶಿಬಿರ ಹೂಡುಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಬಾದುಮಂಡ ಮಹೇಶ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷೆ ಕರಿನೆರವಂಡ ದೀಪಾ ಮುತ್ತಮ್ಮ, ಕೆದಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ, ಕರಿನೆರವಂಡ ಜಿತನ್, ರೈತ ಮುಖಂಡರಾದ ಕರಿನೆರವಂಡ ಭೀಮಯ್ಯ, ಅರುಣ್ ಕಾರ್ಯಪ್ಪ, ಮಂಜು, ಸುಗುಣ, ಬಿಪಿನ್, ಜಗನ್ ಜೋಯಪ್ಪ, ರಚನ್, ಮೇಚುರ ಅಶೋಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.