
ವಿರಾಜಪೇಟೆ: ಸಮೀಪದ ಕರಡ ಗ್ರಾಮದಲ್ಲಿ ಭಾನುವಾರ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಕಾರು ಜಖಂ ಗೊಂಡಿದೆ.
ಕಾರಿನಲ್ಲಿದ್ದ ಪಾರಂಗಾಲ ಗ್ರಾಮದ ಎಂ.ಅಶೋಕ ಅವರ ಕುಟುಂಬ ಅಪಾಯದಿಂದ ಪಾರಾಗಿದೆ. ಇಬ್ಬರು ಮಹಿಳೆಯರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ.
ಕುಟುಂಬವು ಕರಡ ಗ್ರಾಮದ ಮಲೆತಿರಿಕೆ ಬೆಟ್ಟದಲ್ಲಿನ ದೇವಾಲಯಕ್ಕೆ ಪ್ರಯಾಣಿಸುತ್ತಿತ್ತು. ಬೆಟ್ಟದ ತಪ್ಪಲಿನ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಅಪಾಯದಿಂದ ತಪ್ಪಿಸಿಕೊಂಡರು. ಈ ಮಧ್ಯೆ ಆನೆಯು ದಂತದಿಂದ ಕಾರನ್ನು ಜಖಂಗೊಳಿಸಿತು. ದಾರಿಯಲ್ಲಿ ಸಾಗುತ್ತಿದ್ದ ನಾಗರಿಕರು ಕೂಗಿಕೊಂಡ ಪರಿಣಾಮ ಹೆಚ್ಚಿನ ಹಾನಿ ತಪ್ಪಿತು.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕೆ.ಎಂ.ದೇವಯ್ಯ ಹಾಗೂ ಸಿಬ್ಬಂದಿ ಆಗಮಿಸಿ ಘಟನೆಯ ಕುರಿತುಮಾಹಿತಿ ಪಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.