ADVERTISEMENT

ಸೋಮವಾರಪೇಟೆ: ಕಂದಕ, ಬೇಲಿ ದಾಟುವ ಕಾಡಾನೆಗಳು

ಸೋಮವಾರಪೇಟೆ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ, ರೈತರಿಗೆ ಸವಾಲಾದ ಗಜಪಡೆ

ಡಿ.ಪಿ.ಲೋಕೇಶ್
Published 23 ನವೆಂಬರ್ 2022, 23:30 IST
Last Updated 23 ನವೆಂಬರ್ 2022, 23:30 IST
ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ಬದಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕಂಬಿಗಳನ್ನು ಸಂಗ್ರಹಿಸಿಟ್ಟಿರುವುದು.
ಸೋಮವಾರಪೇಟೆ ಸಮೀಪದ ಕಾಜೂರು ಮೀಸಲು ಅರಣ್ಯದ ಬದಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕಂಬಿಗಳನ್ನು ಸಂಗ್ರಹಿಸಿಟ್ಟಿರುವುದು.   

ಸೋಮವಾರಪೇಟೆ: ವನ್ಯಜೀವಿ ಮಾನವ ಸಂಘರ್ಷ ಹಲವು ವರ್ಷ ಗಳಿಂದ ತಾಲ್ಲೂಕಿನಲ್ಲಿ ಮುಂದು ವರಿದಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಲವೆಡೆ ಕಾಡುಪ್ರಾಣಿಗಳ ಪಾಲಾಗುತ್ತಿದೆ.

ಯಡವನಾಡು, ನಿಡ್ತ, ಜೇನುಕಲ್ಲು ಬೆಟ್ಟ ಮೀಸಲು ಅರಣ್ಯಗಳಿಂದ ಆಹಾರ ಅರಸಿ ಜಮೀನುಗಳಿಗೆ ದಾಳಿ ಇಡುತ್ತಿರುವ ಆನೆಗಳ ಹಿಂಡು, ಬೆಳೆಗಳನ್ನು ತಿನ್ನುತ್ತಿವೆ. ತನ್ನ ಮರಿಗ ಳೊಂದಿಗೆ ಆಟವಾಡಿದ ಸ್ಥಳದಲ್ಲಿ ಗಿಡಗಳೂ ಉಳಿಯುತ್ತಿಲ್ಲ.

ತಾಲ್ಲೂಕಿನ ಸುಂಠಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಮಂಕ್ಯಾ, ಕಿಕ್ಕರಳ್ಳಿ, ಮೂವತ್ತೊಕ್ಕು, ಕುಂಬಾರಗಡಿಗೆ, ಗರ್ವಾಲೆ ಮತ್ತು ಶಾಂತಳ್ಳಿ ಹೋಬಳಿಯ ಕೊತ್ನಳ್ಳಿ, ನಾಡ್ನಳ್ಳಿ, ಬೆಂಕಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ, ಕುಂದಳ್ಳಿ, ಹರಗ, ಯಡೂರು, ಕೂತಿ, ಇನ್ನಿತರ ಗ್ರಾಮಗಳಲ್ಲಿ ಭತ್ತದ ಗದ್ದೆಗೆ ಬಿಸ್ಲೆ ಮೀಸಲು ಅರಣ್ಯ ಪ್ರದೇಶ ದಿಂದ ಕಾಡಾನೆಗಳು ನಿಗದಿತ ಸಮಯ ದಲ್ಲಿ ಬಂದು ಬೆಳೆ ಹಾನಿ ಮಾಡುತ್ತಿವೆ.

ADVERTISEMENT

ಸೋಮವಾರಪೇಟೆ ವಲಯಕ್ಕೆ ಸೇರಿದಂತೆ ನಿಡ್ತ, ಜೇನುಕಲ್ಲುಬೆಟ್ಟ, ಯಡವನಾಡು ಮೀಸಲು ಅರಣ್ಯ 5,300 ಹೆಕ್ಟೇರ್ ಇದೆ. ಜೋಳ ಕಟಾವಿಗೆ ಬರುವ ಸಂದರ್ಭದಲ್ಲಿ ಹೆಬ್ಬಾಲೆ, ಚಿನ್ನೆನಹಳ್ಳಿ, ಮದಲಾಪುರ, ಹೊಸಳ್ಳಿ, ಬಾಣವಾರ, ಸಿದ್ದಲಿಂಗಪುರ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮವಾಸ್ತವ್ಯ ಮಾಡುತ್ತವೆ. ಭತ್ತ ಬೆಳೆ ಕೊಯ್ಲಿಗೆ ಬಂದಂತೆ ವಲಸೆ ಹೊರಟ ಕಾಡಾನೆಗಳು ಐಗೂರು, ಕಾರೇಕೊಪ್ಪ, ಯಡವಾರೆ, ಹಿತ್ಲುಗದ್ದೆ, ಮಾಲಂಬಿ, ಕೂಗೂರು, ಚಿಕ್ಕಾರ, ಹಿರಿಕರ, ದೊಡ್ಡಮಳ್ಳೆ, ಅರೆಯೂರು, ಮುಂತಾದ ಗ್ರಾಮಗಳ ಕಡೆ ಹಾವಳಿ ಮಾಡುತ್ತಿವೆ.

ಗದ್ದೆ ಭೂಮಿ, ಬೆಳೆ, ಬಾಳೆ ತೋಟಗಳು, ಕುಡಿಯಲು ನೀರು ಸಿಗುವ ಕೆರೆಗಳು ಹಾಗೂ ಮಾರ್ಗದ ಮಾಹಿತಿ ಇರುವ ಕಾಡಾನೆಗಳು ಆತಂಕವಿಲ್ಲದೆ ದಾಳಿ ಮಾಡುತ್ತಿವೆ. ಕೃಷಿಕರು ತಾವು ಬೆಳೆದ ಭತ್ತ ಮತ್ತು ಜೋಳ, ಸುವರ್ಣಗಡ್ಡೆ ರಾಗಿ, ಗೆಣಸು ಎಲ್ಲಾ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.

ಕೆಲವು ಕಡೆ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ 3 ವರ್ಷಗಳ ಹಿಂದೆ ಚಿಕ್ಕಾರ ಗ್ರಾಮದಿಂದ ದೊಡ್ಡಮಳ್ತೆ ಮಾರ್ಗವಾಗಿ ವಳಗುಂದದವರಗೆ ಅರಣ್ಯದಂಚಿನಲ್ಲಿ 4 ಕಿ.ಮೀ. ಆನೆ ಕಂದಕ ನಿರ್ಮಿಸಲಾಗಿದೆ. ಕೆಲ ಭಾಗದಲ್ಲಿ ಕಲ್ಲುಬಂಡೆ ಸಿಕ್ಕಿದ ಕಡೆ ಕಂದಕ ಮಾಡಿಲ್ಲ. ಈಗ ಕೆಲ ಕಡೆ ಕಂದಕದಲ್ಲಿ ಹೂಳು ತುಂಬಿರುವ ಕಾರಣ ಕಾಡಾನೆಗಳು ಕಂದಕ ದಾಟಿ ಗ್ರಾಮ ಸೇರುತ್ತಿವೆ. ಕಂದಕ ದುರಸ್ತಿಪಡಿಸದ ಹೊರತು ಕಾಡಾನೆಗಳ ಕಾಟವನ್ನು ತಡೆಯಲು ಸಾಧ್ಯವಿಲ್ಲ.

ಚಿಕ್ಕಾರ ಗ್ರಾಮದ ಸಮೀಪವಿ ರುವ ಕೆರೆಯಲ್ಲಿ ಹಾಕಿರುವ ಮುಳ್ಳು ಕಂಬಗ ಳನ್ನು ಕಾಡಾನೆಗಳು ಬಗ್ಗಿಸಿ ಚಾಕಚಕ್ಯತೆ ಯಿಂದ ದಾಟಿ, ಗ್ರಾಮ ಸೇರುತ್ತಿವೆ. ಕಾಜೂರು, ಎಡವಾರೆ, ಸಜ್ಜಳ್ಳಿ ಭಾಗದಲ್ಲಿ ಟ್ರಂಚ್ ಮಾಡಿ, ಹ್ಯಾಂಗಿಂಗ್ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿದೆ. ಆದರೂ, ಕಾಡಾನೆಗಳು ತಮ್ಮ ಬುದ್ದಿವಂತಿಕೆ ಉಪಯೋಗಿಸಿಕೊಂಡು ಕೃಷಿ ಭೂಮಿ ತಲುಪುತ್ತಿವೆ. ಈ ಸ್ಥಳದಲ್ಲಿ ಈಗ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಾರಂಭವಾಗಿದೆ.

ಯಡವಾರೆ ಗ್ರಾಮದ ರೈತ ಸಂಘದ ಮುಖಂಡ ಮಚ್ಚಂಡ ಅಶೋಕ್ ಮಾತನಾಡಿ, ‘ಕಾಡಾನೆಗಳ ಹಾವಳಿ ಮಿತಿಮೀರಿತ್ತು. ಈ ಪ್ರದೇಶದಲ್ಲಿ ಸೋಲಾರ್ ಬೇಲಿ ಹಾಕಿ, ಕೆಲವು ಕಡೆ ಟ್ರಂಚ್ ಮಾಡಲಾಗಿದ್ದರೂ, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಈಗ ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿರುವುದರಿಂದ ಸಮಸ್ಯೆ ನೀಗುವ ಭರವಸೆ ಇದೆ. ಇಲಾಖೆಯವರು ಸರಿಯಾದ ಕ್ರಮದಲ್ಲಿ ಹೆಚ್ಚು ದಾಳಿ ಮಾಡುತ್ತಿರುವ ಸ್ಥಳಕ್ಕೆ ಬ್ಯಾರಿಕೇಡ್ ಅಳವಡಿಸಬೇಕಿದೆ. ನಂತರವೂ ಸರಿಯಾಗಿ ನಿರ್ವಹಣೆ ಮಾಡಬೇಕಿದೆ’ ಎಂದರು.

ರೈಲ್ವೆ ಬ್ಯಾರಿಕೇಡ್ ಎಲ್ಲ ಪ್ರದೇಶಕ್ಕೂ ಸೂಕ್ತವಲ್ಲ

ಅರಣ್ಯ ಇಲಾಖೆಯ ಆರ್‌ಎಫ್‍ಓ ಚೇತನ್ ಮಾತನಾಡಿ, ‘ರೈಲ್ವೆ ಬ್ಯಾರಿಕೇಡ್ ಎಲ್ಲ ಪ್ರದೇಶಕ್ಕೂ ಸೂಕ್ತವಾಗಿಲ್ಲ. ಅದು ಕೇವಲ ಸಮತಟ್ಟಾದ ಸ್ಥಳಕ್ಕೆ ಪ್ರಯೋಜನಕ್ಕೆ ಬರುತ್ತದೆ. ತಾಲ್ಲೂಕಿನ ಕಾಜೂರು, ಯಡವಾರೆ, ಸಜ್ಜಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮೀಸಲು ಅರಣ್ಯದಲ್ಲಿ ಕಾಡಾನೆಗಳ ವಾಸ್ತವ್ಯ ಇದೆ. ಈ ಪ್ರದೇಶದಲ್ಲಿ ಸುಮರು 4.5 ಕಿಮೀ ಸ್ಥಳಕ್ಕೆ ₹ 5.6 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸ ಪ್ರಾರಂಭವಾಗಿದೆ. ಟಾಟಾ ಕಾಫಿ ಸಂಸ್ಥೆಯ ಕಾಫಿ ತೋಟಕ್ಕೆ ಹೊಂದಿಕೊಂಡಂತೆ ಇರುವ ಮೀಸಲು ಅರಣ್ಯದಿಂದ ಕಾಮಗಾರಿ ಪ್ರಾರಂಭವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.